
ಭಟ್ಕಳ: ಶಿಲಾಮಯ ದೇಗುಲಗಳ ನಿರ್ಮಾಣದ ಹಿಂದೆ ಬಹುದೊಡ್ಡ ವಿಜ್ಞಾನ ಅಡಗಿದೆ, ನಮ್ಮ ಪೂರ್ವಿಕರು ಅಂದ ಚೆಂದ ನೋಡಲು ಶಿಲಾಮಯ ದೇಗುಲಗಳನ್ನು ನಿರ್ಮಿಸಿದ್ದಲ್ಲ ಅದರ ಹಿಂದಿನ ವಿಜ್ಞಾನ ನಾವು ತಿಳಿದುಕೊಳ್ಳಬೇಕಾಗಿದೆ ಎಂದು ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದರು.
ಅವರು ಶಿರಾಲಿಯ ಹಳೇಕೊಟೆ ಶ್ರೀ ಹನುಮಂತ ದೇವಸ್ಥಾನದ ಶಿಲಾಮಯ ದೇಗುಲದ ಲೋಕಾರ್ಪಣೆ ಹಾಗೂ ದೇವರ ಪುನರ್ ಪ್ರತಿಷ್ಟಾ ಕಾರ್ಯಕ್ರಮದ 7ನೇ ದಿನದ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭೆಯನ್ನು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಿಜವಾಗಿ ವಾಸ್ತು ಪ್ರಕಾರ ನಿರ್ಮಿಸಿದ ದೇವಾಲಯಗಳಲ್ಲಿ ಒಂದು ರೀತಿಯ ಕಂಪನ, ದೈವೀಕತೆ ಇರುತ್ತದೆ. ದೇವರ ಮೂರ್ತಿಯಿಂದ ಬೀಳುವ ಪ್ರಸಾದ ಮುಖ್ಯವಾದುದಲ್ಲ, ಯಾವ ಅಪೇಕ್ಷೆಯೂ ಇಲ್ಲದೇಯೇ ನಾವು ದೇವಸ್ಥಾನಕ್ಕೆ ಹೋಗಿ ನಮಸ್ಕರಿಸುವುದೇ ಭಕ್ತಿ. ದೇವರಿಗೆ ಹೊರೆಕಾಣಿಕೆ ಸಲ್ಲಿಸುವುದೆಂದರೆ ಅದು ನಮ್ಮ ವೈಭವದ ಸಂಕೇತವಲ್ಲ, ಬದಲಾಗಿ ಆತನ ಶ್ರಮದ ಸಂಕೇತವಾಗಿದೆ, ಈ ದೇವಾಲಯಕ್ಕೆ ಎಲ್ಲಾ ಸಮಾಜದವರು ಹೊರೆಗಾಣಿಕೆಯನ್ನು ಸಲ್ಲಿಸಿರುವುದು ಅವರ ಶ್ರಮದ ಪ್ರತೀಕವಾಗಿದೆ ಎಂದರು.
ಇಂತಹ ದೇವಾಲಯಗಳನ್ನು ನಿರ್ಮಾಣ ಮಾಡುವ ಅವಕಾಶ ಜನತೆಗೆ ಶತಮಾನಕ್ಕೊಮ್ಮೆ ದೊರೆಯುತ್ತದೆ ಎಂದು ಅವರು ಈ ಭಾಗದ ಜನರ ಭಾಗ್ಯದಿಂದ ಈ ದೇವಾಲಯ ನಿರ್ಮಾಣವಾಗಿದೆ ಎಂದರು.
ತಪಸ್ಸು, ಮಂತ್ರಗಳು ಕೇವಲ ಒಂದು ವರ್ಗದವರಿಗೆ ಮಾತ್ರ ಸೀಮಿತ ಎಂದು ನಾವು ತಿಳಿದು ಕೊಂಡಿದ್ದೆವು ಆದರೆ ಅದೂ ಒಂದು ವಿಜ್ಞಾನವಾಗಿದ್ದು ಎಲ್ಲರಿಗೂ ಇದರಲ್ಲಿ ಮುಕ್ತ ಅವಕಾಶವಿದೆ ಎಂದ ಅವರು ದೇವಾಲಯಗಳಲ್ಲಿ, ಗುರು ಹಿರಿಯರ ಎದುರು ಶಾಂತವಾಗಿ ಕುಳಿತು ಧ್ಯಾನ ಮಾಡಿದಾಗಿ ಮನಸ್ಸು ತುಂಬಾ ಶಾಂತವಾಗುತ್ತದೆ ಎಂದರು.
ದೇವಾಲಯಗಳು ಶೃದ್ಧಾ ಭಕ್ತಿಯ ಕೇಂದ್ರವಾಗಬೇಕೇ ವಿನಹ ಉಳ್ಳವರ ಬೇಡಿಕೆಯ ಕೇಂದ್ರವಾಗಬಾರದು. ಹಲವರು ತಮ್ಮ ಇಷ್ಟಾರ್ಥಗಳನ್ನು ಸಿದ್ಧಸು ಎಂದು ದೇವರಿಗೆ ಹರಕೆ ಹೊರುತ್ತಾರೆ, ತಮ್ಮ ಹರಿಕೆ ತೀರಿದ ಮೇಲೆ ದೇವರಿಗೆ 108 ತೆಂಗಿನ ಕಾಯಿಯನ್ನು ಕೂಡಾ ಒಡೆಯುತ್ತಾರೆ ಎಂದ ಅವರು ಇದು ದೇವರನ್ನು ಕೂಡಾ ನಮ್ಮ ಅಂತಸ್ತಿನಿAದ ಅಳೆದಂತಾಗುತ್ತದೆ. ಉಳ್ಳವರು ಹರಿಕೆಯ ರೂಪದಲ್ಲಿ ದೇವರಿಗೆ ಸಮರ್ಪಿಸಿದರೆ, ಇಲ್ಲದೇ ಇದ್ದವರು ಏನು ಮಾಡಬೇಕು ಎನ್ನುವ ಪ್ರಶ್ನೆ ಕಾಡುತ್ತದೆ ಎಂದರು.
ಏಕಾಗ್ರತೆ ಎಂದರೆ ನಾವು ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಡುವುದಾಗಿದೆ, ಹಾಗೇ ನಿಯಂತ್ರಣ ಮಾಡುತ್ತಾ ನಾವು ದೇವರನ್ನು ಕಾಣಲು ಸಾಧ್ಯವಾಗುತ್ತದೆ. ಧ್ಯಾನ ಮಾಡುವವರ ಮನಸ್ಸು ಹೆಚ್ಚು ಏಕಾಗ್ರತೆಯನ್ನು ಹೊಂದಿರುತ್ತದೆ. ಇದು ಪುಸ್ತಕ ಓದುವುದರಿಂದ, ಬೇರೆಯವರಿಂದ ಕಲಿಯುವುದಲ್ಲ, ಅದನ್ನು ಇಂತಹ ಉತ್ತಮ ವಾಸ್ತುಪ್ರಕಾರದ ದೇವಾಲಯಗಳಲ್ಲಿ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ದೇವಾಲಯಗಳನ್ನು ಉಳ್ಳವರು ಮತ್ತು ಇಲ್ಲದವರು ಸೇರಿ ನಿರ್ಮಾಣ ಮಾಡಿದಾಗ ಮಾತ್ರ ಅದೊಂದು ಶೃದ್ಧಾ ಭಕ್ತಿಯ ಕೇಂದ್ರವಾಗಲು ಸಾಧ್ಯವಾಗುವುದು. ನಂಬಿಕೆ, ಭಾವುಕತೆ, ಶೃದ್ಧೆಯಿಂದ ದೇವಾಲಯವನ್ನು ನಿರ್ಮಾಣ ಮಾಡಬೇಕು ಎಂದರು.
ರಾಮ ಮಂದಿರ ನಿರ್ಮಾಣದ ಕುರಿತು ನಾವು ಅನೇಕ ಹಾಸ್ಯ, ವ್ಯಂಗ್ಯಗಳನ್ನು ಕೇಳಿದ್ದೇವೆ, ಆದರೆ ಇಂದು ಅದೆಲ್ಲವನ್ನು ಮೀರಿ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದರೆ ಇದು ದೇವರನ್ನ ನಾವು ನೋಡುವ ಭಾಗ್ಯ ಎಂದರು. ನಾವು ದೇವಾಲಯವನ್ನು ಭಕ್ತಿ, ಶೃದ್ಧೆಯಿಂದ ಕಟ್ಟುತ್ತೇವೆ ಎಂದ ಅವರು ಹನುಮಂತನಿಗೆ ತನ್ನ ನಿಜವಾದ ಶಕ್ತಿಯ ಅರಿವಿರಲಿಲ್ಲ, ಆದರೆ ಜಾಂಬವAತ ನೆನಪಿಸಿದ್ದರಿಂದ ಹನುಮಂತ ಸಮುದ್ರವನ್ನೇ ದಾಟಿ ಸೀತೆಯನ್ನು ಹುಡುಕಿದ ಎಂದ ಅವರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹಿಂದೂ ಸಮಾಜವನ್ನು ಜಾಂಬವAತ ನೆನಪಿಸಿದ ಮಾದರಿಯಲ್ಲಿ ಬಡಿದೆಬ್ಬಿಸಿ ಜಾಗೃತಗೊಳಿಸುತ್ತಿರುವುದು ಸಂತಸ ತಂದಿದೆ ಎಂದರು. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾರಾಯಣ ಗುರುಗಳ ಹೆಸರಿನಲ್ಲಿ ನಾಲ್ಕು ವಸತಿ ಶಾಲೆಗಳನ್ನು ಮಂಜೂರಿ ಮಾಡಿ ಪ್ರತಿ ಶಾಲೆಗೆ 29 ಕೋಟಿ ರೂಪಾಯಿಗಳನ್ನು ಮೀಸಲಿಡುವ ಮೂಲಕ ಪ್ರಥಮವಾಗಿ ಹಿಂದುಳಿದ ವರ್ಗದವರನ್ನು ಗುರುತಿಸುವ ಕಾರ್ಯ ಮಾಡಿದ್ದಾರೆ ಎಂದರು.
ವೇದಿಕೆಯಲ್ಲಿ ನಾಮಧಾರಿ ಸಮಾಜದ ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಕಮಿಟಿಯ ಅಧ್ಯಕ್ಷ ಸುಬ್ರಾಯ ನಾಯ್ಕ, ಜೀರ್ಣೋಧ್ದಾರ ಸಮಿತಿ ಅಧ್ಯಕ್ಷ ಕೃಷ್ಣಾ ನಾಯ್ಕ, ಶಾಸಕ ಸುನಿಲ್ ನಾಯ್ಕ, ದೀಪಕ್ ನಾಯ್ಕ ಹೊನ್ನಾವರ, ಜೆ.ಜೆ. ನಾಯ್ಕ, ತಹಸೀಲ್ದಾರ್ ಡಾ. ಸುಮಂತ್ ಬಿ.ಇ., ತಾ.ಪಂ.ಇ.ಒ. ಪ್ರಭಾಕರ ಚಿಕ್ಕನಮನೆ, ಈಶ್ವರ ನಾಯ್ಕ, ಕೃಷ್ಣಾ ನಾಯ್ಕ ಆಸರಕೇರಿ ಉಪಸ್ಥಿತರಿದ್ದರು. ದೇವಸ್ಥಾನ ಧರ್ಮದರ್ಶಿ ಸುಬ್ರಾಯ ನಾಯ್ಕ ಸ್ವಾಗತ ಕೊರಿದರು. ಶಿಕ್ಷಕ ಪರಮೇಶ್ವರ ನಾಯ್ಕ, ನಾರಾಯಣ ನಾಯ್ಕ ನಿರ್ವಹಿಸಿದರು.
ಸಂಚಾಲಕ ಶಿವಾನಂದ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ