December 22, 2024

Bhavana Tv

Its Your Channel

ವಿದ್ಯಾ ವಿಕಾಸ್ ಶಾಲೆಯಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಮಳವಳ್ಳಿ : ಹೆಣ್ಣು ಎಂದರೆ ಶಕ್ತಿ, ಮಾತೃ ಸ್ವರೂಪಿಯಾದ ಅವಳನ್ನು ನಾವು ಪೂಜ್ಯನೀಯ ಭಾವನೆಯಲ್ಲಿ ನೋಡಬೇಕೆ ಹೊರತು ಆಕೆಯನ್ನು ಭೋಗದ ವಸ್ತುವನ್ನಾಗಿ ನೋಡಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಾದೇಶ ತಿಳಿಸಿದರು.
ಪಟ್ಟಣದ ವಿದ್ಯಾ ವಿಕಾಸ್ ಶಾಲೆಯಲ್ಲಿ ತಾಲ್ಲೂಕು ಕಾನೂನು ಸಮಿತಿ, ವಕೀಲರ ಸಂಘ, ಭಾರತ್ ವಿಕಾಸ್ ಪರಿಷತ್ ಸಹಯೋಗದೊಂದಿಗೆ ನಡೆದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳನ್ನು ಪೂಜ್ಯನೀಯ ಭಾವನೆಯಲ್ಲಿ ನೋಡುವ ನಮ್ಮ ದೇಶದಲ್ಲಿ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಿರುವುದು ನಿಜಕ್ಕೂ ದುರಾದೃಷ್ಟಕರವಾದ ವಿಚಾರವಾಗಿದ್ದು, ಹೆಣ್ಣು ಮಗು ಹುಟ್ಟುತ್ತದೆ ಎಂದು ತಿಳಿದಾಗಲೇ ಭ್ರೂಣ ಹತ್ಯೆಯಂತಹ ಪೈಶಾಚಿಕ ಕೃತ್ಯಕ್ಕೆ ಕೆಲವರು ಮುಂದಾಗುತ್ತಿದ್ದಾರೆ. ಹದಿಹರೆಯದೇ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರದಂತಹ ಹೀನ ಕೃತ್ಯಗಳ ಜತೆಗೆ ಮದುವೆ ನಂತರವೂ ಹೆಣ್ಣಿನ ಮೇಲೆ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳು ನಿರಂತರವಾಗಿ ನಡೆಯುತ್ತಿದ್ದು, ಇಂತಹ ಕೃತ್ಯಗಳಿಗೆ ಕಾನೂನಿನ ಮೂಲಕ ಕಡಿವಾಣ ಹಾಕುವುದರ ಜತೆಗೆ ಸಮಾಜದ ಜನರ ನೈತಿಕ ಹೊಣೆಗಾರಿಕೆ ಬಹುಮುಖ್ಯ ಎಂದರು.
ಅಪರ ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಚಿದಾನಂದ ಪಟ್ಟಣ ಶೆಟ್ಟಿ ಮಾತನಾಡಿ, ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಕಠಿಣ ಶ್ರಮದೊಂದಿಗೆ ನಮ್ಮ ದೇಶದ ಕೀರ್ತಿಪಾತಕೆಯನ್ನು ಎತ್ತಿ ಹಿಡಿಯುವ ಹಾಗೂ ಚರಿತ್ರೆಯಲ್ಲಿ ನಿಮ್ಮ ಹೆಸರು ಬರೆಯುವಂತಹ ಕೆಲಸ ಮಾಡಿ ಹೆತ್ತವರಿಗೆ, ಶಾಲೆಗೆ, ಸಮಾಜಕ್ಕೆ ಗೌರವ ತಂದುಕೊಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜರೀಫಾ ಬಾನು ಮಾತನಾಡಿ, ನಮ್ಮ ಸಮಾಜದ ಸುತ್ತಮುತ್ತ ಕ್ರೂರ ದೃಷ್ಟಿಗಳು ಹೆಣ್ಣು ಮಕ್ಕಳ ಮೇಲೆ ಬಿದ್ದಿರುತ್ತವೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬ ಸೂಕ್ಷ್ಮ ಗ್ರಹಿಕೆಯ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಕೀಲ ಎಚ್.ಪಿ.ರಮೇಶ್, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್. ಮಲ್ಲೇಶ್, ಮುಖಂಡರಾದ ಅಂದಾನಿಗೌಡ, ದೊಡ್ಡಣ್ಣ, ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಪ್ಯಾನಲ್ ವಕೀಲರು ಇದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: