
ಭಟ್ಕಳ: ಕುಂದಾಪುರ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದನ್ನು
ನಿಷೇಧಿಸಿರುವ ಕಾಲೇಜು ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿ ಭಟ್ಕಳದಲ್ಲಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳು ಭಟ್ಕಳ ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮಿನಿ ವಿಧಾನಸೌಧದ ಮುಂದೆ ಜಮಾಯಿಸಿದ ವಿದ್ಯಾರ್ಥಿಗಳು ಶಿಕ್ಷಣವನ್ನು ರಾಜಕೀಯಗೊಳಿಸಬಾರದು, ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಬಾರದು ಎಂದು ಬರೆಯಲಾದ ಭಿತ್ತಿ ಪತ್ರಗಳನ್ನ ಪ್ರದರ್ಶಿಸಿದರು. ನಂತರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು, ಭಾರತವು ಜ್ಯಾತ್ಯಾತೀತ ರಾಷ್ಟ್ರವಾಗಿದ್ದು, ಎಲ್ಲ ಜಾತಿ, ಧರ್ಮದವರಿಗೂ ತಮ್ಮ ಧರ್ಮಾಚರಣೆಗೆ ಅವಕಾಶ ನೀಡಲಾಗಿದೆ. ಕುಂದಾಪುರ ಕಾಲೇಜಿನಲ್ಲಿ ಪ್ರಾಚಾರ್ಯರು ನಡೆದುಕೊಂಡ ರೀತಿಯು ಭಾರತದ ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹಲವಾರು ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕಿನ ಬಗ್ಗೆ ಸ್ಪಷ್ಟಪಡಿಸಲಾಗಿದ್ದು, ಕಾನೂನು ಬಾಹೀರವಾಗಿ ನಡೆದುಕೊಂಡ ಕುಂದಾಪುರ ಸರಕಾರಿ ಕಾಲೇಜಿನ ಪ್ರಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಭಟ್ಕಳ ಸಹಾಯಕ ಆಯುಕ್ತ ಮಮತಾದೇವಿ ಮನವಿಯನ್ನು ಸ್ವೀಕರಿಸಿದರು.
ಶನಿವಾರ ಸಂಜೆ ಭಟ್ಕಳ ಮಿನಿ ವಿಧಾನಸೌಧದ ಎದುರು ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು: ಸೇರುತ್ತಿರುವ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಎಸ್‌ಐ ಬಿ.ಸುಮಾ, ಎಸ್‌ಐ ಯಲ್ಲಪ್ಪ ಸ್ಥಳದಲ್ಲಿ ಉಪಸ್ಥಿತರಿದ್ದು ಪರಿಸ್ಥಿತಿಯ ಅವಲೋಕನ ನಡೆಸಿದರು. ನಂತರ ಸ್ಥಳಕ್ಕೆ ಬಂದ ಸಿಪಿಐ ದಿವಾಕರ, ಯಾವುದೇ ಪೂರ್ವಾನುಮತಿ ಇಲ್ಲದೇ ವಿದ್ಯಾರ್ಥಿಗಳು ಒಂದೆಡೆ ಸೇರಿರುವುದಕ್ಕೆ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಸಕ್ತವಾಗಿ ಪ್ರತಿಭಟನೆಗೆ ಅವಕಾಶ ಇಲ್ಲ. ಯಾವುದೇ ಅನುಮತಿ ಇಲ್ಲದೇ ಇಲ್ಲಿ ಸೇರಿದ್ದು ಯಾಕೆ, ಯಾರನ್ನು ಕೇಳಿ ಇಲ್ಲಿಗೆ ಬಂದಿದ್ದೀರಿ, ವಿದ್ಯಾರ್ಥಿಗಳು ಒಂದೆಡೆ ಸೇರಲು ಸಂದೇಶ ಹರಿಬಿಟ್ಟವರು ಯಾರು, ಇಲ್ಲಿ ಏನಾದರೂ ನಡೆದರೆ ಅದಕ್ಕೆ ಯಾರು ಹೊಣೆ. ಏಕಾಏಕಿ ನೂರಾರು ಸಂಖ್ಯೆಯಲ್ಲಿ ಜನರು ಬಂದರೆ ಪೊಲೀಸ್ ಭದ್ರತೆಯನ್ನು ಒದಗಿಸುವುದು ಹೇಗೆ ಎಂದು ಪ್ರಶ್ನಿಸಿದರು. ಇದರಿಂದ ತಬ್ಬಿಬ್ಬಾದ ವಿದ್ಯಾರ್ಥಿಗಳು, ನಾವು ಯಾವುದೇ ಪ್ರತಿಭಟನೆ ನಡೆಸುತ್ತಿಲ್ಲ. ವಿದ್ಯಾರ್ಥಿಗಳು ಸೇರುವುದಕ್ಕೆ ನಾವು ಪ್ರಚೋದಿಸಿಲ್ಲ. ನಾವು ಮನವಿ ನೀಡಿ ಇಲ್ಲಿಂದ ತೆರಳುತ್ತೇವೆ ಎಂದು ಪ್ರತಿಕ್ರಿಯಿಸಿದರು. ನಂತರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲು ಅವಕಾಶ ನೀಡಲಾಯಿತು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ