December 20, 2024

Bhavana Tv

Its Your Channel

ಜಿ.ಜಿ.ಹೆಗಡೆ ಬಾಳಗೋಡ ರವರ ಹೂವಿನುಂಗುರ ಕವನ ಸಂಕಲನ ಬಿಡುಗಡೆ

ವರದಿ: ವೇಣುಗೋಪಾಲ ಮದ್ಗುಣಿ

ಸಿದ್ದಾಪುರ:ಸಾಹಿತಿಗಳಾದವರಿಗೆ ಕವಿತೆ, ಸಾಹಿತ್ಯ ಒಳಗಿನಿಂದಲೇ ತುಡಿತವುಂಟು ಮಾಡುತ್ತದೆ. ಕಾವ್ಯ ಒಂದು ಅನುಭವ. ಕವಿತೆಗಳಲ್ಲಿ ಸೌಂದರ್ಯ ಪ್ರಜ್ಞೆ ಹಾಗೂ ರಸ ವಿಶ್ಲೇಷಣೆ ಅಗತ್ಯವಾಗಿದ್ದು ಈ ಲಕ್ಷಣಗಳು ಹೂವಿನುಂಗುರದಲ್ಲಿ ಕಂಡುಬರುತ್ತವೆ ಎಂದು ಸಾಹಿತಿ ಗಂಗಾಧರ ಕೊಳಗಿ ಹೇಳಿದರು.
ಸ್ಥಳೀಯ ಲಯನ್ಸ ಕ್ಲಬ್ ಸಂಘಟನೆಯಲ್ಲಿ ಸಿದ್ದಾಪುರದ ಹಾಳದಕಟ್ಟಾದಲ್ಲಿನ ಜಗದ್ಗುರು ಮುರುಘರಾಜೇಂದ್ರ ಅಂಧರ ಶಾಲೆಯ ಸಭಾಭವನದಲ್ಲಿ ಜಿ.ಜಿ.ಹೆಗಡೆ ಬಾಳಗೋಡ ಅವರ ಹೂವಿನುಂಗುರ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿ ಕವಿ ಮತ್ತು ಓದುಗ ಇಬ್ಬರಿಗೂ ಭಿನ್ನ ಅನುಭವಗಳನ್ನು ಕವಿತೆ ಉಂಟುಮಾಡುತ್ತವೆ. ಹೂವಿನುಂಗುರ ಕವಿತ ಸಂಕಲನದಲ್ಲಿ ವೈವಿಧ್ಯಮಯವಾದ ಕವಿತೆಗಳಿದ್ದು ಸಾಮಾಜಿಕ ಪ್ರಜ್ಞೆ ಮತ್ತು ಪರಿಸರದ ಕುರಿತಾದ ಕಾಳಜಿ ವ್ಯಕ್ತವಾಗಿವೆ. ಹೂವಿನುಂಗುರ ,ಎದೆಯ ದನಿ, ದೊಂಬರಾಟದವ ಮುಂತಾದ ಕವಿತೆಗಳು ಓದುಗನನ್ನು ತಟ್ಟುತ್ತವೆ ಎಂದರು.
ಜಿ.ಜಿ.ಹೆಗಡೆ ಬಾಳಗೋಡರ ಮತ್ತೊಂದು ಕೃತಿ ಪ್ರಾಚೀನ ಭಾರತದ ವೈಭವವನ್ನು ಬಿಡುಗಡೆ ಮಾಡಿದ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ಭಾರತದ ವೈಭವವನ್ನು ವರ್ಣಿಸುವುದೆಂದರೆ ಮಹಾಸಮುದ್ರದಲ್ಲಿ ಒಂದು ಬೊಗಸೆ ಮೊಗೆದು ತೋರಿದಂತೆ. ಭಾರತೀಯರ ಆಧ್ಯಾತ್ಮ, ಶಿಲ್ಪಕಲೆ, ಸಂಸ್ಕೃತ ಭಾಷೆಯ ಗ್ರಂಥಗಳು, ಆಯುರ್ವೇದ ವೈದ್ಯಕೀಯ ಕ್ಷೇತ್ರದ ಸಾಧನೆಗಳಿಗೆ ಅಳತೆಗೋಲಿಲ್ಲ. ಈ ಎಲ್ಲಾ ವಿಷಯಗಳನ್ನು ಪ್ರಾಚೀನ ಭಾರತದ ವೈಭವದಲ್ಲಿ ಕಟ್ಟಿಕೊಡುವ ಪ್ರಯತ್ನವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಮಾತನಾಡಿ ಸಾವಿರಾರು ಶಬ್ದಗಳ ಅರ್ಥವನ್ನು ಬಿಂಬಿಸುವ ಶಕ್ತಿ ನಾಲ್ಕುಸಾಲಿನ ಕವನಗಳಲ್ಲಿರುತ್ತದೆ ಎಂದರು. ಆಶಾಕಿರಣ ಟ್ರಸ್ಟ ಅಧ್ಯಕ್ಷ ಡಾ|ರವಿ ಹೆಗಡೆ ಹೂವಿನಮನೆ ಮಾತನಾಡಿ ಧನಾತ್ಮಕ ಚಿಂತನೆಯನ್ನು ಕೊಡಲು ಹೊರಟರೆ ಅದನ್ನು ಸ್ವೀಕರಿಸಲು ಮುಂದಾಗುವುದಿಲ್ಲ. ಬದಲಿಗೆ ಋಣಾತ್ಮಕವಾದ ಹೇಳಿಕೆ ಬಂದರೆ ಕುತೂಹಲದಿಂದ ಗಮನಿಸುವ ವಾತಾವರಣ ಸೃಷ್ಟಿಯಾಗಿದೆ ಎಂದರು. ಹಿರಿಯ ಸಾಹಿತಿ ಆರ್.ಕೆ.ಹೊನ್ನೇಗುಂಡಿಯವರು ಮಾತನಾಡಿ ಗೇಯತೆ ಇರುವುದು ಕಾವ್ಯವೆನಿಸುತ್ತದೆ. ಹೊಡೆ, ಬಡಿ, ಕಡಿಯಂತಹ ಕಾವ್ಯದ ಬದಲು ಹೃದಯ ಪರಿವರ್ತಿಸಿ ಮನೋವಿಕಾಸ ಮಾಡುವ ಕವನಗಳು ಬರಬೇಕು ಎಂದರು. ಕನ್ನಡ ಪುಸ್ತಕಗಳನ್ನು ಸ್ವೀಕರಿಸಿದ ತಾಲೂಕಾ ಕ.ಸಾ.ಪ. ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಲಯನ್ಸ ಅಧ್ಯಕ್ಷೆ ಶ್ಯಾಮಲಾ ರವಿ ಹೆಗಡೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕೃತಿಕಾರ ಜಿ.ಜಿ.ಹೆಗಡೆ ಬಾಳಗೋಡ ಸ್ವಾಗತಿಸಿದರು. ಸಾಹಿತಿ ತಮ್ಮಣ್ಣ ಬೀಗಾರ ಪ್ರಾಸ್ತಾವಿಕ ಮಾತನಾಡಿದರು. ಸ್ವರ್ಣಲತಾ ಶಾನಭಾಗ ನಿರ್ವಹಿಸಿದರು. ನಾಗರಾಜ ದೋಶೆಟ್ಟಿ ವಂದಿಸಿದರು.

error: