May 4, 2024

Bhavana Tv

Its Your Channel

ಕೆ.ಆರ್.ಪೇಟೆ ಕಲ್ಪತರು ಕಾಲೇಜಿನಲ್ಲಿ ಕಲ್ಪತರು ಸಾಂಸ್ಕೃತಿಕ ಉತ್ಸವ

ಕೆ.ಆರ್.ಪೇಟೆ ಕಲ್ಪತರು ಕಾಲೇಜಿನಲ್ಲಿ ಕಲ್ಪತರು ಸಾಂಸ್ಕೃತಿಕ ಉತ್ಸವ… ಪ್ರಥಮ ಬಿಎ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ಹೃದಯಸ್ಪರ್ಶಿ ಸ್ವಾಗತ ಸಮಾರಂಭ..ಮೇಳೈಸಿದ ಸಂಭ್ರಮ..ಬಣ್ಣ ಬಣ್ಣದ ಬಟ್ಟೆತೊಟ್ಟು ಮಿಂಚಿದ ವಿದ್ಯಾರ್ಥಿಗಳು ..

ಕೆ.ಆರ್.ಪೇಟೆ :– ವಿದ್ಯೆಯ ಜ್ಞಾನದ ಬೆಳಕಿನ ಶಕ್ತಿಯು ಸಾಮಾಜಿಕ ಅಸಮಾನತೆಯನ್ನು ಹೊಡೆದೋಡಿಸುವ ಪ್ರಬಲವಾದ ಅಸ್ತ್ರವಾಗಿದೆ. ಆದ್ದರಿಂದ ಯುವಜನರು ಹಾಗೂ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ ಗುರಿ ಮುಟ್ಟಬೇಕು ಎಂದು ಕೆ.ಆರ್.ಪೇಟೆ ಪಟ್ಟಣದ ಕೃಷ್ಣರಾಜ ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿ ಎಸ್.ಬಿ.ಲೋಕೇಶ್ ಹೇಳಿದರು.

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಕಲ್ಪತರು ಪ್ರಥಮದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭ ಹಾಗೂ ಕಲ್ಪತರು ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು..

ವಿದ್ಯೆಯು ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲವಾದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವಜನರು ತಲೆಬಗ್ಗಿಸಿ ಶ್ರದ್ಧಾಭಕ್ತಿಯಿಂದ ವ್ಯಾಸಂಗ ಮಾಡಿದರೆ ಹೆಚ್ಚಿನ ಅಂಕಗಳಿಸಿ ಮುಂದೆ ತಲೆ ಎತ್ತಿ ಸ್ವಾಭಿಮಾನದಿಂದ ಜೀವನ ನಡೆಸುವ ಜೊತೆಗೆ ಸರ್ವಶ್ರೇಷ್ಠ ಸಾಧನೆಯನ್ನು ಸುಲಭವಾಗಿ ಮಾಡಲು ಸಾಧ್ಯವಿದೆ. ಯುವಜನರು ಸ್ವಾರ್ಥಿಗಳಾಗದೇ ಸಮಾಜಮುಖಿಯಾಗಿ ಸೇವಾಮನೋಭಾವನೆ ಹಾಗೂ ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಲೋಕೇಶ್ ಕರೆ ನೀಡಿದರು…

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ವಿಠಲಾಪುರ ಜಯರಾಮು ಮಾತನಾಡಿ ಕಲ್ಪತರು ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ವೃತ್ತಿಕೌಶಲ್ಯ ಮಾರ್ಗದರ್ಶನ ನೀಡಿ ಸ್ವಾವಲಂಭಿ ಜೀವನ ನಡೆಸಲು ಪ್ರೇರೇಪಿಸಿ ಪ್ರೋತ್ಸಾಹಿಸುತ್ತಿದೆ. ಯುವಜನರು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿಹಾಕಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಬೇಕು. ನಾವು ಮಾಡುವ ಕೆಲಸವು ಸಣ್ಣದಾಗಿರಲಿ ಅಥವಾ ದೊಡ್ಡದಿರಲಿ ಶ್ರದ್ಧೆಯಿಂದ ಮಾಡುವ ಮೂಲಕ ಗುರಿಮುಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಿ ಯಶಸ್ವಿಯಾಗಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಕೆ.ಮೋಹನ್, ಕನ್ನಡ ಉಪನ್ಯಾಸಕ ದಮ್ಮನಿಂಗಳ ಮಂಜುನಾಥ್, ಪುರಸಭಾ ಸದಸ್ಯ ಕೆ.ಆರ್.ನೀಲಕಂಠ, ಕಾಲೇಜಿನ ಪ್ರಾಂಶುಪಾಲ ನಾಗೇಗೌಡ, ಉಪನ್ಯಾಸಕರಾದ ಭುವನೇಶ್ವರ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ನಾಡಿನ ಖ್ಯಾತ ಯೋಗಪಟು ಅಲ್ಲಮಪ್ರಭು ಅವರನ್ನು ಇದೇ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ರಂಜಿಸಿತು. ವಿದ್ಯಾರ್ಥಿ ನಾಯಕರಾದ ಜಯಕುಮಾರ್, ರಕ್ಷಿತಾ, ಹರ್ಷಿತಾ ಕಾರ್ಯಕ್ರಮ ನಡೆಸಿಕೊಟ್ಟರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: