
ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ಮುಂದುವರಿಸುವAತೆ ಆಗ್ರಹಿಸಿ ಇಲ್ಲಿನ ತಹಸೀಲ್ದಾರ್ ಕಚೇರಿಯ ಪಕ್ಕದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಮೊಗೇರ ಸಮಾಜ 18ನೇ ದಿನವಾದ ಶನಿವಾರದಂದು ಅರೆಬೆತ್ತಲೆ ಮೆರವಣಿಗೆ, ಉರುಳು ಸೇವೆ ಮಾಡುವ ಮೂಲಕ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ಆನಂದಾಶ್ರಮ ಕಾನ್ವೆಂಟ್ ಮೈದನದಲ್ಲಿ ಹೊರಟ ಅರೆಬೆತ್ತಲೆ ಮೆರವಣಿಗೆಯು ಶಂಶುದ್ಧೀನ್ ಸರ್ಕಲ್ ಮೂಲಕ ರಾಷ್ಟ್ರೀಯ ಹೆದ್ದಾರಿಯಾಗಿ ಧರಣಿ ಪ್ರದೇಶವನ್ನು ತಲುಪಿತು. ತಾಲೂಕಾ ಆಡಳಿತ ಸೌಧ ತಲುಪುತ್ತಲೇ ಹಲವು ಯುವಕರು ಉರುಳು ಸೇವೆ ಆರಂಭಿಸಿದರು. ಇದನ್ನು ಸಮಾಜದ ಹಲವು ಮುಖಂಡರು ತಡೆಯುವಷ್ಟರಲ್ಲಿಯೇ ಸೀತಾರಾಮ ಮೊಗೇರ ಎನ್ನುವವರು ತಾವು ಮೊದಲೇ ತಮ್ಮೊಂದಿಗೆ ತಂದಿದ್ದ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಸಿದರು. ತಕ್ಷಣ ಅಲ್ಲಿದ್ದ ಇತರರು ಅವರನ್ನು ತಡೆದು ತಕ್ಷಣ ಬೆಂಕಿಪೊಟ್ಟಣವನ್ನು ಕಸಿದುಕೊಂಡರು. ಕೆಲಕಾಲ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು ಬಂದೋಬಸ್ತಿಗಾಗಿ ಬಂದಿದ್ದ ಪೊಲೀಸರೂ ಕೂಡಾ ಧಾವಿಸಿ ಆತನ ರಕ್ಷಣೆಗೆ ಮುಂದಾದರು. ಅಷ್ಟರಲ್ಲಾಗಲೇ ಸೀಮೆ ಎಣ್ಣೆ ಕಣ್ಣು, ಬಾಯಿಗೆ ಹೋಗಿ ಅಸ್ವಸ್ಥಗೊಂಡ ಅವರನ್ನು ತಕ್ಷಣ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ನಂತರ ಮೆರವಣಿಗೆಯಲ್ಲಿ ಬಂದ ಅರೆಬೆತ್ತಲೆ ಯುವಕರು, ಪುರುಷರು, ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿಗಳು ತಾಲೂಕಾ ಆಡಳಿತ ಸೌಧಕ್ಕೆ ಒಂದು ಪ್ರದಕ್ಷಿಣೆ ಬಂದು ನಂತರ ತಮ್ಮ ಧರಣಿ ಸ್ಥಳಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ ನಾವು ಕಳೆದ 18 ದಿನಗಳಿಂದ ನೂರಾರು ಸಂಖ್ಯೆಯಲ್ಲಿ ಬಂದು ಪ್ರತಿಭಟನೆಯನ್ನು ನಡೆಸುತ್ತಿದ್ದರೂ ಸಹ ನಮ್ಮ ಬೇಡಿಕೆಗೆ ಸ್ಪಂಧಿಸದ ಸರಕಾರದ ನಿಲುವು ಸರಿಯಲ್ಲ. ಪ್ರತಿ ದಿನವೂ ಕೂಡಾ ಪ್ರತಿಭಟನೆಯ ಕಾವು ಜಾಸ್ತಿಯಾಗುತ್ತಿದ್ದು ಸರಕಾರ ಕೂಡಾಲೇ ಕ್ರಮ ಕೈಗೊಂಡು ನಮ್ಮ ಸಮಾಜಕ್ಕೆ ನ್ಯಾಯ ವದಗಿಸಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ಎಫ್. ಕೆ. ಮೊಗೇರ ಮಾತನಾಡಿ ನಮ್ಮ ಬೇಡಿಕೆ ಈಡೇರುವ ವರೆಗೂ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ. ನಮ್ಮ ಸಮಾಜದವರು ಗಟ್ಟಿ ನಿರ್ಧಾರ ಮಾಡಿಕೊಂಡೇ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಪ್ರಮಾಣ ಪತ್ರ ನೀಡುವ ಕುರಿತು ಸರಕಾರ ಘೋಷಿಸುವ ತನಕ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ಕಳೆದ ಹತ್ತನ್ನೆರಡು ವರ್ಷಗಳಿಂದ ಸರಕಾರದ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಭಟ್ಕಳದಲ್ಲಿ ನಮ್ಮ ಸಮಾಜದವರೊಂದಿಗೆ ನಡೆಸಿದ ಸಭೆಯಲ್ಲಿ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳು, ಕಾನೂನು ತಜ್ಞರ ಸಭೆ ನಡೆಸುತ್ತೇವೆಂದು ಹೇಳಿದ್ದು, ಸಭೆಯಲ್ಲಿ ಏನು ನಿರ್ಧಾರ ಆಗುತ್ತದೆ ಎಂದು ನೋಡಿಕೊಂಡು ನಮ್ಮ ಧರಣಿ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳಕೆ ಭಾಸ್ಕರ ಮೊಗೇರ ಅವರು ಸರಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡುರು. ಅಧಿಕಾರಿಗಳಿಗೆ ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯದ ಆದೇಶವೂ ಕೂಡಾ ಗೌಣವಾಗಿದೆ. ಅಧಿಕಾರಿಗಳೇ ಹೇಳಿದ್ದನ್ನು ಸರಕಾರ ಮಾಡುತ್ತದೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದ್ದು ಯಾವುದೇ ಮುಂದಿನ ಅನಾಹುತಕ್ಕೆ ಸರಕಾರವೇ ಹೊಣೆಯಾಗಬೇಕಾಗುತ್ತದೆ. ಇನ್ನು ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರವಾಗುತ್ತಿದ್ದು ಅದಕ್ಕೆ ಸರಕಾರ ಅವಕಾಶ ಕೊಡಬಾರದು ಎನ್ನುವುದು ನಮ್ಮ ಕೋರಿಕೆಯಾಗಿದೆ. ತಕ್ಷಣ ನಮ್ಮ ಮನವಿಯನ್ನು ಪರಿಗಣಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸರಕಾರ ನೀಡಲು ಮುಂದಾಗಬೇಕು ಎಂದೂ ಅವರು ಆಗ್ರಹಿಸಿದರು.
ಇಂದಿನ ಅರೆಬೆತ್ತಲೆ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಯುವಕರು ಭಾಗವಹಿಸಿದ್ದರೆ, ಮೆರವಣಿಗೆಯಲ್ಲಿ ಬೈಲೂರು, ಕೊಪ್ಪದಮಕ್ಕಿ, ಮಂಕಿ ಭಾಗದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ