ನರೇಗಲ್ಲ: ಇಲ್ಲಿಂದ ೬ ಕಿಲೋಮೀಟರ್ ಅಂತರದಲ್ಲಿ ಅಂತರದಲ್ಲಿ ಬರುವ ಚಿಕ್ಕದಾದ ಹಳ್ಳಿ ಜಕ್ಕಲಿಯು ದೇಶಕ್ಕೆ ಸ್ವಾತಂತ್ರ‍್ಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿ ಹೆಸರುವಾಸಿಯಾಗಿದೆ.
ಈ ಊರಿನ ದೊಡ್ಡಮೇಟಿಯವರ ಮನೆಯಲ್ಲಿ ಕನ್ನಡದ ಕುಲದೇವತೆ ಭುವನೇಶ್ವರಿಯ ಮುಂದೆ ಪ್ರತಿ ನಿತ್ಯ ಸದಾ ಕಾಲ ಬೆಳಗುತ್ತದೆ ಕನ್ನಡದ ದೀಪ.
ದೊಡ್ಡಮೇಟಿ ಹೆಸರಿಗೆ ತಕ್ಕಂತೆ ದೊಡ್ಡದಾದ ಮನೆ ಇದೆ. ಪ್ರವೇಶ ದ್ವಾರದ ಮೂಲಕ ಹಾದು ಹೋದರೆ ನಡುಮನೆಯ ನಂತರ ಬಲಭಾಗದಲ್ಲಿ ದೇವರ ಮನೆಯ ಒಳಗೆ ಪ್ರವೇಶ ಮಾಡಿದಾಗ ಕಂಗೊಳಿಸುತ್ತಿದೆ ಆರು ಅಡಿ ಎತ್ತರದ ತೈಲ ವರ್ಣದ ಭುವನೇಶ್ವರಿ ದೇವಿ ಚಿತ್ರಪಟ, ಅಚ್ಚುಕಟ್ಟಾಗಿ ಕಟ್ಟು ಹಾಕಿಸಿಟ್ಟಿರುವ ದೇವಿ ಪಟದ ಮುಂದೆ ಸದಾ ಪ್ರಜ್ವಲಿಸುತ್ತದೆ ಕನ್ನಡದ ಪ್ರಣತೆ.
ಕರ್ನಾಟಕ ಏಕೀಕರಣದ ರೂವಾರಿಗಳು, ಕನ್ನಡದ ಕಟ್ಟಾಳು, ಧೀಮಂತ ನಾಯಕ, ಕನ್ನಡವೇ ನನ್ನ ಉಸಿರು ಎಂದು ಅವಿರತವಾಗಿ ಕನ್ನಡಕ್ಕಾಗಿ ಹೋರಾಡಿದವರಲ್ಲಿ ಒಬ್ಬರಾದ ದಿವಂಗತ ಅಂದಾನಪ್ಪ ದೊಡ್ಡಮೇಟಿಯವರ ಕನ್ನಡದ ಕೀರ್ತಿ ಅವರ ಕುಟುಂಬದವರಿಗೆ ಸಲ್ಲುತ್ತದೆ. ಅವರ ಮನೆಯಲ್ಲಿ ಇಂದಿಗೂ ಸಹ ತಾಯಿ ಭುವನೇಶ್ವರಿ ದೇವಿಗೆ ಅಗ್ರಪೂಜೆ ನಡೆಯುತ್ತಲೇ ಇದೆ.
ಶ್ರೀ ಭುವನೇಶ್ವರಿಯು ದೊಡ್ಡಮೇಟಿ ಕುಟುಂಬದ ಮನೆದೇವತೆಯೇ ಆಗಿದ್ದಾಳೆ. ೬೮ ವರ್ಷಗಳಿಂದ ದಿನವೂ ತಪ್ಪದೇ ದೇವಿ ಪೂಜಿಸಲ್ಪಡುತ್ತಾಳೆ. ಗ್ರಾಮಕ್ಕೆ ಭೇಟಿ ನೀಡುವ ಕನ್ನಡ ಪ್ರೇಮಿಗಳು, ಹೋರಾಟಗಾರರು ದೇವಿ ಗಾಂಭೀರ್ಯ ಕಣ್ತುಂಬಿಕೊಳ್ಳದೇ ಹಿಂದಿರುಗಲಾರರು. ಅಷ್ಟರ ಮಟ್ಟಿಗೆ ಕಲಾಕೃತಿ ಪ್ರತಿಯೊಬ್ಬರ ಹೃದವನ್ನು ಗೆಲ್ಲುತ್ತದೆ.
ಕಲಾಕೃತಿ ವಿಶೇಷ: ಇಡೀ ರಾಜ್ಯದಲ್ಲಿ ತೈಲ ವರ್ಣದಲ್ಲಿ ರಚನೆಯಾದ ಪ್ರಪ್ರಥಮ ಭುವನೇಶ್ವರಿ ದೇವಿ ಕಲಾಕೃತಿ ಇದು. ಹೋರಾಟಗಾರರಿಗೆ ಸ್ಫೂತಿ ತುಂಬಲೆAದು ಜನವರಿ ೧೯೫೩ ರಲ್ಲಿ ಜಕ್ಕಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಏಕೀಕರಣ ಶಿಬಿರದಲ್ಲಿ ಗದಗ ಮಾಡೆಲ್ ಹೈಸ್ಕೂಲ್ ಚಿತ್ರಕಲಾ ಶಿಕ್ಷಕ ಸಿ.ಎನ್. ಪಾಟೀಲರು ಈ ಕಲಾಕೃತಿ ರಚಿಸಿದ್ದರು. ಕಲಾಕೃತಿ ರಚನೆಗೆ ಅಂದಾನಪ್ಪ ಕರ್ನಾಟಕ ಮಹಿಮ್ನಃ ಸ್ತೋತ್ರ ಕೃತಿ ಪ್ರೇರಣೆ. ಇಂದು ಎಲ್ಲೆಡೆ ಕಾಣುವಂಥ ಭುವನೇಶ್ವರಿ ದೇವಿ ಚಿತ್ರದಂತಲ್ಲ ಇದು. ಕರ್ನಾಟಕ ನಕಾಶೆಯನ್ನು ಆವರಿಸಿಕೊಂಡಿರುವ ದೇವಿ ಚಿತ್ರದ ಹಿನ್ನೆಲೆ ಸೂರ್ಯ, ಚಂದ್ರ, ನಕ್ಷತ್ರಗಳು ಕಂಗೊಳಿಸುತ್ತವೆ. ವಿಶ್ವ ಇರುವವರೆಗೂ ಕನ್ನಡನಾಡು ಇರುತ್ತದೆ ಎಂಬ ಕಲ್ಪನೆ ಇದರಲ್ಲಿ ಸಾಕಾರಗೊಂಡಿದೆ. ಕಲಾಕೃತಿಯಲ್ಲಿ ೧೬ ಶಾಕ್ತಪೀಠಗಳನ್ನು ಸಂಕೇತಿಸಲಾಗಿದೆ. ತ್ರಿಶೂಲ, ಕಲಮ, ಪುಸ್ತಕ ಹಿಡಿದ ದೇವಿ ಲಕ್ಷ್ಮೀ, ಸರಸ್ವತಿ, ಪರಮೇಶ್ವರಿಯನ್ನು ಹೋಲುತ್ತಾಳೆ.
ಈ ಚಿತ್ರದ ವಿಶೇಷತೆಗಳು
ಅಖಂಡ ಕರ್ನಾಟಕವನ್ನು ಬಿಂಬಿಸುವ ಅಂದರೆ ಕರುನಾಡ ಸರಸ್ವತಿ ಎಂದರೆ ಪುಸ್ತಕ, ಕರುನಾಡ ಚಾಮುಂಡಿ ಎಂದರೆ ತ್ರಿಶೂಲ, ಕರುನಾಡ ಲಕ್ಷ್ಮೀ ಎಂದರೆ ಕಮಲ ಹಾಗೂ ಬನವಾಸಿ, ಹಂಪಿ, ಜೋಗ, ಸಮುದ್ರ ಸೇರಿ ಶೃಂಗೇರಿಯ ತ್ರಿಪುರ ಸುಂದರಿ ಮುತ್ತು ಗೊಲಗುಂಬಜ್, ಶ್ರವಣ ಬೆಳಗೊಳದ ಗೊಮ್ಮಟೇಶ್ವರ ಈ ಚಿತ್ರ ಒಳಗೊಂಡಿದೆ,
ವರದಿ ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ