
ಭಟ್ಕಳ: ಕೊಂಕಣ ಖಾರ್ವಿ ಸಮಾಜ ಮಾವಿನಕುರ್ವೆ ಬಂದರ ಇದರ ವತಿಯಿಂದ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ವೇತನ ವಿತರಣೆ, ಗಣ್ಯರಿಗೆ ಸನ್ಮಾನ ಹಾಗೂ ಶಿಕ್ಷಣ ಮತ್ತು ಸಂಸ್ಕಾರ ವಿಚಾರಗೋಷ್ಟಿಯನ್ನು ಅಖಿಲಭಾರತ ಕೊಂಕಣ ಖಾರ್ವಿ ಸಮಾಜದ ನಿಕಟಪೂರ್ವ ಅಧ್ಯಕ್ಷ ಕೆ.ಬಿ. ಖಾರ್ವಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿಶ್ವದಾದ್ಯಂತ ಕೊಂಕಣ ಖಾರ್ವಿ ಸಮಾಜ ಇರುವುದು ಕೇವಲ 50 ಸಾವಿರ ಜನಸಂಖ್ಯೆಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸಮಾಜ ಜಾಗೃತವಾಗಿಲ್ಲವಾದಲ್ಲಿ ನಮ್ಮ ಸಮಾಜ ನಶಿಸಿ ಹೋಗುವ ಅಪಾಯ ಎದುರಾಗುವ ಸಂಭವ ಇದೆ ಎನ್ನುವ ಆತಂಕ ವ್ಯಕ್ತಪಡಿಸಿದರು. ಮುಂದಿನ ಪೀಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಹೊಂದಿ ಕೊಂಕಣ ಖಾರ್ವಿ ಸಮಾಜದ ಹೆಸರು ಶಾಶ್ವತವಾಗಿರುವಂತೆ ನೋಡಿಕೊಳ್ಳಬೇಕಾಗಿದೆ ಎಂದ ಅವರು ನಾವು ಕೆಟ್ಟವರಿಗೂ ಒಳ್ಳೆಯವರು, ಒಳ್ಳೆಯವರಿಗೂ ಒಳ್ಳೆಯವರು ಎನ್ನುವ ತತ್ವದಡಿಯಲ್ಲಿ ಬದುಕಿ ಬಾಳಬೇಕು ಎಂದೂ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷ ಸುಬ್ರಾಯ ಬಿಕ್ಕು ಖಾರ್ವಿ ವಹಿಸಿದ್ದರು.
ಮುಖ್ಯ ಅತಿಥಿ ಡಾ. ಬಾಲಚಂದ್ರ ಮೇಸ್ತ ಅವರು ಮಾತನಾಡಿ ಶಿಕ್ಷಣಕ್ಕಿಂತಲೂ ಹೆಚ್ಚು ಮಹತ್ವ ಸಂಸ್ಕಾರಕ್ಕಿದೆ, ನಾವು ಸಂಸ್ಕಾರಯುತ ಶಿಕ್ಷಣವನ್ನು ಪಡೆದಾಗ ಮಾತ್ರ ಶಿಕ್ಷಣಕ್ಕೆ ಮಹತ್ವ ಬರುತ್ತದೆ ಎಂದರು. ಮುಂದಿನ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂಸ್ಕಾರಯುತ ಉತ್ತಮ ಶಿಕ್ಷಣದ ಅವಶ್ಯಕತೆ ಇದೆ ಎಂದರು.
ಶಿಕ್ಷಣ ಮತ್ತು ಸಂಸ್ಕಾರ ವಿಷಯದ ಕುರಿತು ಮಾತನಾಡಿದ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ಶ್ಯಾನಭಾಗ ಅವರು ನಮ್ಮ ಶಿಕ್ಷಣವು ಕತ್ತಲೆಯಿಂದ ಬೆಳಕಿನೆಡೆಗೆ ಬರುವ ಒಂದು ಮಾರ್ಗವಾಗಿದ್ದು ಇಲ್ಲಿ ಸಂಸ್ಕಾರಯುತವಾಗಿಯೇ ಬರಬೇಕಾಗಿದೆ. ಕೇವಲ ಶಿಕ್ಷಣ ಪಡೆದು ಪ್ರಮಾಣ ಪತ್ರ ಹೊಂದಿದ ವ್ಯಕ್ತಿಯನ್ನು ನಾವು ಶಿಕ್ಷಿತ ಎನ್ನಲಾಗದು, ಅವನಲ್ಲಿರುವ ಗುಣ ಲಕ್ಷಣಗಳನ್ನು ನೋಡಿ ಅವರ ಶಿಕ್ಷಣದ ಮಟ್ಟವನ್ನು ಅಳೆಯಬೇಕಾಗುತ್ತದೆ ಎಂದರು.
ಇಂದು ಆಧುನಿಕ ಶಿಕ್ಷಣದ ಪದ್ಧತಿಯಲ್ಲಿ ದೇಶಾಭಿಮಾನ, ಮೌಲ್ಯ, ಸಂಸ್ಕಾರದ ಕೊರತೆಯನ್ನು ನಾವು ಕಾಣುತ್ತೇವೆ ಎಂದ ಅವರು ನಮಗೆ ಮಾಕ್ರ್ö್ಸ ಕಾರ್ಡ ಶಿಕ್ಷಣಕ್ಕಿಂತ, ಜೀವನ ಕೌಶಲ್ಯದ ಶಿಕ್ಷಣದ ಅಗತ್ಯತೆ ಇದೆ ಎಂದರು. ಮುಂದಿನ ಸಮಾಜ ಸರಿಯಾಗಿ ಹೋಗಬೇಕಾದರೆ ನಾವು ನಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ, ಮೌಲ್ಯಯುತ ಜೀವನ ಏನೆಂದು ಕಲಿಸಿಕೊಡಬೇಕಾಗುತ್ತೆ ಇದರಲ್ಲಿ ಪಾಲಕರ ಪಾತ್ರವೂ ಕೂಡಾ ಬಹು ಮುಖ್ಯವಾಗುತ್ತದೆ ಎಂದೂ ಹೇಳಿದರು.
ಅಖಿಲ ಭಾರತ ಕೊಂಕಣ ಖಾರ್ವಿ ಸಮಾಜದ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ ಸಾರಂಗ, ಕೊಂಕಣ ಖಾರ್ವಿ ಸಮಾಜದ ವತಿಯಿಂದ ಉನ್ನತರತ್ನ ಪ್ರಶಸ್ತಿ ಪುರಸ್ಕೃತ ಕೇಂದ್ರ ಸರಕಾರದ ಸೊಲಿಸಿಟರ್ ಜನರಲ್ ವೆಂಕಟೇಶ ಖಾರ್ವಿ ಮಾತನಾಡಿದರು. ಸಮಾರಂಭದಲ್ಲಿ ಯುವ ಕ್ರೀಡಾಪಟು ಸೋಮಶೇಖರ ಖಾರ್ವಿ ಅವರಿಗೆ ಕ್ರೀಡಾರತ್ನ, ಆರೋಗ್ಯ ಇಲಾಖೆಯ ಶುಶ್ರೂಷಕಿ ಆಶಾ ಎನ್. ಖಾರ್ವಿ ಅವರಿಗೆ ಆರೋಗ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುಟಾಣಿ ರೋಶನಿ ರಮೇಶ ಖಾರ್ವಿ ಭಗವದ್ಗೀತೆಯ 12ನೇ ಅಧ್ಯಾಯವನ್ನು ಹೇಳುವ ಮೂಲಕ ಎಲ್ಲರ ಗಮನ ಸೆಳೆದಳು.
ಕಾರ್ಯಕ್ರಮದಲ್ಲಿ ಪ್ರತಿಭಾವಂತೆ ಕೊಂಕಣ ಖಾರ್ವಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಉಷಾ ಖಾರ್ವಿ ಪ್ರಾರ್ಥಿಸಿದರು. ಹಿರಿಯರಾದ ವಸಂತ ಖಾರ್ವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಖಾರ್ವಿ ನಿರ್ವಹಿಸಿದರು. ಮಂಜುನಾಥ ಖಾರ್ವಿ ವಂದಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ