ಮಳವಳ್ಳಿ : ಅತೀ ವೇಗವಾಗಿ ಬಸ್ನ್ನು ಓಡಿಸಿಕೊಂಡು ಬರುತ್ತಿದ್ದ ಚಾಲಕ ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಗಾಯಗೊಳಿಸಿರುವುದೇ ಅಲ್ಲದೇ ಪರಾರಿಯಾಗುತ್ತಿದ್ಷ ಬಸ್ಸನ್ನು ತಡೆಯಲೆತ್ನಿಸಿದ ಪೊಲೀಸ್ ಜೀಪ್ ಗೂ ಡಿಕ್ಕಿ ಹೊಡೆದು ಜೀಪ್ ನ್ನು ತೀವ್ರವಾಗಿ ಜಖಂಗೊಳಿಸಿರುವ ಆಘಾತಕಾರಿ ಘಟನೆ ಜರುಗಿದೆ.
ಬುಧವಾರ ಮಧ್ಯರಾತ್ರಿ ೧.೩೦ ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಬಳಿಯ ಹೆದ್ದಾರಿ ರಸ್ತೆಯಲ್ಲಿ ಶ್ರೀನಿವಾಸ್ ಎಂಬ ಮುಖ್ಯ ಆರಕ್ಷಕ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೈಸೂರಿನಿಂದ ಮಳವಳ್ಳಿ ಮಾರ್ಗವಾಗಿ ಕೊಳ್ಳೇಗಾಲ ಕಡೆಗೆ ಹೋಗುತ್ತಿದ್ದ
ಎಸ್.ವಿ.ಎಸ್.ಎಂ.ಎಸ್ ಎಂಬ ಖಾಸಗಿ ಬಸ್ನ್ನು ಅತೀ ವೇಗವಾಗಿ ಓಡಿಸಿಕೊಂಡು ಬಂದ ಚಾಲಕ ಶ್ರೀನಿವಾಸ್ ಅವರಿಗೆ ಡಿಕ್ಕಿ ಹೊಡೆಸಿದ್ದೇ ಅಲ್ಲದೇ ಬಸ್ನ್ನು ನಿಲ್ಲಿಸದೆ ಇನ್ನಷ್ಟು ವೇಗವಾಗಿ ಓಡಿಸಿಕೊಂಡು ಪರಾರಿಯಾಗ ಯತ್ನಿಸಿದ ಎನ್ನಲಾಗಿದೆ.
ಹೆದ್ದಾರಿ ಗಸ್ತಿನಲ್ಲಿದ್ದ ಎ ಎಸ್ ಐ ಹುಚ್ಚಪ್ಪ ಹಾಗೂ ಚಾಲಕ ನಾಗಯ್ಯ ಅವರು ತಮ್ಮ ಗಸ್ತು ಜೀಪ್ನಲ್ಲಿ ಬಸ್ಸನ್ನು ಹಿಂಬಾಲಿಸಿ ಹೊಸದೊಡ್ಡಿ ಬಳಿ ಬಸ್ಸನ್ನು ಅಡ್ಡಗಟ್ಟುವ ಯತ್ನದಲ್ಲಿ ಇದ್ದಾಗ ಪೊಲೀಸ್ ಜೀಪ್ಗೆ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಜೀಪ್ ರಸ್ತೆ ಬದಿಗೆ ಪಲ್ಟಿ ಹೊಡೆದು ತೀವ್ರವಾಗಿ ಜಖಂ ಗೊಂಡಿತಲ್ಲದೆ ಜೀಪ್ನಲ್ಲಿದ್ದ ಎಎಸ್ಐ ಹುಚ್ಚಪ್ಪ ಹಾಗೂ ಚಾಲಕ ನಾಗಯ್ಯ ಅವರು ತೀವ್ರವಾಗಿ ಗಾಯ ಗೊಂಡಿದ್ದಾರೆ ಎಂದು ವರದಿ ಯಾಗಿದೆ.
ಬಸ್ ಇನ್ನಷ್ಟು ರಭಸವಾಗಿ ಡಿಕ್ಕಿ ಹೊಡೆದಿದ್ದರೆ ಜೀಪ್ ನಲ್ಲಿದ್ದ ಇಬ್ಬರು ಶವವಾಗಿ ಹೋಗುತ್ತಿ ದ್ದರು ಎನ್ನಲಾಗಿದೆ.ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ವೆಸಗಿದ ನಂತರ ಚಾಲಕ ಬಸ್ ನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದರಿ ಬಸ್ಸು ಚಾಮರಾಜ ನಗರದ ಬಸ್ ಮಾಲೀಕರೊಬ್ಬರಿಗೆ ಸೇರಿದ್ದು ಎಂದು ಗೊತ್ತಾಗಿದ್ದು ಮೈಸೂರಿನಲ್ಲಿ ಬಸ್ನ್ನು ನಿಲ್ಲಿಸಿದ್ದ ವೇಳೆ ಕಳುವು ಮಾಡಿಕೊಂಡು ಪರಾರಿಯಾಗುತ್ತಿದ್ದ ದುಷ್ಕರ್ಮಿ ಯೋರ್ವ ತಡೆಯಲು ಬಂದ ಪೊಲೀಸರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆಯಾದರೂ ಬಸ್ ಕಳ್ಳತನವಾಗಿರುವ ಕುರಿತು ಯಾವುದೇ ದೂರು ದಾಖಲಾ ಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಸ್ ನ್ನು ತಮ್ಮ ವಶಕ್ಕೆ ಪಡೆದಿರುವ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ಡಾ. ಅಶ್ವಿನಿ, ಅಡಿಷನಲ್ ಎಸ್ಪಿ ಧನಂಜಯ್ ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್, ಸರ್ಕಲ್ ಇನ್ಸ್ ಪೆಕ್ಟರ್ ಎ ಕೆ ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವರದಿ : ಬಿ. ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ.
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ