May 4, 2024

Bhavana Tv

Its Your Channel

ದೇಶದ ಗಮನ ಸೆಳೆದ ಮೂಡುಬಿದಿರೆ ಸಾವಿರ ಕಂಬದ ಬಸದಿ.

ದಕ್ಷಿಣಕನ್ನಡ: ವಿಶ್ವ ಪರಂಪರೆಯ ಪವಿತ್ರ ತಾಣಗಳಲ್ಲಿ ಒಂದಾದ ಜೈನ ಕಾಶಿ ಮೂಡುಬಿದಿರೆಯ ಸಾವಿರ ಕಂಬದ ಬಸದಿ ಎಂದೇ ಪ್ರಸಿದ್ಧವಾದ ತ್ರಿಭುವನ ತಿಲಕ ಚೂಡಾಮಣಿ ಬಸದಿಯು ದೇಶದ ಪ್ರಮುಖ ಜೈನ ಬಸದಿಗಳ ವಾಸ್ತುಶಿಲ್ಪದ ಅಚ್ಚರಿಗಳ ಪೈಕಿ ಮೂರನೇ ಸ್ಥಾನ ಪಡೆದಿದೆ ಎಂದು ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಅತ್ಯಂತ ಸೂಕ್ಷ್ಮ ಕೆತ್ತನೆಯ ತೀರ್ಥಂಕರ ಜಿನ ಬಿಂಬಗಳು, ಸರ್ವ ಧರ್ಮ ಸಮನ್ವಯದ ಅನೇಕ ಕಲ್ಲಿನ ಚಿತ್ತಾರಗಳು, ಬೆಡಗಿನ ಭಿತ್ತಿಚಿತ್ರಗಳುಳ್ಳ ವಾಸ್ತುವೈಭವದ ಬಸದಿಗಳ ಪಟ್ಟಿಯಲ್ಲಿ ಸಾವಿರ ಕಂಬದ ಬಸದಿಯು ರಾಜಸ್ಥಾನದ ರಣಾಕ್‌ಪುರ್‌ ಬಸದಿ, ದಿಲ್‌ವಾರಾ ದೇಗುಲದ ಅನಂತರದ ಸ್ಥಾನದಲ್ಲಿ ಗುರುತಿಸಲ್ಪಟ್ಟಿರುವುದು ದಿಲ್ಲಿಯ ಜೈನ ಸನ್ಸ್‌ ಮೂಲಕ ಖಚಿತವಾಗಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಚತುರ್ಮುಖ ಬಸದಿಗೆ ನಾಲ್ಕನೇ ಸ್ಥಾನ
ದೇಶದ 13 ಇತರ ಬಸದಿಗಳಲ್ಲಿ ನಾಲ್ಕನೇ ಸ್ಥಾನವನ್ನು ಕಾರ್ಕಳದ ಚತುರ್ಮುಖ ಬಸದಿ ಗಳಿಸಿದೆ. ಉಳಿದಂತೆ ಕ್ರಮವಾಗಿ ಗುಜರಾತ್‌ನ ಭಾವನಗರ ಜಿಲ್ಲೆಯ ಪಾಲಿಟಾನದ ಜೈನ ಮಂದಿರಗಳು, ಗಿರ್‌ನಾರ್‌ ಜೈನ ಮಂದಿರಗಳು, ಹತೀಸಿಂಗ್‌ ಜೈನ ಮಂದಿರ, ಮಧ್ಯಪ್ರದೇಶದ ಜೈನ ಮಂದಿರಗಳು, ಹನುಮಾನ್‌ ತಾಲ್‌ ಬಸದಿ, ಪಾರ್ಶ್ವನಾಥ ಬಸದಿ, ಶ್ರೀ ದಿಗಂಬರ್‌ ಜೈನ್‌ ಲಾಲ್‌ ಮಂದಿರ್‌, ಕರ್ನಾಟಕದ ಮಾಡಗೊಂಡನಹಳ್ಳಿಯ ಮಂದಾರಗಿರಿ ಬೆಟ್ಟದ ಗುರುಮಂದಿರ (ಪೀಕಾಕ್‌ ಜೈನ ದೇವಾಲಯ) ಮತ್ತು ಝಾರ್ಖಂಡ್‌ನ‌ ಶ್ರೀ ಸಮ್ಮೇದ್‌ ಶಿಖರ್‌ಜೀ ಇವುಗಳನ್ನು ಗುರುತಿಸಲಾಗಿದೆ ಎಂದು ಸ್ವಾಮೀಜಿ ಅವರು ತಿಳಿಸಿದ್ದಾರೆ.

ತ್ರಿಕಾಲ ಪೂಜೆಯ ವೇಳೆಗೆ ಮಾತ್ರ ದರ್ಶನ
ಪ್ರತಿವರ್ಷ ವಿಶ್ವದೆಲ್ಲೆಡೆಯಿಂದ ಸಹಸ್ರಸಂಖ್ಯೆಯಲ್ಲಿ ಕಲಾಪ್ರಿಯರು, ಶಾಂತಿಪ್ರಿಯರು ಬಸದಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಈ ಬಾರಿ ಕೊರೊನಾದಿಂದಾಗಿ ಬಸದಿಗೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ ಕಡಿಮೆಯಾಗಿದೆ. ಸದ್ಯ ನಿತ್ಯ ತ್ರಿಕಾಲ ಪೂಜೆಯ ವ್ಯವಸ್ಥೆ ಮಾಡಲಾಗಿದ್ದು, ಆ ಸಮಯದಲ್ಲಿ ಮಾತ್ರ ಬಸದಿ ತೆರೆದಿಡಲಾಗುತ್ತದೆ. ಕೊರೋನಾ ಆತಂಕ ಇಳಿಮುಖವಾದ ಬಳಿಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಸದಿಯ ಸುತ್ತ ಒಳಚರಂಡಿ, ಬಸದಿ ಒಳಾಂಗಣ ಜೀರ್ಣೋದ್ಧಾರ ಛಾವಣಿಗೆ ತಾಮ್ರ ಹೊದಿಸುವುದು ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರಕಾರ ಘೋಷಿಸಿದಂತೆ 2 ಕೋಟಿ ರೂ.ಗಳ ಅನುದಾನ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾಗಿತ್ತು. ಆದರೆ ಕೊರೊನಾದಿಂದಾಗಿ ಕಾಮಗಾರಿ ವಿಳಂಬವಾಗಿದೆ. ಈ ಎಲ್ಲ ಕಾಮಗಾರಿಗಳು ಪರಂಪರೆಗೆ ಪೂರಕವಾಗಿ ಆದಷ್ಟು ಶೀಘ್ರವಾಗಿ ಆಗಲಿ ಎಂದು ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ.

Source: ಉದಯವಾಣಿ

error: