
ಕೆ.ಆರ್.ಪೇಟೆ ; ಪಟ್ಟಣದಲ್ಲಿ ೧೫ ಕೋಟಿ ರೂ ವೆಚ್ಚ ಮಾಡಿ ನಿರ್ಮಿಸಿದ್ದ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಪುಟಾಣಿ ಮಕ್ಕಳು ಹಾಗೂ ಕ್ರೀಡಾಪಟುಗಳ ಅನುಕೂಲಕ್ಕಾಗಿ ಹಾಕಿಸಿದ್ದ ಹುಲ್ಲುಹಾಸನ್ನು ಇಂದು ಏಕಾಏಕಿ ರನ್ನಿಂಗ್ ಟ್ರ‍್ಯಾಕ್ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ತೆಗೆಸಿ ಹಾಕಿದ ಘಟನೆಯಿಂದ ಪಟ್ಟಣದ ನಿವಾಸಿಗಳು ಹಾಗೂ ಕ್ರೀಡಾಪಟುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ..
ಆಗಸ್ಟ್ ೧೫ನೇ ತಾರೀಕು ಭಾರತ ಸ್ವಾತಂತ್ರೋತ್ಸವ ಸಮಾರಂಭ ಇರುವ ಹಿನ್ನೆಲೆಯಲ್ಲಿ ಶಾಸಕರು ಗೌರವ ವಂದನೆ ಸ್ವೀಕರಿಸಲು ಜಿಪಿನಲ್ಲಿ ಸಂಚರಿಸಲು ಅನುಕೂಲವಾಗುವಂತೆ ಲಕ್ಷಾಂತರ ರೂ ಹಣ ಖರ್ಚು ಮಾಡಿ ನಿರ್ಮಿಸಿದ್ದ ಹುಲ್ಲು ಹಾಸನ್ನು ತೆರವು ಗೊಳಿಸಲಾಗುತ್ತಿದೆ. ಈ ಬಗ್ಗೆ ಮಂಡ್ಯ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಓಂಪ್ರಕಾಶ್ ಅವರನ್ನು ಪ್ರಶ್ನಿಸಿದಾಗ ಕ್ರೀಡಾಂಗಣ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಎಚ್. ಟಿ.ಮಂಜು ಅವರ ಆದೇಶದಂತೆ ಹುಲ್ಲು ಹಾಸನ್ನು ತೆರವು ಮಾಡಿಸುತ್ತಿದ್ದೇವೆ. ಸದ್ಯದಲ್ಲಿಯೇ ಸ್ವಾತಂತ್ರೋತ್ಸವ ಸಮಾರಂಭವಿದೆ ಆ ಕಾರ್ಯಕ್ರಮದ ನಂತರ ಕ್ರೀಡಾಪಟುಗಳ ಅನುಕೂಲಕ್ಕಾಗಿ ಸಿಂಥೆಟಿಕ್ ರನ್ನಿಂಗ್ ಟ್ರ‍್ಯಾಕ್ ನಿರ್ಮಿಸುವ ಉದ್ದೇಶ ಹೊಂದಿದ್ದೇವೆ. ಶಾಸಕರ ಆದೇಶದಂತೆ ನಾವು ಹುಲ್ಲುಹಾಸನ್ನು ತೆರವುಗಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು..
ಲಕ್ಷಾಂತರ ರೂ ಹಣವನ್ನು ಖರ್ಚು ಮಾಡಿ ಒಳಾಂಗಣ ಕ್ರೀಡಾಂಗಣದ ಸುತ್ತಲೂ ಹುಲ್ಲು ಹಾಸನ್ನು ವಿಶೇಷವಾಗಿ ನಿರ್ಮಿಸಲಾಗಿತ್ತು. ಈ ಹುಲ್ಲು ಹಾಸಿನ ಮೇಲೆ ಪ್ರತಿದಿನ ನೂರಾರು ಮಕ್ಕಳು ಮಹಿಳೆಯರು ಹಾಗೂ ಹಿರಿಯ ನಾಗರಿಕರು ವಿಶ್ರಾಂತಿ ಪಡೆಯುತ್ತಿದ್ದರು. ಈಗ ಏಕಾಏಕಿ ಸ್ವಾತಂತ್ರೋತ್ಸವ ಧ್ವಜ ವಂದನೆ ಸ್ವೀಕರಿಸುವ ನೆಪದಲ್ಲಿ ಹುಲ್ಲು ಹಾಸನ್ನು ನಾಶಪಡಿಸಿದ ಶಾಸಕರ ಕ್ರಮಕ್ಕೆ ಸಾರ್ವಜನಿಕರು ಯುವಜನರು ಹಾಗೂ ಕ್ರೀಡಾಪಟುಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪುರಸಭಾ ಅಧ್ಯಕ್ಷೆ ಮಹಾದೇವಿ ಮಾತನಾಡಿ ಸ್ವಾತಂತ್ರೋತ್ಸವ ಸಮಾರಂಭವನ್ನು ಆಚರಿಸಲು ಪುರಸಭಾ ಕಾರ್ಯಾಲಯದ ಪಕ್ಕದಲ್ಲಿ ವಿಶಾಲವಾದ ಮೈದಾನವಿತ್ತು. ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳು ಸಂಭ್ರಮಯುತವಾಗಿ ನಡೆದಿವೆ. ಹೀಗಿರುವಾಗ ಸ್ವಾತಂತ್ರ‍್ಯೋತ್ಸವದ ಆಚರಣೆಯ ನೆಪದಲ್ಲಿ ಶಾಸಕರು ಧ್ವಜ ವಂದನೆ ಸ್ವೀಕರಿಸಲು ಲಕ್ಷಾಂತರ ರು ಹಣ ಖರ್ಚು ಮಾಡಿ ನಿರ್ಮಿಸಿರುವ ಹುಲ್ಲು ಹಾಸನ್ನು ನಾಶಪಡಿಸುವುದು ಸರಿಯಲ್ಲ. ಶಾಸಕರ ಈ ದುಡುಕಿನ ನಿರ್ಧಾರವು ಸಾರ್ವಜನಿಕರು ಹಾಗೂ ಕ್ರೀಡಾ ಪ್ರೇಮಿಗಳಲ್ಲಿ ತೀವ್ರ ಬೇಸರವನ್ನುಂಟು ಮಾಡಿದೆ. ಸರ್ಕಾರದ ಹಣವನ್ನು ಯಾರೇ ಆಗಲಿ ಈ ರೀತಿ ಪೋಲು ಮಾಡುವುದು ಸರಿಯಲ್ಲ, ಈ ಕೆಲಸಕ್ಕೆ ನನ್ನ ಆಕ್ಷೇಪವಿದೆಯೆಂದು ಮಹಾದೇವಿ ಹೇಳಿದರು.
ವರದಿ: ಡಾ. ಕೆ.ಆರ್.ನೀಲಕಂಠ ಕೃಷ್ಣರಾಜಪೇಟೆ, ಮಂಡ್ಯ
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ