May 6, 2024

Bhavana Tv

Its Your Channel

ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯಿಂದ ಬೇಸಾಯ ಮಾಡಿದರೆ ರೈತರ ಬದುಕು ಬಂಗಾರ:

ಕೆ.ಆರ್.ಪೇಟೆ ; ರಸ ಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಅತಿಯಾಗಿ ಬಳಸಿ ಬೇಸಾಯ ಮಾಡುವುದರಿಂದ ಭೂಮಿಯು ಬಂಜರಾಗುವುದಲ್ಲದೆ ಫಲವತ್ತತೆ ನಾಶವಾಗಿ ಬೇಸಾಯ ಚಟುವಟಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ ಸಾವಯವ ಚಟುವಟಿಕೆಗಳನ್ನು ಕೈಗೊಂಡು ನೈಸರ್ಗಿಕ ಪದ್ಧತಿಯಲ್ಲಿ ಬೇಸಾಯ ಮಾಡಿದರೆ ರೈತನ ಬದುಕು ಬಂಗಾರವಾಗುತ್ತದೆ ಎಂದು ಮಂಡ್ಯದ ಕೃಷಿಕ ಲಯನ್ ಸಂಸ್ಥೆಯ ಆಡಳಿತಾಧಿಕಾರಿ ಲಯನ್ ಕೆ.ಟಿ.ಹನುಮಂತು ಹೇಳಿದರು.
ಅವರು ಕೆ.ಆರ್.ಪೇಟೆ ತಾಲೂಕಿನ ವಿಠಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಯವ ನೈಸರ್ಗಿಕ ಕೃಷಿಕ ವಿಠಲಪುರ ಸುಬ್ಬೇಗೌಡ ಅವರ ತೋಟದಲ್ಲಿ ಕೃಷಿಕ ಲಯನ್ ಸಂಸ್ಥೆ, ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಹಾಗೂ ಸಕ್ಕರೆ ನಾಡು ಲಯನ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಗತಿಪರ ರೈತ ಸುಬ್ಬೇಗೌಡರಿಗೆ ತೋಟಗಾರಿಕೆ ಪಿತಾಮಹ ಡಾ. ಎಂ.ಎಚ್. ಮರಿಗೌಡ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು..
ಅತಿಯಾದ ಇಳುವರಿಯ ಆಸೆಗಾಗಿ ರೈತರು ಅವೈಜ್ಞಾನಿಕವಾಗಿ ಬೇಸಾಯ ಮಾಡಿ ಮಿತಿ ಇಲ್ಲದಂತೆ ರಾಸಾಯನಿಕ ಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆಯು ನಾಶವಾಗುವುದಲ್ಲದೆ ಇಳುವರಿಯು ಕಡಿಮೆಯಾಗಿ ರೈತನು ಸಂಕಷ್ಟಕ್ಕೆ ಸಿಕ್ಕಿ ನರಳ ಬೇಕಾಗುತ್ತದೆ. ಆದ್ದರಿಂದ ರೈತನಿಗೆ ವರದಾನವಾಗಿರುವ ಸಾವಯವ ಕೃಷಿ ಚಟುವಟಿಕೆಗಳನ್ನು ಕೈಗೊಂಡು ಕಡಿಮೆ ಖರ್ಚಿನಲ್ಲಿ ಬೇಸಾಯ ಮಾಡುವ ಜೊತೆಗೆ ಗುಣಮಟ್ಟದ ಆಹಾರ ಪದಾರ್ಥಗಳ ಉತ್ಪಾದನೆ ಮಾಡುವುದರಿಂದ ನಾವು ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ದರವನ್ನು ಪಡೆಯುವುದಲ್ಲದೆ, ಭೂಮಿಯ ಫಲವತ್ತತೆಯನ್ನು ಕೂಡ ಕಾಪಾಡಿಕೊಂಡು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ ಲಯನ್ ಹನುಮಂತು ಇಂದು ಕೃಷಿಯು ರೈತರಿಗೆ ಲಾಭವನ್ನು ತಂದು ಕೊಡುವ ಬದಲಿಗೆ ನಷ್ಟದ ಉದ್ಯಮವಾಗಿ ಮಾರ್ಪಟ್ಟಿದೆ. ಅನ್ನದಾತನಾದ ರೈತ ಕೃಷಿ ಚಟುವಟಿಕೆಯಿಂದ ನಷ್ಟವನ್ನು ಹೊಂದುವ ಮೂಲಕ ಸಾಲದ ಬಾಧೆಯನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಕೃಷಿಯಿಂದ ದೂರವಾಗುತ್ತಿರುವ ರೈತನನ್ನು ಮರಳಿ ಬೇಸಾಯ ಚಟುವಟಿಕೆಗಳತ್ತ ಕರೆ ತರಬೇಕಾದರೆ ನಾವು ಅನಿವಾರ್ಯವಾಗಿ ಸಾವಯವ ಹಾಗೂ ನೈಸರ್ಗಿಕ ಪದ್ಧತಿಯಲ್ಲಿ ಬೇಸಾಯ ಮಾಡುವುದು ಇಂದಿನ ಅಗತ್ಯವಾಗಿದೆ. ಕಳೆದ ೨೫ ವರ್ಷಗಳಿಂದ ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಚಕ್ಕೆ ಲವಂಗ ಜಾಯಿಕಾಯಿ, ಕಾಫಿ, ಮೆಣಸು ಏಲಕ್ಕಿ, ತೆಂಗು, ಅಡಿಕೆ, ಕೊಕ್ಕೋ, ಜಾಪತ್ರೆ ಸಿಬೆ ಸಪೋಟ ಪಪ್ಪಾಯ ಸೇರಿದಂತೆ ೨೨ ಬಗೆಯ ಕೃಷಿ ಹುಟ್ಟುಗಳ ಬೇಸಾಯ ಮಾಡುತ್ತಿರುವ ವಿಠಲಾಪುರ ಸುಬ್ಬೇಗೌಡರು ಬೇಸಾಯವನ್ನು ಹೇಗೆ ಮಾಡಬೇಕು ಎಂಬುದನ್ನು ಸಾಧಿಸಿ ನಾಡಿನ ರೈತರಿಗೆ ತೋರಿಸಿಕೊಟ್ಟಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ಕೈಗೊಂಡಿರುವ ಇವರ ಪ್ರಾಮಾಣಿಕ ಬದ್ಧತೆ ಹಾಗೂ ಕಳಕಳಿಯನ್ನು ಗುರುತಿಸಿ ಡಾ. ಎಂ.ಎಚ್.ಮರಿಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಅಭಿಮಾನದಿಂದ ಹೇಳಿದರು.

ಕೆ.ಆರ್. ಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಪ್ರಗತಿಪರ ಕೃಷಿಕರಾದ ಕೆ.ಎಸ್. ಸೋಮಶೇಖರ್ ವಿಠಲಾಪುರ ಸಿದ್ದೇಗೌಡ ಅವರನ್ನು ಅಭಿನಂದಿಸಿ ಮಾತನಾಡಿ ಭೂಮಿತಾಯಿಯನ್ನು ನಂಬಿ ಶ್ರದ್ಧಾ ಭಕ್ತಿಯಿಂದ ಬೇಸಾಯ ಮಾಡುತ್ತಿರುವ ಸುಬ್ಬೇಗೌಡರು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿ ಕೊಂಡಿದ್ದಾರೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ವಾರ್ಷಿಕ ಲಕ್ಷಗಟ್ಟಲೆ ಆದಾಯ ಸಂಪಾದನೆ ಮಾಡುತ್ತಿರುವ ಸುಬ್ಬೇಗೌಡರು ಸಾವಯವ ಹಾಗೂ ನೈಸರ್ಗಿಕ ಪದ್ಧತಿಯಲ್ಲಿ ಬೇಸಾಯ ಮಾಡಲು ಮುಂದೆ ಬರುವ ರೈತ ಬಂಧುಗಳಿಗೆ ಮಾರ್ಗದರ್ಶಿಯಾಗಿ, ಕೃಷಿ ಚಟುವಟಿಕೆಗಳಿಂದ ಲಾಭವನ್ನು ಸಂಪಾದನೆ ಮಾಡುವ ಬಗ್ಗೆ ಮಾಹಿತಿಯನ್ನು ನೀಡುತ್ತಾ ನಾಗರೀಕ ಸಮಾಜವೇ ಮೆಚ್ಚು ವಂತಹ ಕೆಲಸ ಮಾಡುತ್ತಿದ್ದಾರೆ. ಸುಬ್ಬೇಗೌಡರಿಗೆ ತೋಟಗಾರಿಕಾ ಪಿತಾಮಹ ಡಾಕ್ಟರ್ ಮರಿಗೌಡ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಪ್ರಶಸ್ತಿಯ ತೂಕವನ್ನು ಹೆಚ್ಚಿಸಿದೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಸಾವಯವ ಕೃಷಿಕ ವಿಠಲಾಪುರ ಸುಬ್ಬೆಗೌಡ ಮಾತನಾಡಿ ಕಾಡಿನಂತಿದ್ದ ಈ ಭೂ ಪ್ರದೇಶದಲ್ಲಿ ನನ್ನ ಪತ್ನಿ ಹಾಗೂ ನನ್ನ ಮಕ್ಕಳ ಸಹಾಯದಿಂದ ಕಷ್ಟಪಟ್ಟು ಶ್ರದ್ಧೆಯಿಂದ ಬೇಸಾಯ ಮಾಡಿ ಮಲೆನಾಡಿನಲ್ಲಿ ಬೆಳೆಯುವ ಕಾಫಿ, ಏಲಕ್ಕಿ, ಕರಿಮೆಣಸು, ಜಾಯಿಕಾಯಿ, ಮೋಸಂಬಿ, ಚಕ್ಕೆ, ಲವಂಗ ಮುಂತಾದ ಪದಾರ್ಥಗಳನ್ನು ನಾನು ನಮ್ಮ ಭೂಮಿಯಲ್ಲಿಯೇ ಬೆಳೆದು ವಾರ್ಷಿಕ ಲಕ್ಷಗಟ್ಟಲೆ ಆದಾಯ ಸಂಪಾದನೆ ಮಾಡುತ್ತಿದ್ದೇನೆ. ನನ್ನ ಶ್ರಮದ ದುಡಿಮೆಯನ್ನು ಗೌರವಿಸಿ ಮಂಡ್ಯದ ಲಯನ್ಸ್ ಸೇವಾ ಸಂಸ್ಥೆಯು ತೋಟಗಾರಿಕಾ ಪಿತಾಮಹ ಮರಿಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ನನಗೆ ಸಂತೋಷ ತಂದಿದೆ. ನನ್ನ ಏಳಿಗೆ ಹಾಗೂ ಅಭ್ಯುದಯಕ್ಕಾಗಿ ದುಡಿದ ಕೃಷಿ ಕೂಲಿ ಕಾರ್ಮಿಕರು ಹಾಗೂ ನನ್ನ ಕುಟುಂಬ ವರ್ಗದವರಿಗೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ ಎಂದು ಸುಬ್ಬೆಗೌಡ ಹೇಳಿದರು.

ಹಿರಿಯ ಪತ್ರಕರ್ತರಾದ ಬಳ್ಳೇಕೆರೆ ಮಂಜುನಾಥ್, ಕೆ. ಆರ್.ನೀಲಕಂಠ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್ ಸುಬ್ಬೇಗೌಡರ ಜೀವನ ಸಾಧನೆಯನ್ನು ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡ್ಯದ ಕೃಷಿಕ ಲಯನ್ ಸಂಸ್ಥೆ ಅಧ್ಯಕ್ಷ ಕೆ.ಪಿ. ವೀರಪ್ಪ ಮಾತನಾಡಿ ರೈತರ ಜೀವನದ ಹಾರ್ದಿಕ ಮಟ್ಟವು ಸುಧಾರಿಸಲು ತೋಟಗಾರಿಕೆ ವೃತ್ತಿಯು ವರದಾನ ಎಂಬ ಸತ್ಯವನ್ನು ನಾಡಿಗೆ ಪರಿಚಯಿಸಿದ ಮರಿಗೌಡರ ಹೆಸರಿನ ಪ್ರಶಸ್ತಿಯನ್ನು ನಾಡಿನ ಸಾವಯವ ಹಾಗೂ ನೈಸರ್ಗಿಕ ಕೃಷಿಕರಾದ ಸುಬ್ಬೇಗೌಡರನ್ನು ಗುರುತಿಸಿ ನೀಡುತ್ತಿರುವುದು. ನಮ್ಮ ಸಂಸ್ಥೆಯ ಹಿರಿಮೆಗೆ ಗರಿ ಮೂಡಿಸಿದಂತಾಗಿದೆ. ನಾವು ಮಾಡುವ ಯಾವುದೇ ವೃತ್ತಿಯನ್ನು ಗೌರವಿಸಿ ಶ್ರದ್ಧೆಯಿಂದ ಮಾಡಿದರೆ ಖಂಡಿತವಾಗಿಯೂ ಅಭಿವೃದ್ಧಿ ಹೊಂದಲು ಸಾಧ್ಯ ಎಂಬುದನ್ನು ಪ್ರಗತಿಪರ ರೈತರಾದ ಸುಬ್ಬೆಗೌಡರು ಸಾಧಿಸಿ ತೋರಿಸಿದ್ದಾರೆ. ಜಿಲ್ಲಾ ಹಾಗೂ ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸುಬ್ಬೇಗೌಡರಿಗೆ ಕೃಷಿಕ ಲಯನ್ ಸಂಸ್ಥೆ ವತಿಯಿಂದ ತೋಟಗಾರಿಕಾ ಪಿತಾಮಹ ಡಾ. ಎಂ.ಎಚ್.ಮರಿಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಸುಬ್ಬೇ ಗೌಡರ ತೋಟದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ರೈತ ಬಾಂಧವರು ಸೇರಿರುವುದು ನಮ್ಮ ಶ್ರಮಕ್ಕೆ ಸಾರ್ಥಕ ಮನೋಭಾವನೆಯನ್ನು ಮೂಡಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಡ್ಯದ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ. ಡೇವಿಡ್, ಜಿಲ್ಲಾ ಲಯನ್ಸ್ ನಾಯಕ ಈಚೆಗೆರೆ ಕೆ.ಆರ್. ಶಶಿಧರ್, ಎಸ್.ಎನ್.ಕೃಷ್ಣಪ್ಪ , ಖಜಾಂಚಿ ರಮೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಅಮೂಲ್ಯ, ಉದ್ಯಮಿ ಬಿ.ರಾಜಶೇಖರ್, ಸಕ್ಕರೆ ನಾಡು ಲಯನ್ ಸಂಸ್ಥೆಯ ಅಧ್ಯಕ್ಷ ಮದ್ದನಘಟ್ಟ ಮಹಾಲಿಂಗೇಗೌಡ ಸೇರಿದಂತೆ ನೂರಾರು ರೈತ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ ಡಾ. ಕೆ.ಆರ್.ನೀಲಕಂಠ ಕೃಷ್ಣರಾಜಪೇಟೆ, ಮಂಡ್ಯ .

error: