December 22, 2024

Bhavana Tv

Its Your Channel

ರೋಟರಿ ಕ್ಲಬ್‌ನಿಂದ ಕುಮಟಾ ತಾಲೂಕಾಸ್ಪತ್ರೆಗೆ ಸುಮಾರು ೧ ಕೋಟಿ ವೆಚ್ಚದ ಅತ್ಯಗತ್ಯ ಪರಿಕರಗಳನ್ನು ಅಳವಡಿಸುವ ಯೋಜನೆ ಯಶಸ್ಸು.

ಕುಮಟಾ: ರೋಟರಿ ಕ್ಲಬ್‌ನಿಂದ ತಾಲೂಕಾಸ್ಪತ್ರೆಗೆ ಸುಮಾರು ೧ ಕೋಟಿ ವೆಚ್ಚದ ಅತ್ಯಗತ್ಯ ಪರಿಕರಗಳನ್ನು ಅಳವಡಿಸುವ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗುತ್ತಿದ್ದು ಈ ಭಾಗದ ತುರ್ತು ಆರೋಗ್ಯ ಸೇವೆಗೆ ಮಹತ್ವದ ಕೊಡುಗೆ ನೀಡಲಾಗುತ್ತಿದೆ ಎಂದು ರೋಟರಿ ಅಧ್ಯಕ್ಷ ಶಶಿಕಾಂತ ಕೊಳೆಕರ ತಿಳಿಸಿದರು.

ಅವರು ರೋಟರಿ ಹಾಲ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದರು. ಸುಮಾರು ೩೦ ಲಕ್ಷರೂ ರೋಟರಿ ಗ್ಲೋಬಲ್ ಅನುದಾನವನ್ನು ಮೊದಲ ಬಾರಿಗೆ ಪಡೆದು ಇಷ್ಟೊಂದು ಮಹತ್ವದ ಕಾರ್ಯಕ್ಕೆ ತೊಡಗಿರುವುದು ಐತಿಹಾಸಿಕವಾಗಿದೆ. ಕಳೆದ ವರ್ಷ ರೋಟರಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಬಂದಿದ್ದ ಕುಮಟಾ ಮೂಲದವರೇ ಆದ ಶರದ್ ಪೈ ತಾಲೂಕಿನ ಆರೋಗ್ಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಯೋಜನೆಗೆ ಚಾಲನೆ ನೀಡಿದ್ದರು. ಅದರಂತೆ ಹಿರೇಗುತ್ತಿ ಮೂಲದ ಪ್ರಕಾಶ ನಾಯ್ಕ ೩೦ ಲಕ್ಷರೂಗಳಿಗೂ ಹೆಚ್ಚು ಮೌಲ್ಯದ ಐಸಿಯು ಹೊಂದಿದ ಆಂಬ್ಯುಲೆನ್ಸ ನೀಡಿದ್ದಾರೆ. ಇನ್ನುಳಿದ ಮೊತ್ತವನ್ನು ರೋಟರಿ ಬಂಧುಗಳು ಹಾಗೂ ದಾನಿಗಳಿಂದ ಸಂಗ್ರಹಿಸಿದ್ದೇವೆ.
ಈಗಾಗಲೇ ತಾಲೂಕಾಸ್ಪತ್ರೆಗೆ ಬೇಕಾದ ಅಗತ್ಯ ಪರಿಕರಗಳನ್ನು ಗುರುತಿಸಿ ಖರೀದಿ ಪ್ರಕ್ರಿಯೆ ನಡೆದಿದೆ. ಅಧ್ಯಕ್ಷನಾಗಿ ಜೂನ್ ೩೦ಕ್ಕೆ ನಮ್ಮ ಅಧಿಕಾರಾವಧಿ ಮುಗಿಯುತ್ತದಾದರೂ ಯೋಜನೆ ಮುಂದುವರಿಕೆಗೆ ಎಂ.ಬಿ.ಪೈ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಮಿತಿ ಸಂಘಟಿಸಲಾಗಿದೆ. ರೋಟರಿ ಕ್ಲಬ್ ಸಾಮಾಜಿಕ ಜವಾಬ್ದಾರಿಯಿಂದ ಕೈಗೆತ್ತಿಕೊಂಡಿರುವ ಯೋಜನೆಗೆ ದಾನಿಗಳ ಸಹಯೋಗ ಇನ್ನಷ್ಟು ಬೇಕಾಗಿದೆ ಎಂದರು.
ರೋಟರಿ ಜಿಲ್ಲಾ ಪ್ರಮುಖ ಜಿ. ಎಸ್. ಹೆಗಡೆ ಮಾತನಾಡಿ, ತಾಲೂಕಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂಬ ಸಾರ್ವಜನಿಕ ಬೇಡಿಕೆ ಈಡೇರಿಲ್ಲ. ಆಪತ್ಕಾಲದಲ್ಲಿ ರೋಗಿಗಳನ್ನು ದೂರದ ಮಣಿಪಾಲ, ಗೋವಾ, ಹುಬ್ಬಳ್ಳಿಗೆ ಒಯ್ಯುವಷ್ಟರಲ್ಲಿ ಪ್ರಾಣಾಪಾಯ ಹೆಚ್ಚುತ್ತಿರುವದರಿಂದ ನಮ್ಮ ತಾಲೂಕಾಸ್ಪತ್ರೆಯನ್ನು ಯಾವುದೇ ತುರ್ತು ಆರೋಗ್ಯ ಅಗತ್ಯಕ್ಕೆ ತಕ್ಕಂತೆ ಮೇಲ್ದೆರ್ಜೆಗೆ ಏರಿಸುವ ಹಾಗೂ ಎಲ್ಲ ಸೌಲಭ್ಯಗಳನ್ನು ಅಳವಡಿಸುವ ಪ್ರಯತ್ನ ನಮ್ಮದಾಗಿದೆ ಎಂದರು.
ಹಿರಿಯ ವೈದ್ಯ ಡಾ. ಡಿ.ಡಿ.ನಾಯಕ ಮಾತನಾಡಿ, ಕುಮಟಾ ತಾಲೂಕಾಸ್ಪತ್ರೆಗೆ ಒಳ್ಳೆಯ ಹೆಸರಿದೆ, ಉತ್ತಮ ವೈದ್ಯರಿದ್ದಾರೆ. ಆದರೆ ಸೂಕ್ತ ಆಧುನಿಕ ಉಪಕರಣಗಳ ಕೊರತೆ ಇದೆ. ಅದಕ್ಕೆ ಪ್ರಾಮುಖ್ಯತೆ ಕೊಡುವ ಉದ್ದೇಶದಿಂದ ರೋಟರಿ ಕ್ಲಬ್ ದೊಡ್ಡ ಕೆಲಸಕ್ಕೆ ಕೈಹಾಕಿದೆ. ಜನ ಸಹಕರಿಸಿದರೆ ಶೀಘ್ರದಲ್ಲಿ ತಾಲೂಕಾಸ್ಪತ್ರೆ ಎಲ್ಲ ಜೀವರಕ್ಷಕ ಸೌಲಭ್ಯಗಳನ್ನು ಹೊಂದಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಕಾರ್ಯದರ್ಶಿ ಅತುಲ್ ಕಾಮತ್, ವಿನಾಯಕ ಹೆಗಡೆ, ವಸಂತ ರಾವ್, ಸುರೇಶ ಭಟ್, ಎನ್ ಆರ್. ಗಜು, ಜೈವಿಠ್ಠಲ ಕುಬಾಲ, ಡಾ. ನಮೃತಾ ಶಾನಭಾಗ, ಶಿಲ್ಪಾ ಜಿನರಾಜ ಇದ್ದರು.

error: