

ವರದಿ: ವೇಣುಗೋಪಾಲ ಮದ್ಗುಣಿ
ಅಂಕೋಲಾ : ಸ್ವಾತಂತ್ರ‍್ಯ ಹೋರಾಟದಲ್ಲಿ ಅಂಕೋಲಾದ ಜನರ ತ್ಯಾಗ, ಹೋರಾಟ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿದೆ. ಸ್ವದೇಶಿ ಚಳುವಳಿ, ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ, ಕರಬಂಧಿ ಚಳುವಳಿ, ಶೇಂದಿ ಸರಾಯಿ ಚಳುವಳಿ, ಚಲೆಜಾವ್ ಚಳುವಳಿ ಹೀಗೆ ಕಾಲು ಶತಮಾನ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಹಿರಿಮೆ-ಗರಿಮೆ ಇಲ್ಲಿಯ ಜನಪದರದ್ದು ಎಂದು ಲೇಖಕ ಮಹಾಂತೇಶ ರೇವಡಿ ಅಭಿಪ್ರಾಯ ಪಟ್ಟರು. ಸ್ವಾತಂತ್ರ‍್ಯ ಸಂಗ್ರಾಮದ ರೋಚಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದರು.
ಅವರು ಅಂಕೋಲೆಯ ಕೆ.ಎಲ್.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಹಾಗೂ ಪ್ರಾದೇಶಿಕ ಪತ್ರಗಾರ ಇಲಾಖೆ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಏರ್ಪಡಿಸಿದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕೀರ್ಣದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಅಂಕೋಲಿಗರ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡುತ್ತಿದ್ದರು. ಇಂದಿನ ಪೀಳಿಗೆಯಲ್ಲಿ ಅಂದಿನ ಇತಿಹಾಸದ ಪ್ರಜ್ಞೆ ಇಲ್ಲದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಲ್.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಮಂಜುನಾಥ ಇಟಗಿ ಅಂದಿನವರು ನಮಗಾಗಿ ಆಸ್ತಿ, ನೆಮ್ಮದಿಯ ಬದುಕನ್ನು ಕಳೆದುಕೊಂಡು ಸ್ವಾತಂತ್ರ‍್ಯಕ್ಕಾಗಿ ಕಷ್ಟ, ನಷ್ಟ, ಹಿಂಸೆಗಳನ್ನು ಅನುಭವಿಸಿ ಬ್ರಿಟಿಷರ ವಿರುದ್ಧ ಹೋರಾಡಿದನ್ನು ನಾವೆಂದು ಮರೆಯುವಂತಿಲ್ಲ. ಇಲ್ಲಿನ ಉಪ್ಪಿನ ಸತ್ಯಾಗ್ರಹ ಅಂಕೋಲೆಗೆ ಬಾರ್ಡೋಲಿ ಎಂಬ ಖ್ಯಾತಿ ತಂದುಕೊಟ್ಟಿದ್ದನ್ನು ನೆನಪಿಸಿದರು. ಹೊಸ ಇತಿಹಾಸ ನಿರ್ಮಿಸಲು ಯುವ ಜನತೆ, ನಮ್ಮ ಭವ್ಯ ಪರಂಪರೆ ಹೋರಾಟದ ಇತಿಹಾಸವನ್ನು ನೆನಪಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಲೇಖಕ ಮಹಾಂತೇಶ ರೇವಡಿಯವರ ಸಮಾಜ ಸೇವೆಯನ್ನು ನೆನಪಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಇಂಡೋ ಪೊರ್ತಗಿಸ್ ಲಿಟರರಿ ಪೌಂಡೇಶನ್ನಿನ ನಿರ್ದೇಶಕರಾದ ಅರವಿಂದ ಯಾಳಗಿ, ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯ ಸಹನಿರ್ದೇಶಕಿಯಾದ ಮಂಜುಳಾ ಯಲಿಗಾರ, ಪದ್ಮಶ್ರೀ ತುಳಸಿ ಗೌಡ, ಕಾಲೇಜಿನ ಪ್ರಾಚಾರ್ಯ ವಿನಾಯಕ ಹೆಗಡೆ, ಡಾ. ಪುಷ್ಪಾ ನಾಯ್ಕ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಕು. ಪೂರ್ಣಿಮಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕು. ಮೇಧಾ ಆಚಾರ್ಯ ಸ್ವಾಗತಿಸಿದರು. ಕು. ದಿವ್ಯಶ್ರೀ, ರಶ್ಮಿ ಅತಿಥಿಗಳಿಗೆ ಪುಷ್ಪಗುಚ್ಛ ಅರ್ಪಿಸಿದರು. ಕು. ದಿಶಾ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಕು. ಶೃದ್ಧಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕು. ಯೊಗೇಶ ಮುಕ್ರಿ ವಂದಿಸಿದರು. ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಹಸ್ತಪ್ರತಿ, ತಾಮ್ರಪಟಗಳ ಸಂಗ್ರಹ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
More Stories
ಕಾವ್ಯ ಕಟ್ಟುವುದಲ್ಲ-ಬದಲಿಗೆ ಹುಟ್ಟುವುದು: ಮಂಜುನಾಥ ಗಾಂವಕರ, ಬರ್ಗಿ
೧೮ ವರ್ಷದ ಯುವಕ ರವೀಶ್ ಹರಿಕಾಂತ್ನ ಕಲಾ ಪ್ರೌಢಿಮೆ
“ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ -ವೈಶಾಲಿ ಹೆಗಡೆ