ಕುಮಟಾ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಗತ್ಯವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಕರೊನಾ ಸಂಕಟಕಾಲದಲ್ಲಿ ಸಮರ್ಪಕ ಪರಿಹಾರ ಹಾಗೂ ಪ್ಯಾಕೇಜ್ ಕೊಡುವಲ್ಲೂ ಸರ್ಕಾರ ಎಡವಿದೆ ಎಂದು ಖಂಡಿಸಿ ಜೆಡಿಎಸ್ ತಾಲೂಕು ಘಟಕದಿಂದ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ವಿ.ಕಟ್ಟಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರೊನಾ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ವಿಧಿಸಿದ ಲಾಕ್‌ಡೌನ್‌ನಿಂದ ರೈತರಾದಿಯಾಗಿ ಕೋಟ್ಯಂತರ ಕುಟುಂಬಗಳು ನಿರ್ಗತಿಕವಾಗಿವೆ. ಇಂಥ ಕಷ್ಟಕಾಲದಲ್ಲಿ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದರೆ, ಗೊಬ್ಬರ, ವಿದ್ಯುತ್, ತೈಲ ಇಂಧನ ಬೆಲೆ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಆದ್ದರಿಂದ ರಾಜ್ಯದ ಜನತೆಯ ಮೇಲಿನ ತೆರಿಗೆ ಒತ್ತಡ ಕಡಿಮೆ ಮಾಡಬೇಕು. ಇಂಧನ, ವಿದ್ಯುತ್, ಗೊಬ್ಬರ ಮುಂತಾದವುಗಳ ಬೆಲೆ ಇಳಿಸಬೇಕು. ಕರೊನಾದಿಂದ ಜೀವಹಾನಿ ಹೊಂದಿದ ಕುಟುಂಬಗಳಿಗೆ ಕನಿಷ್ಟ ೫ ಲಕ್ಷರೂ ಪರಿಹಾರ ಕೊಡಬೇಕು. ದುಡಿಯುವ ವ್ಯಕ್ತಿಯನ್ನೇ ಕಳೆದುಕೊಂಡ ಕುಟುಂಬದ ಬದುಕು ರೂಪಿಸುವ ಕೆಲಸವಾಗಬೇಕು. ಮೀನುಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಉತ್ತರ ಕನ್ನಡ ಜಿಲ್ಲೆಯ ಕಲ್ಲಂಗಡಿ, ಶೇಂಗಾ ಇನ್ನಿತರ ತರಕಾರಿ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು. ಕರೊನಾದಿಂದ ದೊಡ್ಡ ಊರು ಬಿಟ್ಟು ಮನೆ ಸೇರಿರುವ ಉದ್ಯೋಗಿಗಳು ಇಂಟರ್ ನೆಟ್ ಸಮಸ್ಯೆಯಿಂದ ಉದ್ಯೋಗ ಕಳೆದುಕೊಳ್ಳುವಂತಾಗಿದ್ದು ಇಂಟರ್‌ನೆಟ್ ವ್ಯವಸ್ಥೆ ಬಲಪಡಿಸಬೇಕು ಎಂದು ಮನವಿಯಲ್ಲಿ ಕೋರಲಾಯಿತು.
ಇದಕ್ಕೂ ಮುನ್ನ ಗಿಬ್ ವೃತ್ತದ ಬಳಿ ಸೇರಿದ ಪ್ರತಿಭಟನಾಕಾರರು ಬೆಲೆ ಏರಿಕೆ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಹಸೀಲ್ದಾರ ಕಾರ್ಯಾಲಯಕ್ಕೆ ಬಂದು ಮನವಿ ಸಲ್ಲಿಸಿದರು. ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ಸೂರಜ ನಾಯ್ಕ, ಯುವ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕೆ.ಪಟಗಾರ, ತಾಲೂಕಾಧ್ಯಕ್ಷ ಸಿ.ಜಿ.ಹೆಗಡೆ, ಬಲೀಂದ್ರ ಗೌಡ, ಡಿ.ಎಚ್.ಪಟಗಾರ, ದತ್ತ ಪಟಗಾರ, ರಾಘವೇಂದ್ರ ನಾಯ್ಕ ಇನ್ನಿತರರು ಇದ್ದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ