ಮಳವಳ್ಳಿ : ಜನರಿಗೆ ಬೇಕು ಎಂದಾಗ ಬಸ್ಸು ಇರಲ್ಲ, ಬಸ್ಸುಗಳು ಸಾಲುಗಟ್ಟಿ ನಿಂತಿರುವಾಗ ಜನ ಇರಲ್ಲ. ಇದು ಮಳವಳ್ಳಿ ಬಸ್ ನಿಲ್ದಾಣದ ಸ್ಥಿತಿ ಹಾಗೆ ಮಳವಳ್ಳಿಯ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ಕಾರ್ಯ ವೈಖರಿ.
ಮಳವಳ್ಳಿ ಯಿಂದ ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಜನ ಪ್ರಯಾಣಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಸಮಯದಲ್ಲೂ ಪ್ರಯಾಣಿಕರು ತುಂಬಿರುತ್ತಾರೆ ಎಂದಲ್ಲ. ಪ್ರತೀ ದಿನ ಬೆಳಗಿನ ಜಾವ ೫ ಗಂಟೆಯಿAದಲೇ ಮಳವಳ್ಳಿ ಯಿಂದ ಮೈಸೂರಿಗೆ ಬಸ್‌ಗಳ ಓಡಾಟ ಆರಂಭ ವಾಗುತ್ತದೆ, ೫ರಿಂದ ೭ ಗಂಟೆ ವರೆಗೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೂ ಈ ವೇಳೆ ನಿಲ್ದಾಣದಲ್ಲಿ ಬಸ್ಸುಗಳು ಸಾಲುಗಟ್ಟಿ ನಿಂತಿರುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿರುವ ಬಸ್ಸುಗಳು ನಿಲ್ದಾಣ ಬಿಡುವ ಭರದಲ್ಲಿ ೫-೧೦ ಜನರನ್ನು ಕೂರಿಸಿಕೊಂಡು ಖಾಲಿ ಖಾಲಿ ಹೋಗುತ್ತಿರುತ್ತವೆ.
೭ ಗಂಟೆ ನಂತರ ಬಸ್ ನಿಲ್ದಾಣಕ್ಕೆ ಪ್ರಯಾಣಿಕರ ದಂಡೇ ಹರಿದು ಬರುತ್ತದೆ, ಅದರಲ್ಲೂ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕಚೇರಿಗೆ ಹೋಗುವ ನೌಕರರು, ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರು ಹಿಂಡು ಹಿಂಡಾಗಿ ನಿಲ್ದಾಣಕ್ಕೆ ಬರುತ್ತಾರೆ, ಸುಮಾರು ೧೦ ಗಂಟೆ ವರೆಗೂ ಪ್ರಯಾಣಿಕರು ನೂರಾರು ಸಂಖ್ಯೆಯಲ್ಲಿ ಬಸ್ ಗಾಗಿ ಕಾದು ನಿಲ್ಲುತ್ತಾರೆ, ಆದರೆ ಆ ಸಮಯದಲ್ಲಿ ಬಸ್ಸುಗಳೇ ಇರುವುದಿಲ್ಲ. ಆಗೊಮ್ಮೆ ಈಗೊಮ್ಮೆ ಬರುವ ಒಂದೊAದು ಬಸ್ಸಿಗೆ ನೂರಾರು ಸಂಖ್ಯೆಯ ಪ್ರಯಾಣಿಕರು ಮುಗಿಬೀಳುವಾಗ ಅಲ್ಲಿನ ಪರಿಸ್ಥಿತಿ ಅದರಲ್ಲೂ ಮಹಿಳೆಯರು ಮಕ್ಕಳ ಪಾಡು ಎಷ್ಟು ಹೀನಾಯವಾಗಿರುತ್ತದೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ.
ಜನರ ನೂಕು ನುಗ್ಗಲಿನ ನಡುವೆ ಸಿಕ್ಕ ಬಸ್ಸಿನ ನಿರ್ವಾಹಕ ಹಣ್ಣುಗಾಯಾಗಿ ಈಚೆ ಬಂದ ದೃಶ್ಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯೇ ಸರಿ.
ಸಾಮಾನ್ಯವಾಗಿ ೧೦ ಗಂಟೆ ಕಳೆದ ಮೇಲೆ ಪ್ರಯಾಣಿಕರ ಸಂಖ್ಯೆ ಇಳಿಮುಖ, ಆದರೆ ಆಗ ಬಸ್ಸುಗಳು ಜನರಿಲ್ಲದಿದ್ದರು ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಿರುತ್ತವೆ. ಸಾಯಂಕಾಲ ೪ ಗಂಟೆ ವರೆಗೂ ಖಾಲಿ ಖಾಲಿ ಓಡಾಡುವ ಬಸ್ಸುಗಳು ೪ ಗಂಟೆ ನಂತರ ಪ್ರಯಾಣಿಕರು ದಂಡು ದಂಡಾಗಿ ಬರುವ ಹೊತ್ತಿಗೆ ಬಸ್ಸುಗಳು ಒಂದೊOದಾಗಿ ಡಿಪೋ ದತ್ತ ಮುಖ ಮಾಡಿರುತ್ತವೆ, ಜನ ಮಾತ್ರ ೪ ಗಂಟೆಯಿOದ ರಾತ್ರಿ ೮.೩೦ ರ ವರೆಗೂ ಅದೇ ನೂಕು ನುಗ್ಗಲಿನಲ್ಲಿ ಎಣಗಾಡುವ ಸ್ಥಿತಿ ಮಾಮೂಲಾಗಿ ಹೋಗಿದೆ ಜನರಿಗೆ ಅಗತ್ಯವಿದ್ದ ಸಮಯಕ್ಕೆ ಬಸ್ಸು ಬಿಡಬೇಕಾದ ಅಧಿಕಾರಿಗಳು ಜನರಿಲ್ಲದಾಗ ಖಾಲಿ ಬಸ್ಸುಗಳನ್ನು ಓಡಿಸಿ ಸಂಸ್ಥೆ ನಷ್ಟದಲ್ಲಿದೆ ಎಂದು ಬೊಬ್ಬೆ ಹೊಡೆಯುವ ಜಾಣ ಪೆದ್ದುತನಕ್ಕೆ ಏನನ್ನಬೇಕು ನಿಮಗೆ ಬಿಟ್ಟಿದ್ದು.
ಕಂಡು ಕಾಣದಂತಿರುವ ಅಧಿಕಾರಿಗಳ ಜಾಣ ಕುರುಡುತನದಿಂದ ಜನ ಹೈರಾಣಗಾತ್ತಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ