December 22, 2024

Bhavana Tv

Its Your Channel

ಸರಳ ಸ್ವಾತಂತ್ರ‍್ಯೋತ್ಸವಕ್ಕೆ ಸಿದ್ಧತೆ; ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ

ರೋಣ: ಕೋವಿಡ್-೧೯ ಆತಂಕದ ಹಿನ್ನಲೆಯಲ್ಲಿ ಈ ಬಾರಿಯ ಸ್ವಾತಂತ್ರ‍್ಯೋತ್ಸವವನ್ನು ಶಿಸ್ತು ಹಾಗೂ ಸರಳ ರೀತಿಯಲ್ಲಿ ಆಚರಿಸಲು ಸಿದ್ದತೆ ಮಾಡಿಕೊಳ್ಳುವಂತೆ ತಾಲ್ಲೂಕಾ ಮಟ್ಟದ ಅಧಿಕಾರಿಗಳಿಗೆ ತಹಶೀಲ್ದಾರ ಜೆ. ಬಿ. ಜಕ್ಕನಗೌಡ್ರ ತಿಳಿಸಿದರು.
ಸ್ವಾತಂತ್ರ‍್ಯೋತ್ಸವ ದಿನಾಚರಣೆಯ ಅಂಗವಾಗಿ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಬುಧವಾರ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ಸೋಂಕು ಹರಡುತ್ತಿರುವ ಕಾರಣ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಬೇಕಿದೆ. ಎಲ್ಲ ಸರ್ಕಾರಿ, ಅರೆ ಸರ್ಕಾರಿ ಹಾಗೂ ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡಬೇಕು. ರಾಷ್ಟ್ರೀಯ ಹಬ್ಬಗಳಲ್ಲಿ ನಾಡ, ನುಡಿಯ ಸಂಸ್ಕೃತಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ನಗರದಲ್ಲಿ ಎಲ್ಲೆಡೆಯ ಧ್ವಜಾರೋಹಣವನ್ನು ಬೆಳಿಗ್ಗೆ ೮ ಗಂಟೆಗೆ ಮಾಡಿಕೊಂಡ ನಂತರ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣವನ್ನು ಬೆಳಗ್ಗೆ ೮:೫೫ ಗಂಟೆಗೆ ನೆರವೇರಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆದಿರಬೇಕು. ಸಿಬ್ಬಂದಿಗಳು ಶಿಷ್ಟಾಚಾರ ಉಲ್ಲಂಘನೆಯಾಗದAತೆ ನಿಗಾವಹಿಸಬೇಕು ಎಂದು ತಿಳಿಸಿದರು.
ಆ.೧೪ಕ್ಕೆ ಪಟ್ಟಣದ ಪೋತರಾಜನ ಕಟ್ಟೆಯ ಸುತ್ತಲೂ ದೀಪಾಲಂಕಾರ, ನಗರದ ರಸ್ತೆಗಳ ಸ್ವಚ್ಚತೆ, ಸರ್ಕಾರಿ ಕಚೇರಿಗಳ ಸ್ವಚ್ಚತೆ ಹಾಗೂ ಸಿದ್ದತೆಯ ಬಗ್ಗೆ ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ಜವಾಬ್ದಾರಿ ವಹಿಸಿದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ ಗಣೇಶ ಟಿ. ಕೊಪ್ಪದ, ಪುರಸಭೆಯ ಮುಖ್ಯಾಧಿಕಾರಿ ಎಂ.ಎ.ನೂರುಲ್ಲಾಖಾನ್. ವಿನೋದ ಪೂಜಾರಿ, ಆರೋಗ್ಯ ಶಿಕ್ಷಣಾಧಿಕಾರಿ ಕೆ. ಎ. ಹಾದಿಮನಿ, ಎಲ್. ಕೆ. ಗಡಗಿ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಬಿ ಹುಲಗಣ್ಣವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ವರದಿ ವೀರಣ್ಣ ರೋಣ

error: