
ಭಟ್ಕಳ: ನಾವು ಕಳೆದ ಹತ್ತು ದಿನಗಳಿಂದ ತಹಸೀಲ್ದಾರ್ ಕಚೇರಿಯ ಪಕ್ಕದಲ್ಲಿ ಧರಣಿ ಸತ್ಯಾಗ್ರಹವನ್ನು ಮಾಡುತ್ತಿದ್ದು ನಮ್ಮ ನ್ಯಾಯಯುತವಾದ ಹಕ್ಕನ್ನು ಪಡೆಯಲಿಕ್ಕಾಗಿಯೇ ವಿನಹ ಯಾರದ್ದೇ ಹಕ್ಕನ್ನು ಕಸಿದುಕೊಳ್ಳಲಿಕ್ಕಲ್ಲ ಎಂದು ತಾಲೂಕಾ ಶ್ರೀ ಲಕ್ಷ್ಮೀ ಸರಸ್ವತಿ ಮೊಗೇರ ಸಂಘದ ಅಧ್ಯಕ್ಷ ಅಣ್ಣಪ್ಪ ಮೊಗೇರ ಸ್ಪಷ್ಟಪಡಿಸಿದ್ದಾರೆ.
ಅವರು ಮೊಗೇರ ಸಮಾಜದ ಧರಣಿ ಹತ್ತು ದಿನ ಪೂರೈಸಿದ ಹಿನ್ನೆಲೆಯಲ್ಲಿ ಪತ್ರಿಕಾ ಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕೆಲವೊಂದು ಸಂಘಟನೆಯವರು ಮೆರವಣಿಗೆಯ ಮೂಲಕ ಬಂದು ಅವರಿಗೆ ಸೌಲಭ್ಯವನ್ನು ಕೊಡಬಾರದು ಎಂದು ಮನವಿ ಕೊಟ್ಟಿರುವುದು ಸಮಾಜ ಸಮಾಜದ ಮಧ್ಯೆ ದ್ವೇಷದ ಭಾವನೆಯನ್ನು ಹೆಚ್ಚಿಸುತ್ತದೆ. ಇದು ಸರಿಯಲ್ಲ, ನಾವು ನಮ್ಮ ಹಕ್ಕನ್ನು ಸರಕಾರದಲ್ಲಿ ಕೇಳುತ್ತಿದ್ದೇವೆಯೇ ವಿನಹ ಯಾರ ಪಾಲನ್ನೂ ಕೇಳುತ್ತಿಲ್ಲ, ಇಂತಹ ಮನಸ್ಥಿತಿಯನ್ನು ನಮ್ಮ ಸಮಾಜ ಖಂಡಿಸುತ್ತದೆ ಎಂದೂ ಅವರು ಹೇಳಿದರು.
ಇಂತಹ ಹೇಳಿಕೆಗಳನ್ನು ಕೊಡುತ್ತಾ ಹೋದರೆ ನಮ್ಮ ಸಮಾಜ ಉಗ್ರ ಪ್ರತಿಕ್ರಿಯೆಯನ್ನು ಕೊಡಬೇಕಾಗುತ್ತದೆ, ಮುಂದೇನಾದರೂ ಅನಾಹುತವಾದರೆ ಅದಕ್ಕೆ ನಮ್ಮ ಸಮಾಜ ಜವಾಬ್ದಾರಿಯಾಗುದಿಲ್ಲ ಎಂದು ಅವರು ತಾವಾಗಿಯೇ ನಮ್ಮನ್ನು ಕೆಣಕಲು ಬಂದಲ್ಲಿ ಇನ್ನು ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದೂ ಹೇಳಿದರು. ನಮ್ಮ ವೃತ್ತಿ ಮೀನುಗಾರಿಕೆಯಾಗಿದೆ, ಸರಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಹಿಂದೂ ಮೊಗೇರ ಅಂತಾ ಇದೆಯೇ ವಿನಹ ಮೀನುಗಾರ ಮೊಗೇರ ಅಂತಾ ಇಲ್ಲ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಯೂ ಕೂಡಾ ಮೀನುಗಾರ ಮೊಗೇರ ಎಂತಲೇ ಇದೆ ಎಂದ ಅವರು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೊಗೇರ ಇರುವುದು ತಪ್ಪು ಎಂದು ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಹೇಳಿದ್ದರೂ ಅದನ್ನು ಅಧಿಕಾರಿಗಳೂ ಇನ್ನೂ ತನಕ ಪಟ್ಟಿಯಿಂದ ಕೈಬಿಡದೇ ನಮ್ಮನ್ನು ಸತಾಯಿಸುತ್ತಿದ್ದಾರೆ ಎಂದರು. ಯಾವುದೇ ಒಂದು ಸಮಾಜ ಸರಕಾರ ಸೌಲಭ್ಯಗಳೆಲ್ಲ ನಮಗೇ ಸಲ್ಲಬೇಕು ಎಂದು ಹೇಳುವುದು ಸರಿಯಲ್ಲ, 1976ರಲ್ಲಿ ನಮ್ಮ ಸಮಾಜದ ಪರಿಸ್ಥಿತಿಯನ್ನು ನೋಡಿಯೇ ಸರಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದೆ ಎಂದರು.
ಸರಕಾರ ವಿಧಾನ ಸಭೆಯಲ್ಲಿ ನೀಡಿದ ಉತ್ತರ ಕೂಡಾ ಅಸಂಜಸವಾಗಿದೆ, ಮೀನುಗಾರ ಮೊಗೇರ ಒ.ಬಿ.ಸಿ.ಯಲ್ಲಿ ಇದೆ ಎಂದು ಹೇಳುವ ಸರಕಾರ ಹೇಳಿಕೆ ಜಾಣತನದ ಪ್ರದರ್ಶನ ಎಂದ ಅವರು 2011ರ ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಓ.ಬಿ.ಸಿ. ಪಟ್ಟಿಯಲ್ಲಿರುವ ಮೊಗೇರ ತೆಗೆದು ಹಾಕುವಂತೆ ಅದೇಶವಾಗಿದೆ. ಆದರೆ ಸರಕಾರ ಅದನ್ನು ತೆಗೆದು ಹಾಕದೇ ಗೊಂದಲ ಸೃಷ್ಟಿಸಿದೆ. ಕೇವಲ ಅಧಿಕಾರಿಗಳ ಮಾತನ್ನು ಕೇಳಿಕೊಂಡು ಸರಕಾರ ಕೆಲಸ ಮಾಡುವುದು ಸರಿಯಲ್ಲ ಎಂದೂ ಹೇಳಿದರು. ನಾವು ಹತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಒಮ್ಮೆ ಭೇಟಿ ಮಾಡಿ ನಮ್ಮ ಅಹವಾಲನ್ನು ಕೇಳಿಲ್ಲ. ಜಿಲ್ಲಾಧಿಕಾರಿಗಳಿಗೆ ಭಟ್ಕಳಕ್ಕೆ ಬರುವುದಕ್ಕೆ ಸಮಯವೇ ಸಿಗುತ್ತಿಲ್ಲ ಎಂದರೆ ನಮ್ಮ ಸಮಾಜವನ್ನೇ ನಿರ್ಲಕ್ಷ ಮಾಡುತ್ತಿದ್ದಾರೆ. ನಮ್ಮ ನ್ಯಾಯಯುತ, ಸೌಜನ್ಯಯುತ ಹೋರಾಟ ತೀವ್ರ ಗೊಂಡಾಗ ಬರುವುದಕ್ಕೆ ಕಾಯುತ್ತಿದ್ದಾರೆಯೇ ಎಂದು ಛೇಡಿಸಿದರು.
ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಂ. ಕರ್ಕಿ ಮಾತನಾಡಿ ನಮ್ಮ ಮೊಗೇರ ಜಾತಿಯವರಿಗೆ ಪರಿಶಿಷ್ಟ ಪ್ರಮಾಣ ಪತ್ರ ಕೊಡುವುದಕ್ಕೆ ಸರಕಾರ ಆದೇಶ ಮಾಡುವ ತನಕವೂ ನಮ್ಮ ಧರಣೀ ಮುಂದುವರಿಯತ್ತದೆ ಎಂದು ಹೇಳಿದರು. ನಿರಂತರ ಹೋರಾಟ ಮಾಡುತ್ತೇವೆ, ನಾವು ಗೆಲ್ಲಬೇಕು ಇಲ್ಲವೇ ಸರಕಾರ ಗೆಲ್ಲಬೇಕು ಯಾರು ಗೆಲ್ಲುತ್ತಾರೆ ಎಂದು ನೋಡುತ್ತೇವೆ. ಸರಕಾರ ನಮಗೆ ಕೊಡುತ್ತಿರುವ ಪ್ರಮಾಣ ಪತ್ರವನ್ನು ನಿಲ್ಲಿಸಿದೆ. ಅದನ್ನು ಪುನಃ ಕೊಡಿ ಎಂದು ಕೇಳುತ್ತಿದ್ದೇವೆಯೇ ಹೊರತು ಯಾರ ಪಾಲನ್ನೂ ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮೊಗೇರ ಸಮಾಜದ ಕಾನೂನು ಸಲಹೆಗಾರ ನಾಗರಾಜ ಈ.ಎಚ್. ಮಾತನಾಡಿ 1994ರಲ್ಲಿ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯಂತೆ ಮೊಗೇರ ಜಾತಿ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಬಂದರೂ ಸಹ 2005ರಲ್ಲಿ ಮಂತ್ರಿಮAಡಳದ ಸಭೆಯಲ್ಲಿ ತೀರ್ಮಾನವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವುದರಿಂದ ನಮಗೆ ಜಾತಿ ಪ್ರಮಾಣ ಪತ್ರ ಕೊಡುವುದನ್ನು ಮುಂದುವರಿಸಲಾಗಿತ್ತು. ಅಲ್ಲದೇ ನಂತರದ ದಿನಗಳಲ್ಲಿ ನಾವು ಉಚ್ಚ ನ್ಯಾಯಾಲಯದಲ್ಲಿ ಹಾಕಿದ ರಿಟ್ ಪಿಟಿಶನ್ನಲ್ಲಿ ಕೂಡಾ ನಮಗೆ ಎಸ್ಸಿ ಪ್ರಮಾಣ ಪತ್ರ ಮುಂದುವರಿಸುವAತೆ ಆಗಿತ್ತು, ಅದರ ವಿರುದ್ಧ ಆಪೀಲ್ ಮಾಡಿದ ಸರಕಾರಕ್ಕೆ ಸೋಲಾಗಿದೆ. ಸರಕಾರ ಉತ್ತರ ಕನ್ನಡದಲ್ಲಿ ಮೊಗೇರರಿಗೆ ಎಸ್ಸಿ ಪ್ರಮಾಣ ಪತ್ರ ಕೊಡುತ್ತೇವೆ ಎಂದು ಹೇಳಿದ್ದು ಜನರ ದಾರಿ ತಪ್ಪಿಸುವ ಕಾರ್ಯವಾಗಿದೆ. 2019ರ ನಂತರ ಯಾವುದೇ ಒಂದು ಪ್ರಮಾಣ ಪತ್ರವನ್ನು ಕೊಟ್ಟಿದ್ದು ಇಲ್ಲ. ಇನ್ನೂ ಕೂಡಾ ನಮ್ಮ ತಾಳ್ಮೆ ಪರೀಕ್ಷಿಸುವ ಕಾರ್ಯವನ್ನು ಸರಕಾರ ಮಾಡದೇ ನಮ್ಮ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳ ಎಸ್ ವೈದ್ಯ. ಹೊರಾಟ ಸಮತಿಯ ಪ್ರಮುಖ ಎಫ್.ಕೆ.ಮೊಗೇರ, ಡಿ. ಕೆ. ಮೊಗೇರ, ಬಾಸ್ಕರ ಮೊಗೇರ ಬೆಳಕೆ, ಶ್ರೀಧರ ಮೊಗೇರ, ಯಾದವ ಮೊಗೇರ, ಕೃಷ್ಣ ಮೊಗೇರ, ರಾಮಾ ಮೊಗೇರ, ಶಂಕರ ಹೆಬಳೆ ಮುಂತಾದವರು ಉಪಸ್ಥಿತರಿದ್ದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ