December 21, 2024

Bhavana Tv

Its Your Channel

ಪುಸ್ತಕದ ಜೊತೆಗೆ ಮಸ್ತಕದ ಜ್ಞಾನವು ಬೇಕು: ಉಪನ್ಯಾಸಕ ಎಸ್ ಎಸ್ ಹಿರೇಮಠ.

ನರೇಗಲ್ಲ: ಪುಸ್ತಕದ ಜೊತೆಗೆ ಮಸ್ತಕದ ಜ್ಞಾನವು ಬೇಕು ಎಂದು ನಿಡಗುಂದಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಸ್. ಎಸ್. ಹಿರೇಮಠ ಹೇಳಿದರು.

ಅವರು ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ಮಹಾ ಸರಸ್ವತಿ ಪೂಜಾ ಸಮಾರಂಭದ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಪುಸ್ತಕಗಳನ್ನು ಓದಿದರೆ ಜೀವನ ಪೂರ್ತಿ ಉತ್ತಮ ಬದುಕು ರೂಪಿಸಿಕೊಳ್ಳಬಹುದು, ವಿದ್ಯಾರ್ಥಿಗಳು ಮಾನವೀಯ ಮೌಲ್ಯವಿರುವ ಶಿಕ್ಷಣ ಕಲಿಯಬೇಕು ಎಂದರಲ್ಲದೆ ಶಿಸ್ತು, ಸಮಯ ಪ್ರಜ್ಞೆ ಮತ್ತು ಜೀವನದಲ್ಲಿ ಯಶಸ್ಸುಗಳಿಸಲು ಆತ್ಮ ವಿಶ್ವಾಸ ಬಹಳ ಪ್ರಾಮುಖ್ಯವೆಂದು ವಿದ್ಯಾರ್ಥಿಗಳಿಗೆ ಕೆಲವು ನಿದರ್ಶನಗಳ ಮೂಲಕ ತಮ್ಮದೇ ಜೀವನದ ಕೆಲವೊಂದು ಅನುಭವದ ಘಟನೆಗಳನ್ನು ವಿವರಿಸಿ ಶುಭ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಬಿ. ಆರ್. ಗದುಗಿನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶವನ್ನು ಶ್ರದ್ಧೆಯಿಂದ ಬಳಸಿಕೊಂಡು ಸತತ ಪರಿಶ್ರಮ, ಶ್ರದ್ಧೆ ಮತ್ತು ನಿಷ್ಠೆಯಿಂದ ಅಧ್ಯಯನದ ಮೂಲಕ ಜ್ಞಾನಾರ್ಜನೆ ಮಾಡಿ ಹೆಚ್ಚಿನ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತರಬೇಕೆಂದರು ವಿದ್ಯಾರ್ಥಿಗಳಿಗೆ ಹಿತೋಪದೇಶಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಈ ಶಾಲೆಯಿಂದ ಬೇರೆ ಊರಿನ ಶಾಲೆಗೆ ವರ್ಗಾವಣೆಯಾದ ಶಿಕ್ಷಕಿಯರಾದ ಎಸ್. ಎನ್. ದೇವಿಗಿರಕರ ಹಾಗೂ ಶಾಲೆಯಿಂದ ನಿವೃತ್ತ ಹೊಂದಿರುವ ಶಿಕ್ಷಕರಾದ ಎಸ್. ಆರ್. ಬಾಗಲಿ ಅವರನ್ನು ಶಾಲೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

8,9,10ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಎ. ಎಸ್. ರೋಣದ ಅವರು ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿದರು. ವಿದ್ಯಾರ್ಥಿಗಳು ತಮ್ಮ 3 ವರ್ಷದ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊAಡರು.
ಶಿಕ್ಷಕರಾದ ಟಿ. ಎನ್. ಬಾಕಳೆ ಅವರು ವಾರ್ಷಿಕ ವರದಿ ವಾಚಿಸಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷೆ ಸುಜಾತ ಕಮ್ಮಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ ಕೋರಿ, ಅನ್ನಪೂರ್ಣ ಮುಗಳಿ, ಬೀಬಿಜಾನ ಕದಡಿ, ಗಂಗಮ್ಮ ಜಂಗಣ್ಣವರ, ಯಲ್ಲವ್ವ ಮಾದರ, ಎಸ್ಡಿಎಂಸಿ ಉಪಾಧ್ಯಕ್ಷ ಪರಮೇಶ ಬಂಡಿವಡ್ಡರ, ಕರವೇ ಜಿಲ್ಲಾ ಉಪಾಧ್ಯಕ್ಷ ಉಮೇಶ ಮೇಟಿ, ಮುತ್ತಣ್ಣ ಪಾಟೀಲ, ವೀರಣ್ಣ ಬುಳ್ಳಾ, ಸಂಗಮೇಶ ಮೆಣಸಿಗಿ, ಹುಸೇನಸಾಬ ಬಾಲೇಸಾಬನವರ, ಚನ್ನಪ್ಪ ತೋಟದ, ಮಂಜುಳಾ ಪಾಟೀಲ, ವಿಜಯಲಕ್ಷ್ಮೀ ಧಢೇಸೂರಮಠ, ಶಾಲಾ ಶಿಕ್ಷಕರು- ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಇನ್ನಿತರರು ಇದ್ದರು.
ಹತ್ತನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕರಾದ ಸಿ. ವಿ. ಅಂಬಿಗೇರ ಸ್ವಾಗತಿಸಿದರು.
ಶಿಕ್ಷಕರಾದ ವಿ. ವಿ. ಅಣ್ಣಿಗೇರಿ ಅವರು ಕಾರ್ಯಕ್ರಮ ನಿರೂಪಿಸಿದರು.

ವರದಿ ವೀರಣ್ಣ ಸಂಗಳದ ರೋಣ

error: