ರೋಣ ನಗರದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಸಿ.ಇ.ಟಿ. ಪರೀಕ್ಷೆಗೆ ಸುವ್ಯವಸ್ಥಿತವಾಗಿ ನಡೆಸಲು ಕೇಂದ್ರದಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳದ ಕಾರಣ ಪರೀಕ್ಷಾರ್ಥಿಗಳು, ಪಾಲಕರು ಆಕ್ರೋಶ ವ್ಯಕ್ತ ಪಡಿಸಿದರು.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು ಪರೀಕ್ಷೆಯ ಕೊಠಡಿಗಳಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ಇರುವುದರಿಂದ ಪರೀಕ್ಷಾರ್ಥಿಗಳು ಬೆಳಗಿನ ಅವಧಿಯ ಪರೀಕ್ಷೆಯನ್ನು ಕತ್ತಲ ಕೋಣೆಯಲ್ಲಿ ಬರೆದರು. ಅಷ್ಟೇ ಅಲ್ಲದೆ ಡೆಸ್ಕ್ ತುಂಬಾ ಧೂಳು ಇದ್ದ ಕಾರಣ ಉತ್ತರ ಪತ್ರಿಕೆಗಳನ್ನು ಬರೆಯುವ ಮೊದಲು ವಿದ್ಯಾರ್ಥಿಗಳೇ ತಮ್ಮ ಬಳಿ ಇದ್ದ ಕರವಸ್ತ್ರ ಹಾಗೂ ಹಾಳೆಯಿಂದ ಸ್ವಚ್ಚಗೊಳಸಿದ ಘಟನೆಗಳು ನಡೆದಿವೆ. ಕಾಲೇಜಿನ ಆವರಣಲ್ಲಿ ಎಲ್ಲೆಂದರಲ್ಲಿ ಬಿಯರ್ ಬಾಟಲ್ ಗಳು ಹಾಗೂ ಮದ್ಯದ ಪಾಕೇಟ್ ಗಳು ಬಿದ್ದಿದ್ದವು ಇದ್ದರಿಂದ ಕಾಲೇಜಿನ ಪ್ರಾಚಾರ್ಯರ ಮೇಲೆ ಹಾಗೂ ಪರೀಕ್ಷಾ ಕೇಂದ್ರವೆAದು ಆಯ್ಕೆ ಮಾಡಿ ಸರಿಯಾದ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ದ ವಿವಿಧೆಡೆಯಿಂದ ಬಂದಿದ್ದ ಪರೀಕ್ಷಾರ್ಥಿಗಳ ಪಾಲಕರು ಹರಿಹಾಯ್ದರು.
ಈ ವೇಳೆ ಮಾಹಿತಿ ನೀಡಿದ ಹೊಳೆಆಲೂರ ಗ್ರಾಮದ ಮಹಾಬಲೇಶ ಗಾಣಿಗೇರ, ನಮ್ಮ ಮಕ್ಕಳು ಕೊರೊನಾ ಭಯದ ನಡುವೆ ಪರೀಕ್ಷೆಗೆ ಬಂದಿದ್ದಾರೆ ಆದರೆ ಪರೀಕ್ಷಾ ಕೇಂದ್ರದ ಅವ್ಯವಸ್ಥೆಯನ್ನು ನೋಡಿ ಬೇಜಾರು ಆಗಿದೆ. ಸ್ವಚ್ಚತೆ ಇಲ್ಲದ ಕೊಠಡಿಯಲ್ಲಿ ಮಕ್ಕಳು ಪರೀಕ್ಷೆ ಬರೆಯಲು ಹೇಗೆ ಮನಸ್ಸು ಬರುತ್ತದೆ. ಇದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಪರೀಕ್ಷಾ ಕೇಂದ್ರದ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಾಚಾರ್ಯ ವೀರಪ್ಪ ಬಡಿಗೇರ, ನಮ್ಮ ಮಹಾವಿದ್ಯಾಲಯಕ್ಕೆ ಕುಡುಕರ, ಪುಂಡರ ಹಾವಳಿ ಮಿತಿಮೀರಿದೆ. ರಾತ್ರಿಯಾದರೆ ಸಾಕು ಮಹಾವಿದ್ಯಾಲಯಕ್ಕೆ ಲಗ್ಗೆ ಇಡುತ್ತಾರೆ. ಆವರಣದಲ್ಲಿ ಕುಡಿದು ಬಾಟಲ್ ಗಳನ್ನು ಎಸೆದು ಹೋಗುತ್ತಾರೆ. ಕಾಲೇಜಿನ ವೈಯರ್, ಬಲ್ಬ್ ಹಾಗೂ ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದಕಾರಣ ಕೊಠಡಿಗಳಿಗೆ ಬೆಳಕಿನ ವ್ಯವಸ್ಥೆ ಮಾಡಿರಲಿಲ್ಲ. ಪರೀಕ್ಷೆ ನಡೆದ ಮಧ್ಯಾಹ್ನದ ಒಳಗಾಗಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ವರದಿ ವಿರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ