ಮಳವಳ್ಳಿ ; ಕರೋನಾ ಹಾವಳಿಯಿಂದ ಜನ ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಪೆಟ್ರೋಲ್ ಡೀಸೆಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸುವ ಮೂಲಕ ಜನರನ್ನು ಕಿತ್ತುತಿನ್ನುವ ಕೆಲಸವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಸಚಿವ ಪಿ ಎಂ ನರೇಂದ್ರಸ್ವಾಮಿ ಸರ್ಜಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ, ಭ್ರಷ್ಟ ಆಡಳಿತದ ವಿರುದ್ದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸೈಕಲ್ ಜಾಥದ ನೇತೃತ್ವ ವಹಿಸಿ ಮಾತನಾಡಿದ ಅವರು ಹಿಂದೆ ಕೇಂದ್ರದಲ್ಲಿನ ಯುಪಿಎ ಸರ್ಕಾರ ಪೆಟ್ರೋಲ್ ದರವನ್ನು ಕೇವಲ ೧೨ ಪೈಸೆ ಏರಿಕೆ ಮಾಡಿದಾಗ ಈಗಿನ ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಮುಂತಾದ ಬಿಜೆಪಿ ನಾಯಕರು ದೇಶದಲ್ಲಿ ದೊಡ್ಡ ಕೋಲಾಹಲ ವನ್ನೇ ಸೃಷ್ಟಿಸಿದ್ದರು ಆದರೆ ೬೪ ರೂ ಇದ್ದ ಪೆಟ್ರೋಲ್ ದರ ಈಗ ೧೦೫ರೂ ಮುಟ್ಟಿ ದ್ದರೂ ಜನಸಾಮಾನ್ಯರ ಪರ ಯಾರೂ ಸಹ ದನಿ ಎತ್ತುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ರೈತರು ಬಡವರು ಜನಸಾಮಾನ್ಯರ ಬದುಕನ್ನು ನರಕ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ದನಿ ಎತ್ತ ಬೇಕಾದ ರಾಜ್ಯದಲ್ಲಿನ ಪ್ರಾದೇಶಿಕ ಪಕ್ಷದ ನಾಯಕರು ಅಡಳಿತ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಜುಗಲ್ ಬಂದಿ ಆಡುತ್ತಿದ್ದು ಈ ಇವರ ಬಗ್ಗೆ ಸಹ ಜನ ಎಚ್ಚರಿಕೆಯಿಂದ ಇರಬೇಕು ಎಂದು ಜೆಡಿಎಸ್ ನಾಯಕರ ವಿರುದ್ದ ಟೀಕಾ ಪ್ರಹಾರ ನಡೆಸಿದರು.
ಸತ್ತೇಗಾಲ ಸೇತುವೆ ಬಳಿಯಿಂದ ಸುರಂಗ ಮಾರ್ಗವಾಗಿ ಇಗ್ಲೂರು ಡ್ಯಾಮ್ ಗೆ ೨೧೨ ಕ್ಯೂಸೆಕ್ಸ್ ನೀರು ತೆಗೆದುಕೊಂಡು ಹೋಗಿ ಅಲ್ಲಿಂದ ಕಣ್ವ ಹಾಗೂ ಇತರೆ ಜಲಾಶಯಗಳಿಗೆ ನೀರು ತೆಗೆದುಕೊಂಡು ಹೋಗುವ ಹುನ್ನಾರ ನಡೆಸಿದ್ದು ಆದರೆ ಮಳವಳ್ಳಿ ಭೇಟಿ ವೇಳೆ ಆ ಪಕ್ಷದ ನಾಯಕರು ಮಳವಳ್ಳಿ ಮದ್ದೂರಿಗೆ ನೀರು ಒದಗಿಸುವುದಾಗಿ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಿ ಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ನರೇಂದ್ರಸ್ವಾಮಿ ಮಳವಳ್ಳಿಗೂ ನೀರು ಕೊಡುವಂತೆ ಕ್ಷೇತ್ರದ ಶಾಸಕ ಪತ್ರಕರ್ತರ ಮುಂದೆ ಭಿಕ್ಷೆ ಬೇಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಜಿ ಪಂ ಸದಸ್ಯರಾದ ಸುಜಾತ ಕೆ ಎಂ ಪುಟ್ಟು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೇವರಾಜು, ಸುಂದರ್ ರಾಜ್, ಮಾಜಿ ತಾ ಪಂ ಅಧ್ಯಕ್ಷರಾದ ಪುಟ್ಟಸ್ವಾಮಿ, ಆರ್ ಎನ್ ವಿಶ್ವಾಸ್, ವಿ ಎಂ ನಾಗೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ರಾದ ಕುಳ್ಳಚೆನ್ನಂಕಯ್ಯ, ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು,
ಇದಕ್ಕೂ ಮೊದಲು ಪಟ್ಟಣದ ರಾಗಿಬೊಮ್ಮನ ಹಳ್ಳಿ ಗೇಟ್ ನಿಂದ ಮೈಸೂರು ರಸ್ತೆಯುದ್ದಕ್ಕೂ ಬೃಹತ್ ಸೈಕಲ್ ಜಾಥಾ ಹಾಗೂಎತ್ತಿನ ಗಾಡಿಗಳ ಜಾಥಾ ನಡೆಯಿತು, ಸ್ವತಃ ಸೈಕಲ್ ಏರಿದ ಮಾಜಿ ಸಚಿವ ನರೇಂದ್ರಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ಪೇಟೆ ವೃತ್ತವನ್ನು ಜಾಥಾ ತಲುಪುತ್ತಿದ್ದಂತೆ ಅಲ್ಲಿ ಕೆಲ ಕಾಲ ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ವರದಿ : ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ