ಕುಮಟಾ: ಕೊವಿಡ್ ಲಸಿಕೆ ನೀಡುವ ವಿಚಾರ ಕುಮಟಾದಲ್ಲಿ ಗೊಂದಲದ ಗೂಡಾಗಿ, ಲಸಿಕಾ ಕೇಂದ್ರದಲ್ಲಿ ಜನ ಸಂದಣಿ ಉಂಟಾಗಿ ಸಾರ್ವಜನಿಕರು ತಾಲೂಕಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಪೂರೈಕೆಯಾಗುವ ಕೊವಿಡ್ ಲಸಿಕೆಯಲ್ಲಿ ಶೇ.೫೦ ರಷ್ಟು ೨ ನೆಯ ಡೋಸ್‌ಗೆ ಮೀಸಲಿಟ್ಟು, ಲಸಿಕೆ ಲಭ್ಯತೆಯ ಆಧಾರದ ಮೆಲೆ ೧೮ ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದವರಿಗೆ ೧ ನೆಯ ಡೋಸ್ ಲಸಿಕಾಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ೧೮ ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ ೧ ನೆಯ ಡೋಸ್ ಲಸಿಕಾಕರಣ ಆರಂಭವಾದ ಬೆನ್ನಲ್ಲೆ, ಕುಮಟಾ ತಾಲೂಕಿನ ಬಹುತೇಕ ಎಲ್ಲಾ ಕೇಂದ್ರಗಳಲ್ಲಿ ಅಪಾರ ಜನಸಂದಣಿಯೇ ನೆರೆದಿದೆ.
ಕುಮಟಾ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ ಬಳಿಯ ಪುರಭವನದಲ್ಲಿ ೭೦೦ ಡೋಸ್ ಮಾತ್ರ ಲಭ್ಯವಿದ್ದು, ಬೆಳ್ಳಂಬೆಳಿಗ್ಗೆಯೇ ಅಪಾರ ಸಂಖ್ಯೆಯ ಜನರು ಇಲ್ಲಿಗೆ ಆಗಮಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸರತಿ ಸಾಲು ರಸ್ತೆಯುದ್ಧಕ್ಕೂ ಚಾಚಿದೆ.
ಗೊಂದಲ ಏರ್ಪಟ್ಟಿರುವುದನ್ನು ಗಮನಿಸಿದ ಶಾಸಕ ದಿನಕರ ಶೆಟ್ಟಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾಧ್ಯಮದವರ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ಎಲ್ಲರಿಗೂ ಕೋವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ನ್ನು ನೀಡುತ್ತಿದೆ. ಈಗಾಗಲೇ ಶೇ. ೫೦ ರಷ್ಟು ಜನರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿದೆ. ಅದರಂತೆ ಜಿಲ್ಲೆಗೆ ಪ್ರತಿನಿತ್ಯ ೧೦ ರಿಂದ ೧೫ ಸಾವಿರ ಲಸಿಕೆ ಬರುತ್ತಿದ್ದು, ಅದನ್ನು ತಾಲೂಕಾವಾರು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲಾಗುತ್ತಿದೆ. ಸೋಮವಾರ ಪುರಸಭವನದಲ್ಲಿ ೭೫೦ ಡೋಸ್ ಬಂದಿದ್ದು, ಸಾರ್ವಜನಿಕರ ಜೊತೆ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲಾಗುತ್ತಿದೆ. ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡದೇ, ಅಧಿಕಾರಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಹಕರಿಸಬೇಕು ಎಂದರು.
ತಾಲೂಕಿನಲ್ಲಿ ಸುಮಾರು ೩ ಸಾವಿರ ಕೊವ್ಯಾಕ್ಸಿನ್ ನೀಡಲಾಗಿದೆ. ಕೊವ್ಯಾಕ್ಸಿನ್ ಕೇವಲ ೪ ವಾರದೊಳಗಡೆ ೨ ನೆಯ ಡೋಜ್ ಪಡೆಯಬೇಕು. ಆದರೆ ಸಮಯ ಮುಕ್ತಾಯಗೊಂಡಿದೆ. ಬೆಳಿಗ್ಗೆ ೬ ಘಂಟೆಯಿAದ ವಿದ್ಯಾರ್ಥಿಗಳು ಮತ್ತು ಹಿರಿಯರು ಕಾದು ಕುಳಿತುಕೊಳ್ಳವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಾಡಳಿತ ವೈಫಲ್ಯ ಕಾಣುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಜೆ.ಡಿ.ಎಸ್ ಮುಖಂಡ ಸೂರಜ ನಾಯ್ಕ ಸೋನಿ ಹೇಳಿದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ