
ಭಟ್ಕಳ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಭಟ್ಕಳ ತಾಲೂಕಿನ ಸೂಸಗಡಿ ಹೋಬಳಿಯ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಮ್ಮನಕೆರೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಡಾ. ಸುಮಂತ್ ಬಿ.ಇ., ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಈ ಕಾರ್ಯಕ್ರಮವು ಒಂದು ಉತ್ತಮ ಕಾರ್ಯಕ್ರಮವಾಗಿದ್ದು ಇದರಲ್ಲಿ ನೀಡಿದ ಅರ್ಜಿಯನ್ನು ನಿರ್ಧಿಷ್ಟ ಕಾಲ ಮಿತಿಯೊಳಗೆ ಪರಿಹರಿಸಲಾಗುವುದು. ಅಲ್ಲದೇ ಹೆಚ್ಚಿನ ಅರ್ಜಿಗಳನ್ನು ನೀಡಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವೀಗೊಳಿಸಲು ಕರೆ ನೀಡಿದರು.
ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ ಲಿಂಕ್ ಮಾಡಬೇಕು ಎನ್ನುವ ಆದೇಶವನ್ನು ನೀಡಿದ್ದು ನಿರ್ಧಿಷ್ಟ ಕಾಲಮಿತಿಯೊಳಗೆ ಪ್ರತಿಯೋರ್ವರೂ ಕೂಡಾ ಓಟರ್ ಹೆಲ್ಪಲೈನ್ ಆಪ್ ಮೂಲಕ ಲಿಂಕ್ ಮಾಡಬೇಕು ಎಂದು ಕೋರಿದರು. ತಾಲೂಕಾ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿನ ಸೌಲಭ್ಯಗಳ ಮಾಹಿತಿಯನ್ನು ನೀಡುತ್ತಾರೆ. ಪ್ರತಿಯೋರ್ವರೂ ಕೂಡಾ ಆಯಾಯ ಇಲಾಖೆಯಲ್ಲಿ ತಮಗೆ ಅಗತ್ಯವಿರುವ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕರೆ ನೀಡಿದ ಅವರು ಇಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುವುದು, ಕೋವಿಡ್ ವಾಕ್ಸಿನೇಷನ್ ಪಡೆಯದವರಿಗೂ ಕೂಡಾ ಇಲ್ಲಿ ಅವಕಾಶವಿದೆ. ಇಂದಿನ ಕಾರ್ಯಕ್ರಮದಲ್ಲಿ ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಬಿ.ಪಿ.ಎಲ್. ಕಾರ್ಡ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಿದರೆ ಸಂಜೆಯಾಗುವುದರೊಳಗೆ ಪರಿಶೀಲನೆ ಮಾಡಿ ಕಾರ್ಯಾದೇಶವನ್ನು ನೀಡಲಾಗುವುದು ಎಂದೂ ಹೇಳಿದರು.
ಪಹಣಿಯಲ್ಲಿ ಲೋಪ ದೋಷವಿದ್ದರೆ, ಹೆಸರು, ವಿಸ್ತೀರ್ಣದಲ್ಲಿ ದೋಷವಿದ್ದರೆ, ಆಧಾರ್ ಕಾರ್ಡ, ಚುನಾವಣಾ ಗುರುತಿನ ಚೀಟಿ ಮಾಡಿಸುವುದಿದ್ದರೆ, ತಿದ್ದುಪಡಿ ಮಾಡುವುದಿದ್ದರೆ, ಕಾರ್ಮಿಕ ಕಾರ್ಡ, ಜಾಬ್ ಕಾರ್ಡ ಮಾಡಿಸುವವರಿಗೂ ಕೂಡಾ ಇಲ್ಲಿ ಅವಕಾಶವಿದ್ದು ಎಲ್ಲರೂ ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆಯೂ ತಹಸೀಲ್ದಾರ್ ಕರೆ ನಿಡಿದರು.
ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ಮಾತನಾಡಿ ತಾಲೂಕಾ ಮಟ್ಟದ ಅಧಿಕಾರಿಗಳು ಎಲ್ಲರೂ ಇಲ್ಲಿದ್ದಾರೆ, ಬೇರೆ ಬೇರೆ ಇಲಾಖೆಯಲ್ಲಿ ಬರುವ ಯೋಜನೆಗಳು, ಆರ್ಥಿಕ ಸೌಲಭ್ಯಗಳನ್ನು ಯಾವ ರೀತಿಯಲ್ಲಿ ಪಡೆಯಬೇಕು, ಹೇಗೆ ಪಡೆಯಬೇಕು ಎನ್ನುವ ಕುರಿತು ನಾಗರೀಕರಿಗೆ ತಿಳಿಯುವುದಿಲ್ಲ. ಇಲ್ಲಿ ಎಲ್ಲಾ ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಅವಕಾಶವಿದೆ. ವಯೋವೃದ್ಧರು ತಮ್ಮ ಪಿಂಚಣಿಗಾಗಿ ಕಚೇರಿಗೆ ಅಲೆದಾಡಲು ಸಾಧ್ಯವಾಗುವುದಿಲ್ಲ, ಆದರೆ ಇಲ್ಲಿಯೇ ಅವರಿಗೆ ಆದೇಶ ಪತ್ರ ನೀಡುವುದರಿಂದ ಸಹಕಾರಿಯಾಗುತ್ತದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ತಾಲೂಕಾ ಮಟ್ಟದ ಆಧಿಕಾರಿಗಳು ತಾವೇ ಸ್ವತಹ ಹಾಜರಿದ್ದು ತಮ್ಮ ತಮ್ಮ ಅರ್ಜಿಗಳನ್ನು ಪರಿಶೀಲಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಗ್ರಾಮೀಣ ಠಾಣೆಯ ಸಬ್ ಇನ್ಸಪೆಕ್ಟರ್ ಗಣೇಶ ನಾಯ್ಕ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಸ್ತೆಯ ಕುರಿತೇ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು ಗ್ರಾಮೀಣ ಭಾಗದಲ್ಲಿ ಇನ್ನು ಕೂಡಾ ರಸ್ತೆ ಸಂಪರ್ಕಕ್ಕೆ ಪರದಾಡುವ ಪರಿಸ್ಥಿತಿ ಇದೆ ಎನ್ನುವುದನ್ನು ಬಿಂಬಿಸುವAತಿದೆ. ಬೆಳಕೆ ಕಂಚಿಕೇರಿ ರೈಲ್ವೇ ಕ್ರಾಸಿಂಗ್ನಲ್ಲಿ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಆ ಭಾಗದ ನಾಗರೀಕರು ಮನವಿ ಸಲ್ಲಿಸಿದರು. ಬೆಳಕೆ-ಕಂಚಿಕೇರಿ-ಕಾನ್ಮದ್ಲು ರಸ್ತೆ ಅಗಲೀಕರಣ, ಕಂಚಿಕೇರಿಯಲ್ಲಿರುವ ಕಚ್ಚಾ ರಸ್ತೆಗಳನ್ನು ರಿಪೇರಿ ಮಾಡುವುದು, ಕಂಚಿಕೇರಿ ಕಾನ್ಮದ್ಲು ರಸ್ತೆಗೆ ಚರಂಡಿ ಮಾಡುವುದು, ಕಂಚಿಕೇರಿ-ಕಾನ್ಮದ್ಲು ತನಕ ಕುಡಿಯುವ ನೀರಿನ ವ್ಯವಸ್ಥೆ, ಪಿನ್ನುಪಾಲು ಹೊಳೆಯಲ್ಲಿ ಗಿಡಗಳನ್ನು ಕಡಿದು ಹೂಳೆತ್ತುವುದು, ಕಾನ್ಮದ್ಲುವಿನಲ್ಲಿ ೩ ಕಿ.ಮಿ. ರಸ್ತೆ ನಿರ್ಮಾಣ ಮಾಡುವುದು, ಮದ್ಗಾರ್ಕೇರಿ ರಸ್ತೆ, ಗರಡಿಹಿತ್ಲ ರಸ್ತೆ ರಿಪೇರಿ, ಕೃಷಿ ಭೂಮಿಗೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸುವುದು, ಅರಣ್ಯಭೂಮಿ ಸಕ್ರಮ ಮಾಡುವುದು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಸವಿತಾ ಗೊಂಡ ಮತ್ತಿತರರು ತಮಗೆ ಕಳೆದ ಕೆಲವು ವರ್ಷಗಳಿಂದ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲವಾಗಿದ್ದು ಶೀಘ್ರ ಸಮಸ್ಯೆ ಬಗೆಹರಿಸಿ ಜಾತಿ ಪ್ರಮಾಣ ಪತ್ರ ನೀಡುವಂತಾಗಬೇಕು ಎಂದು ಮನವಿ ಸಲ್ಲಿಸಿದರು.
ತಮಗೆ ಅರಣ್ಯ ಇಲಾಖೆಯಿಂದ ಜಾಗಾ ಮಂಜೂರಿಯಾಗಿದೆ. ಮಂಜೂರಿ ಆದೇಶದಲ್ಲಿ ಕೊಟ್ಟ ಸರ್ವೆ ನಂಬ್ರ ಹಾಗೂ ನಾವು ಉಳಿದುಕೊಂಡಿರುವ ಸರ್ವೆ ನಂಬ್ರ ನಕಾಶೆಯ ಪ್ರಕಾರ ಅದಲು ಬದಲಾಗಿದೆ ಸರಿಪಡಿಸಿಕೊಡಿ ಎಂದು ಅಮ್ಮ ಗೊಂಡ ಮನವಿ ಸಲ್ಲಿಸಿದರು. ಸ್ಥಳದಲ್ಲಿಯೇ ಹಾಜರಿದ್ದ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಅರ್ಹರಿಗೆ ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಬಿ.ಪಿ.ಎಲ್. ಕಾರ್ಡ ಇತ್ಯಾದಿಗಳನ್ನು ವಿತರಿಸಲಾಯಿತು. ನಂತರ ಸಂಜೆ ಸಭೆಗೆ ಆಗಮಿಸಿದ ಶಾಸಕ ಸುನಿಲ್ ನಾಯ್ಕ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಕಾರ್ಯಾದೇಶವನ್ನು ವಿತರಿಸಿ ಮಾತನಾಡಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ