June 26, 2024

Bhavana Tv

Its Your Channel

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಡಿನಬಾಳ ವಲಯದ ಒಕ್ಕೂಟಗಳ ಪದಗ್ರಹಣ ಸಮಾರಂಭ

ಹೊನ್ನಾವರ ತಾಲೂಕಿನ ಕೊಳಗದ್ದೆಯ ಶ್ರೀ ಸಿದ್ಧಿವಿನಾಯಕ ದೇವಾಲಯದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಡಿನಬಾಳ ವಲಯದ ಒಕ್ಕೂಟಗಳ ಪದಗ್ರಹಣ ಸಮಾರಂಭ ಅದ್ದೂರಿಯಾಗಿ ನಡೆಯಿತು.

ಹಡಿನಬಾಳ ವಲಯದಲ್ಲಿ ಬರುವ ಕೊಳಗದ್ದೆ, ಚಿಕ್ಕನಕೋಡ್, ಕೆಂಚಗಾರ್, ಹಡಿನಬಾಳ ಮತ್ತು ಕಾವೂರು ಒಕ್ಕೂಟಗಳ ಪದಗ್ರಹಣವನ್ನು ಒಂದೇ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಜ್ಞಾನ ವಿಕಾಸ ಸ್ವ-ಸಹಾಯ ಸಂಘದ ಸದಸ್ಯರ ಪ್ರಾರ್ಥನೆ ಹಾಗೂ ಕುಣಿತ ಭಜನೆಯೊಂದಿಗೆ ಭಕ್ತಿಪೂರ್ವಕವಾಗಿ ಕಾರ್ಯಕ್ರಮ ಪ್ರಾರಂಭವಾಯಿತು. ತಾಲೂಕ ಯೋಜನಾಧಿಕಾರಿ ವಾಸಂತಿ ಅಮೀನ್ ಜ್ಯೋತಿ ಬೆಳಗುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು “ಈ ಭಾಗದಲ್ಲಿ ಸ್ವ-ಸಹಾಯ ಸಂಘ ಹಾಗೂ ಪ್ರಗತಿಬಂಧು ಸಂಘಗಳ ಸದಸ್ಯರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಪ್ರತಿಫಲವಾಗಿ ಉದ್ಯೋಗದಲ್ಲಿ, ಕೃಷಿಯಲ್ಲಿ ಗಣನೀಯವಾಗಿ ಶ್ರೇಯಸ್ಸು ಕಂಡಿದ್ದಾರೆ” ಎಂದರು.

“ಕರ್ನಾಟಕ ಜಾನಪದ ಲೋಕ ಪ್ರಶಸ್ತಿ” ವಿಜೇತ ಕಲಾವಿದೆ ಕೇಶಿ ಗೌಡ ಕಾವೂರು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಶಿ ಗೌಡ “ನಾನು ಅನಕ್ಷರಸ್ಥೆ. ನನ್ನ ಮಕ್ಕಳು ಯೋಜನೆಯಲ್ಲಿ ಪ್ರಕಟವಾಗುವ ‘ನಿರಂತರ ಪ್ರಗತಿ’ ಪುಸ್ತಕ ಓದುವುದನ್ನು ನೋಡಿ ನಾನೂ ವಿದ್ಯೆಯ ಮಹತ್ವವನ್ನು ಅರಿತುಕೊಂಡಿದ್ದೇನೆ” ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಖರ್ವ ಶಾಲೆಯ ನಿವೃತ್ತ ಶಿಕ್ಷಕಿ ಗಣಪಿ ಭಟ್ ಮಾತನಾಡಿ “ವ್ಯಸನವೆಂಬುದು ಅಕ್ಷಯ ಪಾತ್ರೆಯಲ್ಲಿ ತೂತು ಇದ್ದ ಹಾಗೆ. ಅದಕ್ಕೋಸ್ಕರ ಯಾರೊಬ್ಬರೂ ಮದ್ಯಪಾನ, ಧೂಮಪಾನದಂತ ಯಾವುದೇ ವ್ಯಸನಕ್ಕೆ ದಾಸರಾಗದೆ ಗೌರವದ ಬದುಕು ಸಾಗಿಸಬೇಕು” ಎಂದರು.

ಒಕ್ಕೂಟದ ನೂತನ ಪದಾಧಿಕಾರಿಗಳಿಗೆ, ನಿಕಟ ಪೂರ್ವ ಪದಾಧಿಕಾರಿಗಳು ತಾಂಬೂಲ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಬಳಿಕ ನಿಕಟಪೂರ್ವ ಪದಾಧಿಕಾರಿಗಳು ತಮ್ಮ ಅನುಭವದ ಅನಿಸಿಕೆ ಹೇಳಿದರೆ; ನೂತನ ಪದಾಧಿಕಾರಿಗಳು ತಮ್ಮ ನಿರೀಕ್ಷೆಯ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಗಣ್ಯರಾದ ಹರಿಯಪ್ಪ ನಾಯ್ಕ್ ಹುಡಗೋಡು, ಸಿದ್ದಿವಿನಾಯಕ ದೇವಸ್ಥಾನದ ಅಧ್ಯಕ್ಷರಾದ ಗೋಪಾಲ ಶಾನಬಾಗ್ ಉಪಸ್ಥಿತರಿದ್ದರು. ಖರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಭವಾನಿ ಗೌಡ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಲಯ ಮೇಲ್ವಿಚಾರಕ ಶ್ರೀ ರಾಜು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ವಿಶೇಷವೆಂಬತೆ ಮನೆಯ ಅಂಗಳದಲ್ಲಿ ಸಿಗುವ ಹೂವು ಹಾಗೂ ಬಣ್ಣದ ಎಲೆಗಳನ್ನು ಬಳಸಿ ನಿರ್ಮಿಸಿದ ಕಂಗೊಳಿಸುವ ಹೂ ಗುಚ್ಚಗಳು ಹಾಗೂ ನೈಸರ್ಗಿಕ ವಸ್ತುಗಳನ್ನು ಬಳಸಿ ಶೃಂಗರಿಸಿದ ಸುಂದರವಾದ ವೇದಿಕೆ, ಗಣ್ಯರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಯೋಜನೆಯ ಸೇವಾಪ್ರತಿನಿಧಿಗಳು, ಸ್ವ-ಸಹಾಯ ಸಂಘ ಹಾಗೂ ಪ್ರಗತಿಬಂಧು ಸಂಘಗಳ ಸದಸ್ಯರುಗಳು ಹಾಜರಿದ್ದರು.

ವರದಿ: ನರಸಿಂಹ ನಾಯ್ಕ್ ಹರಡಸೆ.

error: