March 16, 2025

Bhavana Tv

Its Your Channel

ಭಟ್ಕಳ-ಸಾಗರ ರಸ್ತೆಯಲ್ಲಿ ಹೆಂಗಸರನ್ನು ಕಾಡುತ್ತಿರುವ ಅರೆಹುಚ್ಚ

ಭಟ್ಕಳ: ಕಳೆದ 15-20 ದಿನಗಳಿಂದ ಅರೆಹುಚ್ಚನೋರ್ವ ಭಟ್ಕಳ ತಾಲೂಕಿನ ಸಬ್ಬತ್ತಿ ಕ್ರಾಸ್ ಸೇರಿದಂತೆ ಸಾಗರರೋಡ್ ಮಾರ್ಗದುದ್ದಕ್ಕೂ ಅಲ್ಲಲ್ಲಿ ಕಾಡುಪ್ರದೇಶದಲ್ಲಿ ಅಡಗಿನಿಂತು ರಸ್ತೆಯಲ್ಲಿ ಸಂಚರಿಸುವ ಹೆಂಗಸರನ್ನು ಅಡ್ಡಗಟ್ಟಿ ಅಶ್ಲೀಲ ವರ್ತನೆ ತೋರುತ್ತಿರುವ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ.

ಗಿಡದ ಮೊದೆ ಅಥವಾ ಮರಗಳ ಮರೆಯಲ್ಲಿ ಒಮ್ಮೊಮ್ಮೆ ಬೆತ್ತಲಾಗಿ ಅಡಗಿ ನಿಲ್ಲುವ ಈ ಅರೆಹುಚ್ಚ ಒಂಟಿ ಹೆಂಗಸರನ್ನು ಕಂಡೊಡನೆ ರಸ್ತೆಗೆ ಓಡಿ ಬರುತ್ತಾನೆ. ವಿವಿಧ ರೀತಿಯಲ್ಲಿ ಸನ್ನೆ ಮಾಡಿ ಮಹಿಳೆಯರನ್ನು ಕರೆಯುತ್ತ ವಿಕೃತಿಯನ್ನು ಮೆರೆಯುತ್ತಿದ್ದಾನೆ. ಬಹಳಷ್ಟು ವಿದ್ಯಾರ್ಥಿನಿಯರು, ಕೆಲ ಶಿಕ್ಷಕಿಯರು ಇದೇ ಮಾರ್ಗದಲ್ಲಿ ನಿತ್ಯವೂ ಪ್ರಯಾಣಿಸುತ್ತಿದ್ದು, ಅರೆಹುಚ್ಚನ ನಡವಳಿಕೆ ವಿಪರೀತ ಆತಂಕವನ್ನು ಹುಟ್ಟುಹಾಕಿದೆ. ಸ್ಕೂಟಿಯಲ್ಲಿ ಸಾಗುವ ಮಹಿಳೆಯರು ಈತನ ವರ್ತನೆಯಿಂದಾಗಿ ಕಂಗಾಲಾಗಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. 15 ದಿನಗಳ ಹಿಂದೆ ಸಾಗರರೋಡ್ ಕಾಡುವ ಪ್ರದೇಶದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದ ಈತ, ನಂತರ ಕೆಲ ದಿನಗಳಿಂದ ದಾರಿಹೋಕರಿಗೆ ಸಿಕ್ಕಿರಲಿಲ್ಲ. ಆದರೆ ಕಳೆದ 2-3 ದಿನಗಳಿಂದ ಈಚೆಗೆ ಮತ್ತೆ ಈತನ ಆಟಾಟೋಪ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಲಭ್ಯ ಇರುವ ಮಾಹಿತಿಯ ಪ್ರಕಾರ ಈತ ಇಲ್ಲಿನ ಹನುಮಾನನಗರದ ಕಡೆಯವನು ಎಂದು ಹೇಳಲಾಗುತ್ತಿದ್ದು, ಈ ಹಿಂದೆಯೂ ಇದೇ ರೀತಿ * ವರ್ತಿಸಿ ಪೊಲೀಸರ ಅತಿಥಿಯಾಗಿದ್ದ, ಈತನನ್ನು ನಿಯಂತ್ರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅಪಾಯ ಎದುರಾಗಲಿದ್ದು, ಪೊಲೀಸರು ತುರ್ತು ಕ್ರಮ ಜರುಗಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಅರೆಹುಚ್ಚನ ಕಾಟದಿಂದ ಭಯಗೊಂಡಿರುವ ಶಿಕ್ಷಕಿಯೋರ್ವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುವ ಬಗ್ಗೆಯೂ ಚರ್ಚೆ ನಡೆಸಿರುವ ಬಗ್ಗೆ ಮಾಹಿತಿ ಲಭಿಸಿದೆ.

error: