December 22, 2024

Bhavana Tv

Its Your Channel

ಜಿಲ್ಲೆಯಲ್ಲಿ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹ, ಕುಮಟಾ ಗಿಬ್ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿವರೆಗೆ ಪ್ರತಿಭಟನೆ

ವರದಿ: ನಟರಾಜ ಗದ್ದೆಮನೆ ಕುಮಟಾ

ಕುಮಟಾ:ಜಿಲ್ಲೆಯಲ್ಲಿ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ, ಕರವೇ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಗಿಬ್ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿ ವರೆಗೆ ಬುಧವಾರ ವಿನೂತನ ಪ್ರತಿಭಟನೆ ನಡೆಸಿ, ಸಹಾಯ ಆಯುಕ್ತರ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಗಾಯಗೊಂಡ ವ್ಯಕ್ತಿಯ ಅಣುಕು ಪ್ರದರ್ಶನ ನಡೆಸಿದ ಪ್ರತಿಭಟನಾಕಾರರು ಸ್ಟೆಚ್ಚರ ಮೂಲಕ ಗಿಬ್ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿ ವರೆಗೆ ಸಾಗಿಸಿ, ಸರ್ಕಾರ ಹಾಗೂ ಜನಪ್ರತಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ ಮಾತನಾಡಿ, ಮಲ್ಟಿಸ್ಪೇಶಾಲಿಟಿ ಆಸ್ಪತ್ರೆಯಿಲ್ಲದೇ ರಾಜ್ಯದಲ್ಲಿ ಅತಿ ಹೆಚ್ಚು ಜೀವ ಕಳೆದುಕೊಂಡ ಜಿಲ್ಲೆ ಉತ್ತರಕನ್ನಡವಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನಮ್ಮ ಜಿಲ್ಲೆಯು ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಜಿಲ್ಲೆಯಲ್ಲಿ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ನಿರ್ಮಾಣವಾಗುವವರೆಗೆ ಸ್ವಾಭಿಮಾನಿ ಬಣದಿಂದ ನಿರಂತರ ಹೋರಾಟ ನಡೆಸುತ್ತೇವೆ. ಸಂಸದ ಅನಂತಕುಮಾರ ಹೆಗಡೆ ೩೦ ವರ್ಷಗಳಿಂದ ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆ. ಜಿಲ್ಲೆಗೆ ಅವರ ಕೊಡುಗೆ ಶೂನ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ೬ ಶಾಸಕರು, ಸಚಿವರು, ವಿಧಾನಸಭಾ ಸಭಾಧ್ಯಕ್ಷರು ನಮ್ಮ ಜಿಲ್ಲೆಯಲ್ಲಿಯೇ ಇದ್ದಾರೆ. ಆದರೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗದಿರುವುದು ನಮ್ಮ ದೌರ್ಭಾಗ್ಯ ಎಂದ ಅವರು, ಆಸ್ಪತ್ರೆ ನಿರ್ಮಾಣ ಮಾಡದಿದ್ದರೆ ಮುಖ್ಯಮಂತ್ರಿ ನಿವಾಸ ಹಾಗೂ ವಿಧಾನಸೌಧದ ಎದುರು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಸಹಾಯಕ ಆಯುಕ್ತ ರಾಹುಲ್ ಪಾಂಡೆ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಮಂಜು, ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ, ಪ್ರಮುಖರಾದ ನಾಗರಾಜ ಹೆಗಡೆ, ಕತಗಾಲ ಘಟಕಾರ್ಧಯಕ್ಷ ಮಾರುತಿ ಆನೆಗುಂದಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: