ಮಳವಳ್ಳಿ : ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವು ಅಭಿವೃದ್ಧಿ ಅಧಿಕಾರಿಗಳ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ತಾಲ್ಲೂಕು ಪಂಚಾಯಿತಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭೆ ಕಚೇರಿ ಮುಂಭಾಗದಿAದ ನೂರಾರು ಮಂದಿ ನರೇಗಾ ಕೂಲಿಕಾರರ ಜತೆ ಅನಂತ ರಾಂ ಸರ್ಕಲ್ ಮೂಲಕ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಹುಸ್ಕೂರು ಗ್ರಾ.ಪಂ. ಕೂಲಿ ಕಾರರು ಹಾಲಿ ಕೆರೆ ಕಾಮಗಾರಿ ಕೆಲಸ ಮಾಡಿದ್ದು, ತಳಗವಾದಿ ಗ್ರಾ.ಪಂ.೩೨೦೦ಕ್ಕೂ ಹೆಚ್ಚು ದಿನಗಳ ಕೆಲಸ ಮಾಡಿದ್ದರೂ ಹಣ ನೀಡಿಲ್ಲ, ವೇತನ ತಡ ಪಾವತಿ ಕಾಯ್ದೆಯಡಿ ತಕ್ಷಣವೇ ಕೂಲಿ ಪಾವತಿಸಬೇಕು, ಅಗಸನಪುರ ಗ್ರಾ.ಪಂ.ಯಲ್ಲಿ ಕೋಡಿಪುರ, ಸಾಹಳ್ಳಿ, ಕೂಲಿಕಾರರಿಗೆ ಎನ್ಎಂಆರ್ ತೆಗೆಯದೇ ಮಾಡಿರುವ ಕೆಲಸಕ್ಕೆ ಕೂಲಿ ಸಿಗುತ್ತಿಲ್ಲ, ಅಲ್ಲದೇ ಕೆಲ ಪಿಡಿಒಗಳು ಕಿರುಕುಳ ನೀಡುತ್ತಿದ್ದು, ಅಂತಹವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಉದ್ಯೋಗ ಖಾತ್ರಿಯಡಿ ಕಾಯಕ ಬಂಧುಗಳ ಪ್ರೋತ್ಸಾಹಧನ ನೀಡಬೇಕು, ಆನ್ಲೈನ್ ಹಾಜರಾತಿ ಕೈ ಬಿಡಬೇಕು, ಅರ್ಜಿ ಹಾಕಿದವರಿಗೆ ತಕ್ಷಣವೇ ಜಾಬ್ ಕಾರ್ಡ್ ನೀಡಬೇಕು, ವಸತಿ ರಹಿತರಿಗೆ ನಿವೇಶನ ನೀಡಿ ಹಕ್ಕು ಪತ್ರ ನೀಡಬೇಕು, ಕೂಲಿಕಾರರಿಗೆ ಬ್ಯಾಂಕ್ ಸಾಲ ನೀಡಬೇಕು, ಜಲಜೀವನ್ ಮಿಷನ್ ಅಡಿಯಲ್ಲಿ ಮೀಟರೀಕರಣ ಕೈಬಿಡಬೇಕು, ನರೇಗಾದಲ್ಲಿ ಗುತ್ತಿಗೆದಾರರ ಹಾವಳಿ ತಪ್ಪಿಸಬೇಕು, ಪಂಚಾಯಿತಿಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸಿಸು ವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ ಮಾತನಾಡಿ, ಟಿ.ಕೆ.ಹಳ್ಳಿ, ಲಿಂಗಪಟ್ಟಣ, ಬ್ಯಾಡರಹಳ್ಳಿ, ನಾಗೇಗೌಡನದೊಡ್ಡಿ, ಧನಗೂರು, ತಳಗವಾದಿ, ಎಚ್.ಬಸಾಪುರ, ಯತ್ತಂಬಾಡಿ, ಮಿಕ್ಕೆರೆ, ಹಿಟ್ಟನಹಳ್ಳಿ, ಬಂಡೂರು, ಸುಜ್ಜಲೂರು ಪಂಚಾಯಿತಿಗಳ ಎಲ್ಲ ಕೂಲಿಕಾರರಿಗೂ ಕೆಲಸ ನೀಡಿ, ಗುತ್ತಿಗೆದಾರರು ಹಾಗೂ ಯಂತ್ರದ ಹಾವಳಿಯನ್ನು ತಡೆಗಟ್ಟಬೇಕು, ಬೆಂಡರವಾಡಿಯಲ್ಲಿ ಯಂತ್ರದ ಮೂಲಕ ೨೧ ಕೃಷಿ ಹೊಂಡಗಳನ್ನು ನಿರ್ಮಿಸಿ ಕೂಲಿಕಾರರಿಗೆ ಕೆಲಸ ನೀಡದೆ ಹಣ ಲೂಟಿ ಮಾಡಿರುವ ಪಿಡಿಒ ವಿರುದ್ಧ ತನಿಖೆ ನಡೆಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಆಲಿಸಿದರು.
ರಾಜ್ಯ ಘಟಕದ ಸಹಕಾರ್ಯದರ್ಶಿ ಕೆ.ಹನುಮೇಗೌಡ, ರಾಮಣ್ಣ, ನಾಗರತ್ನ, ಕಪನೀಗೌಡ, ಟಿ.ಎಚ್.ಅನಂದ್, ಅನಂತು ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ