March 15, 2025

Bhavana Tv

Its Your Channel

ರಾಷ್ಟ್ರ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರಕಾರಿ ನೌಕರರನ್ನು ಗುರುತಿಸುವ ಕಾರ್ಯ ಮಾಡಿದ ನೌಕರರ ಸಂಘದ ಕಾರ್ಯ ಶ್ಲಾಘನೀಯ -ತಹಸೀಲ್ದಾರ ರವಿಚಂದ್ರ

ಭಟ್ಕಳ: ಸಾರ್ವಜನಿಕರ ಕೆಲಸದ ಒತ್ತಡದೊಂದಿಗೆ ಇರುವ ಸರಕಾರಿ ನೌಕರರು ತಮ್ಮ ಸಾಂಸ್ಕೃತಿಕ, ಕ್ರೀಡಾ ಪ್ರತಿಭೆಯಲ್ಲಿ ರಾಷ್ಟ್ರ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರಕಾರಿ ನೌಕರರನ್ನು ಗುರುತಿಸುವ ಕಾರ್ಯ ಮಾಡಿದ ನೌಕರರ ಸಂಘದ ಕಾರ್ಯ ಶ್ಲಾಘನೀಯ ಎಂದು ತಹಸೀಲ್ದಾರ ರವಿಚಂದ್ರ ಹೇಳಿದರು.

ಅವರು ಬುಧವಾರದಂದು ಭಟ್ಕಳ ಮಿನಿ ವಿಧಾನ ಸೌಧದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳದ ವತಿಯಿಂದ ಅಕ್ಟೋಬರ್ ೨೨-೨೪ ರಂದು ದಾವಣಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸುವ ತಾಲೂಕಿನ ವಿವಿಧ ಇಲಾಖೆಗಳ ನೌಕರರರಿಗೆ ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

‘ಪ್ರತಿಭಾವಂತ ಸರಕಾರಿ ನೌಕರರನ್ನು ಗುರುತಿಸಿ ಸನ್ಮಾನಿಸುವುದು ಮಾನವೀಯ ಗುಣ. ಸಂಘವೂ ಈ ರೀತಿಯ ಕಾರ್ಯ ಮಾಡುವುದರಿಂದ ನೌಕರರಿಗೂ ಸಹ ಹುಮ್ಮಸು ಬರಲಿದೆ. ಸಾರ್ವಜನಿಕ ಕೆಲಸದ ಒತ್ತಡದಲ್ಲಿ ತಮ್ಮ ಪ್ರತಿಭೆಯ ಪ್ರದರ್ಶನ ಮಾಡುತ್ತಿರುವ ನೌಕರರ ಆಸಕ್ತಿ ಹೀಗೆ ಮುಂದುವರೆಯಲಿ. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪಾಲ್ಗೊಂಡ ಹಾಗೂ ಮುಂದೆ ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವವರಿಗೆ ಹಾರೈಸಿದರು.

ಉಪ ವಿಭಾಗ ಭಟ್ಕಳದ ಗ್ರೇಡ್- ೨ ತಹಸೀಲ್ದಾರ ಸಂತೋಷ ಭಂಢಾರಿ ಮಾತನಾಡಿ ‘ ಜಿಲ್ಲೆಯ೧೨ ತಾಲೂಕಿನಲ್ಲಿ ಭಟ್ಕಳ ಸರಕಾರಿ ನೌಕರರ ಸಂಘ ಈ ರೀತಿಯ ಕಾರ್ಯಕ್ಕೆ ಹೆಜ್ಜೆಯಿಟ್ಟಿದೆ. ಇದರಿಂದ ನೌಕರರಿಗೆ ಪ್ರೋತ್ಸಾಹ ಸಿಗಲಿದೆ. ಕ್ರೀಡೆಯು ಜೀವನದ ಅವಿಭಾಜ್ಯ ಅಂಗವಾಗಿದ್ದು, ನೌಕರರು ಅವರ ಬಿಡುವಿಲ್ಲದ ಸಮಯದಲ್ಲಿಯೂ ಸಹ ಸ್ಪರ್ಧೆಯಲ್ಲಿ ಭಾಗವಹಿಸಿ ಅವರ ಜೀವನದ ಮನಸ್ಸೋಲ್ಲಾಸ ಪಡೆದುಕೊಳ್ಳಲು ಸಾಧ್ಯ. ಕೆಲಸದ ಒತ್ತಡದಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಬೇಸರವಾಗುತ್ತದೆ. ಆದರೆ ಈ ರೀತಿಯ ಸನ್ಮಾನ ಹಾಗೂ ಕ್ರೀಡೆ ಚಟುವಟಿಕೆಗಳಲ್ಲಿ ಪಾಲ್ಗೊಂಡಲ್ಲಿ ಆತ್ಮಸ್ಥೈರ್ಯ ವ್ರದ್ಧಿಯಾಗಲಿದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣ ಸಮನ್ವಯಧಿಕಾರಿ ಯಲ್ಲಮ್ಮ ‘ನೌಕರರಿಗೂ ಸಹ ಜವಾಬ್ದಾರಿಯುತ ಕೆಲಸದ ಜೊತೆಗೆ ಪಠ್ಯ ಚಟುವಟಿಕೆ ಬೇಕಿದೆ. ಇದರಿಂದ ಬದಲಾವಣೆ ಸಿಗುವುದರೊಂದಿಗೆ ಅವರಿಗೆ ಸೋಲು ಗೆಲುವಿನ ಅರಿವು ಲಭಿಸಲಿದೆ. ಮುಂದಿನ ದಿನದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ನಿಮಗೆಲ್ಲರಿಗೂ ಅವಕಾಶ ಸಿಗಲಿ ಎಂದು ಹಾರೈಸಿದ ಅವರು ತಾಲೂಕಾ ಸರಕಾರಿ ನೌಕರರ ಸಂಘದ ಕಾರ್ಯ ಚಟುವಟಿಕೆ ಸಹ ಇದೇ ರೀತಿ ಮುಂದುವರೆಯಲಿ ಎಂದು ಹಾರೈಸಿದರು.

ಅಭಿನಂದನೆ ಪಡೆದವರ ಪರವಾಗಿ ಮಾತನಾಡಿ ನಾಗೇಶ ಮಡಿವಾಳ ಅವರು ‘ಈ ಬಾರಿ ಸಂಘವು ಕ್ರಿಯಾಶೀಲವಾಗಿದೆ. ಸಮಾಜ ಸೇವೆಯಲ್ಲಿಯೂ ಸಹ ದಾಪುಗಾಲಿಟ್ಟಿದೆ. ಮುಂದಿನ ದಿನಗಳಲ್ಲಿ ಸಂಘದ ನಿರೀಕ್ಷೆ ಹೆಚ್ಚಿಸಲಿದ್ದೇವೆ. ಹಾಗೂ ಇದೇ ರೀತಿ ಪ್ರೋತ್ಸಾಹ ನೌಕರರಿಗೆ ಬೇಕಿದೆ ಎಂದು ಕ್ರತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಮೋಹನ ನಾಯ್ಕ ‘ಹೊಸದೊಂದು ಚಿಂತನೆಯೊAದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಸಂಘದ ಉದ್ದೇಶ ಮಾರ್ಗ ಸ್ಪಷ್ಟವಾಗಿದೆ. ಕೋವಿಡ ಸಮಯದಲ್ಲಿ ೧೪೦ ಮಂದಿ ಆಶಾ ಕಾರ್ಯಕರ್ತೆಯರಿಗೆ ಬ್ಯಾಗ್ ವಿತರಿಸಿದ್ದೇವೆ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದ್ದು ನಮಗೆ ಸರಕಾರದಿಂದ ಅಭಿನಂದನೆ ಪತ್ರ ನೀಡಿದ್ದಾರೆ. ರಾಜ್ಯದ ಯಾವುದೇ ತಾಲೂಕು ಸಂಘದಲ್ಲಿ ಈ ರೀತಿಯ ಕಾರ್ಯಕ್ರಮ ಮಾಡಿಲ್ಲದನ್ನು ಗಮನಿಸಿದ ರಾಜ್ಯ ಸಂಘಕ್ಕೆ ನಮ್ಮ ಮೇಲೆ ಹೆಮ್ಮೆ ಇದೆ. ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಬೆನ್ನು ತಟ್ಟಿ ಪ್ರಶಂಸೆ ವ್ಯಕ್ತಪಡಿಸಿರುವ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದಲ್ಲಿ ರಾಷ್ಟ್ರ, ರಾಜ್ಯ ಹಾಗು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ೩೧ ಮಂದಿ ಸರಕಾರಿ ನೌಕರರಿಗೆ ಪ್ರಶಸ್ತಿ ಪತ್ರದ ಜೊತೆಗೆ ಬ್ಯಾಗ್ ನೀಡಿ ಅಭಿನಂದಿಸಿದರು.

ವೇದಿಕೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ತಾಲೂಕಾ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಸಂಶುದ್ದೀನ್, ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಅಧ್ಯಕ್ಷ ಉಲ್ಲಾಸ ನಾಯ್ಕ, ತೋಟಗಾರಿಕೆ ಇಲಾಖೆ ಅಧಿಕಾರಿ ಶ್ವೇತಾ ಕರ್ಕಿ ಸೇರಿದಂತೆ ತಾಲೂಕು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.

error: