March 13, 2025

Bhavana Tv

Its Your Channel

ಕ್ರಿಯಾಶೀಲ ಶಿಕ್ಷಕ ಉಮೇಶ ಕೆರೆಕಟ್ಟೆಯವರಿಗೆ ಸನ್ಮಾನ ಸಮಾರಂಭ.

ಭಟ್ಕಳ: ಗ್ರಾಮೀಣ ಭಾಗದ ಶಾಲಾ ಪರಿಸರವನ್ನು ಎತ್ತರಿಸುವಲ್ಲಿ ಹಾಗೂ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕ ಉಮೇಶ ಕೆರೆಕಟ್ಟೆಯವರ ಶ್ರಮ ಸಾರ್ಥಕ ವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಎಂ. ಮೊಗೇರ ಹೇಳಿದರು.

ಇತ್ತೀಚೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರೂರನಲ್ಲಿ ಶಾಲಾಭಿವೃದ್ಧಿ ಸಮಿತಿ, ಹಳೆವಿದ್ಯಾರ್ಥಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಕೊಳಕಿ ಹಾಗೂ ಸಮಸ್ತ ಊರ ನಾಗರಿಕರ ಪರವಾಗಿ ಗುಮ್ಮನ ಹಕ್ಕಲು ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕ ಉಮೇಶ್ ಕೆರೆಕಟ್ಟೆಯವರ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಭಾವನಾತ್ಮಕವಾಗಿ ದೂರ ಸರಿಯುತ್ತಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ಪರಿಸರದಲ್ಲಿರುವ ಪಾಲಕರು, ಯುವಕ ಸಂಘದವರು, ಊರ ನಾಗರಿಕರು ಸೇರಿ ಓರ್ವ ಕ್ರಿಯಾಶೀಲ ಶಿಕ್ಷಕನನ್ನು, ಉತ್ತಮ ಗುರುವನ್ನು, ಉತ್ತಮ ನಾಯಕತ್ವ ಹೊಂದಿದವರನ್ನು, ಎಲ್ಲರ ಸಮಸ್ಯೆಗೆ ಸ್ಪಂದಿಸುವ ಸ್ನೇಹಶೀಲ ಶಿಕ್ಷಕರನ್ನು ಸನ್ಮಾನಿಸುತ್ತಿರುವುದು ಇಲಾಖೆಗೆ ಹೆಮ್ಮೆಯೆನಿಸಿದೆ. ಮಕ್ಕಳ ಗುಣಾತ್ಮಕ ಕಲಿಕೆಗೆ ಸದಾ ತೊಡಗಿಸಿಕೊಳ್ಳುವ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಆತ್ಮವಿಶ್ವಾಸದ ಮಾತುಗಳನ್ನಾಡಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮನಸುಳ್ಳವರು ಎಂದರು. ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ನಿರ್ವಹಿಸಿದ ಪ್ರಾಮಾಣಿಕ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಉಮೇಶ ಕೆರೆಕಟ್ಟೆ ಯವರ ಕೆಲಸವೇ ಸಾಕ್ಷಿಯಾದುದು ಎಂದರು.

ಶಾಲಾಭಿವೃದ್ಧಿ ಸಮಿತಿ, ಊರ ನಾಗರಿಕರು ಹಾಗೂ ಕ್ರೀಡಾ ಸಂಘವು ಶಿಕ್ಷಕ ಉಮೇಶ ಕೆರೆಕಟ್ಟೆ ದಂಪತಿಯವರನ್ನು ಪ್ರತ್ಯೇಕವಾಗಿ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿ, ಕಳೆದ 18 ವರ್ಷಗಳಿಂದ ಈ ಶಾಲೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಸರ್ವರೂ ಸಹಕರಿಸಿರುತ್ತೀರಿ. ನನ್ನಿಂದ ಶಿಕ್ಷಣ ಪಡೆದ ಮಕ್ಕಳು ಧೈರ್ಯದಿಂದ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡುತ್ತಾರೆ ಎಂದರೆ ಅವರಿಗೆ ನಾನು ನೀಡಿದ ಶಿಕ್ಷಣದ ಫಲ ಎಂದು ತಿಳಿದುಕೊಂಡಿರುತ್ತೇನೆ. ಊರಿನವರ ಸಹಕಾರಕ್ಕೆ ಬೆಲೆಕಟ್ಟಲಾಗದ ಭಾವನಾತ್ಮಕ ಸಂಬAಧಕ್ಕೆ ನಾನು ಚಿರಋಣಿ ಎಂದರು. ನನ್ನ ಕೆಲಸದ ಮೂಲಕ ಇಲಾಖೆ ಹಾಗೂ ಪಾಲಕರ, ಮಕ್ಕಳ ಮನಗೆದ್ದ ಆತ್ಮತೃಪ್ತಿ ನನಗಿದೆ ಎಂದರು.

ಕೊಪ್ಪ ಗ್ರಾಮ ಪಂಚಾಯತ ಅಧ್ಯಕ್ಷ ರಾಜು ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಪಂಚಾಯತ ವ್ಯಾಪ್ತಿಯಲ್ಲಿರುವ ಕರೂರು ಶಾಲೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಮಕ್ಕಳ ಪಾಲಿನ ನೆಚ್ಚಿನ ಶಿಕ್ಷಕ ರಾಗಿರುತ್ತಾರೆ. ಉಮೇಶ ಕೆರೆಕಟ್ಟೆ ಅವರ ಪ್ರಾಮಾಣಿಕ ಸೇವೆ ಇತರರಿಗೆ ಮಾದರಿಯಾದದ್ದು. ಇವರ ಕಾಲದ ಶೈಕ್ಷಣಿಕ ಹಾಗೂ ಸಹಕಾರ ಮನೋಭಾವನೆಯಿಂದಾಗಿ ಪಂಚಾಯತಿ ವ್ಯಾಪ್ತಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಕಾರ್ಯದರ್ಶಿ ಎಂ. ಡಿ. ರಫೀಕ, ಉಪಾಧ್ಯಕ್ಷ ದಿನೇಶ್ ಭಂಡಾರಿ, ಕೋಶಾಧ್ಯಕ್ಷ ಎಂ.ವಿ. ಹೆಗಡೆ,ನೌಕರರ ಸಂಘದ ಪದಾಧಿಕಾರಿ ವೆಂಕಟೇಶ ನಾಯ್ಕ, ಊರ ಪ್ರಮುಖ ಲಿಂಗು ಮರಾಠಿ, ಯುವಕ ಸಂಘದ ಪರಮೇಶ್ವರ ಗೊಂಡ, ಅಂಗನವಾಡಿ ಕಾರ್ಯಕರ್ತೆ ರೇವತಿ ಗೊಂಡ, ವಿದ್ಯಾರ್ಥಿ ಭವ್ಯ ಗೊಂಡ ಶಿಕ್ಷಕ ಉಮೇಶ ಕೆರೆಕಟ್ಟಿ ಯವರ ಸೇವೆಯನ್ನು ಶ್ಲಾಘಿಸಿ ಮಾತನಾಡಿದರು.

ಸಭೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಐ. ಜಿ. ನಾಯ್ಕ, ಸುರೇಶ ಮುರುಡೇಶ್ವರ, ಶಿಕ್ಷಕರಾದ ವಿಲ್ಸನ್ ರೋಡ್ರಿಗಸ್, ದಾಸ ಶೆಟ್ಟಿ, ಯು.ಎ.ಲೋಹಾನಿ, ದೇವರಾಜ ದೇವಾಡಿಗ, ಕುಸುಮ ಗೊಂಡ, ಲತಾ ಭಟ್ಟ, ಹೇಮಾನಾಯ್ಕ, ಮಂಜು ಗೊಂಡ, ಪ್ರಮುಖರಾದ ಕುಪ್ಪಯ್ಯ ಗೊಂಡ, ದತ್ತಾತ್ರೇಯ ಹೆಗಡೆ, ನಾಗರಾಜ ಭಟ್ಟ, ಸೋಮಯ್ಯ ಗೊಂಡ,ನಾಗಯ್ಯ ಗೊಂಡ ಮುಂತಾದವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಮುಖ್ಯಾಧ್ಯಾಪಕ ಕೆ.ಜಿ.ನಾಯ್ಕ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಮಹೇಶ ನಾಯ್ಕ ನಿರೂಪಿಸಿದರು. ರೇವತಿ ಗೊಂಡ ವಂದಿಸಿದರು.

ಇದೇ ಸಂದರ್ಭದಲ್ಲಿ ಶಾಲೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವುದಕ್ಕಾಗಿ ಮತ್ತು ಪಾಲಕರಿಗೆ ಉತ್ತಮ ಮಾರ್ಗದರ್ಶನ ನೀಡಿರುವ ನೆಚ್ಚಿನ ಕ್ಷೇತ್ರ ಶಿಕ್ಷಣಾಧಿಕಾರಿಯೆಂದೇ ಹೆಸರಾದ ದೇವಿದಾಸ ಮೊಗೇರವರನ್ನು ಶಾಲಾ ಎಸ್ಡಿಎಂಸಿ, ಊರ ನಾಗರಿಕರು ಬೆಳ್ಳಿ ದೀಪ ಅರ್ಪಿಸಿ, ಸನ್ಮಾನಿಸಿ ಗೌರವಿಸಿದರು

error: