May 7, 2024

Bhavana Tv

Its Your Channel

300ಕ್ಕೂ ಹೆಚ್ಚು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಬೆಳ್ಳಿ ಸಾವು

ಕಾರವಾರ: ಕಳೆದ ಆರುವರೆ ವರ್ಷಗಳಿಂದ ಉತ್ತರಕನ್ನಡ ಜಿಲ್ಲಾ ಪೋಲಿಸ್ ಇಲಾಖೆಯಲ್ಲಿ ಬಾಂಬ್ ಪತ್ತೆದಾರಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಾಂಬ್ ನಿಗ್ರಹ ದಳದ ಶ್ವಾನವೊಂದು ಅನಾರೋಗ್ಯದ ಕಾರಣದಿಂದ ಮೃತಪಟ್ಟಿದೆ. ಬೆಳ್ಳಿ(10) ಹೆಸರಿನ ಈ ಶ್ವಾನವು ಕಳೆದ ಆರುವರೆ ವರ್ಷಗಳಿಂದ ಜಿಲ್ಲಾ ಪೋಲಿಸ್ ಇಲಾಖೆಯಲ್ಲಿ ಬಾಂಬ್ ಪತ್ತೆದಾರಳಾಗಿ ಕಾರ್ಯ ನಿರ್ವಹಿಸುತ್ತಿತ್ತು. ಕಳೆದ 3 ತಿಂಗಳಿನಿAದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಈ ಶ್ವಾನಕ್ಕೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ತಿಳಿದು ಬಂದಿತ್ತು. ಗಡ್ಡೆಯ ಕಾರಣ ಮೂರು ದಿನಗಳಿಂದ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಹೀಗಾಗಿ ಬುಧವಾರ ಮಧ್ಯಾಹ್ನ 3 ಗಂಟೆಗೆ ಮೃತಪಟ್ಟಿದೆ. ಬೆಳ್ಳಿಯ ಮೃತದೇಹವನ್ನು ಜಿಲ್ಲಾ ಪೋಲಿಸ್ ಪರೇಡ್ ಮೈದಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಬೆಳ್ಳಿಯ ನಿರ್ವಾಹಕರು ಸೇರಿದಂತೆ ಸಿಬ್ಬಂದಿಯು ಭಾವುಕರಾದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಎನ್, ಹೆಚ್ಚುವರು ಜಿಲ್ಲಾ ಪೊಲೀಸ್ ಅಧೀಕ್ಷಕ ಜಯಕುಮಾರ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ದಿಲೀಪ, ಕಾರವಾರ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಿದ್ದಪ್ಪ ಬೀಳಗಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಶ್ವಾನದಳದಲ್ಲಿ ಜಿಲ್ಲೆಗೆ ಉತ್ತಮ ಹೆಸರು ತಂದಿದ್ದ ಬೆಳ್ಳಿಯು ಕಳೆದ 2021 ರಲ್ಲಿ ಕುಮಟಾದಲ್ಲಿ ಸಿಕ್ಕ ನಕಲಿ ಬಾಂಬ್ ಪತ್ತೆಯಲ್ಲಿ ಮುಖ್ಯ ಪಾತ್ರ ವಹಿಸಿತ್ತು. ಅಲ್ಲದೇ, ಚುನಾವಣೆಯ ಸಮಯದಲ್ಲಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಆಗಮಿಸಿದ್ದಾಗ ಕಾರ್ಯ ನಿರ್ವಹಿಸಿದೆ. ಜತೆಗೆ ಮೈಸೂರಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ದಿನ, ಬೆಳಗಾವಿ ಅಧೀವೇಶನ ಹಾಗೂ ಗೊವಾ ರಾಜ್ಯಕ್ಕೆ ಗಣ್ಯರು ಆಗಮಿಸಿದಾಗಲೂ ಬಾಂಬ್ ಪತ್ತೆ ದಳದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದ್ದ ಈ ಶ್ವಾನ ಈವರೆಗೆ 300ಕ್ಕೂ ಹೆಚ್ಚು ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಇದರೊಂದಿಗೆ ಮಂಗಳೂರು ಪೊಲೀಸ್ ವಲಯದ ಬಾಂಬ್ ಪತ್ತೆ ಸ್ಪರ್ಧೆಯಲ್ಲಿ ಎರೆಡು ಬಾರಿ ಮೊದಲ ಬಹುಮಾನ ಪಡೆದಿದ್ದಳು. ಉತ್ತಮ ಆಹಾರ ಪದ್ಧತಿ ಹೊಂದಿದ್ದ ಬೆಳ್ಳಿ, ಕಳೆದ ಮೂರು ತಿಂಗಳಿನಿAದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಳಾದರೂ ತನ್ನ ಕರ್ತವ್ಯ ನಿರ್ವಹಿಸುತ್ತಿತ್ತು. ಇಲಾಖೆಯು ಚಿಕಿತ್ಸೆ ನೀಡಿ ಶ್ವಾನವನ್ನು ಉಳಿಸಲು ಪ್ರಯತ್ನಪಟ್ಟರೂ ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಶ್ವಾನ ಇಂದು ಕೊನೆಯುಸಿರೆಳೆದಿದೆ.

error: