ಮಳವಳ್ಳಿ : ಸರ್ಕಾರಿ ಶಾಲೆಗಳು ಉತ್ತಮವಾಗಿ ಬೆಳವಣಿಗೆ ಸಾಧಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ಆಗಲು ಸಾರ್ವಜನಿಕರ ಹಾಗೂ ದಾನಿಗಳ ಸಹಕಾರ ಮುಖ್ಯ ಎಂದು ಡಿಡಿಪಿಐ ಜವರೇಗೌಡ ಹೇಳಿದರು.
ತಾಲ್ಲೂಕಿನ ಬಂಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪುಟ್ಟಬಸವಯ್ಯ ಅವರು
ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ್ದ ಮಕ್ಕಳಿಗೆ ಸಮವಸ್ತ್ರ ಮತ್ತು ಶೈಕ್ಷಣಿಕ ಸಾಮಾಗ್ರಿಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೇ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಶಾಲೆಗಳ ಬಲವರ್ಧನೆಗೆ ಪೋಷಕರ ಹಾಗೂ ದಾನಿಗಳ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪುಟ್ಟಬಸವಯ್ಯ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ ನೆರವು ನೀಡುತ್ತಿದ್ದು, ಪ್ರಸ್ತುತ ಶೈಕ್ಷಣಿಕ ಯುಗದಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಗುಣಮಟ್ಟದ ಶಿಕ್ಷಣದ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮೀಣ ಪ್ರದೇಶದ ಶಾಲೆಗಳ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ, ಪ್ರತಿಯೊಬ್ಬರಿಗೂ ತಂದೆ, ತಾಯಿ ಋಣದ ಜೊತೆಗೆ ಶೈಕ್ಷಣಿಕ ಸೇವೆಯ ಋಣವೂ ಇರುತ್ತದೆ. ಹೀಗಾಗಿ ತಮ್ಮ ಹುಟ್ಟೂರಿನ ಋಣ ತೀರಿಸಲು ಮುಂದಾಗಿರುವ ಪುಟ್ಟಬಸವಯ್ಯ ಅವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಯೋಗೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಯಪ್ರಕಾಶ್, ಪಿಡಿಒ ಕುಮಾರ್, ತಾ.ಪಂ.ಮಾಜಿ ಸದಸ್ಯ ದೊಡ್ಡಯ್ಯ, ಉಪನ್ಯಾಸಕ ಲಿಂಗರಾಜು, ಇಸಿಒ ಸಿದ್ದರಾಜು, ಎಸ್ಡಿಎಂಸಿ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷೆ ವಿದ್ಯಾ, ಮುಖ್ಯಶಿಕ್ಷಕರು, ಶಿಕ್ಷಕರು, ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ