May 8, 2024

Bhavana Tv

Its Your Channel

ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರ ಹಕ್ಕುಗಳು ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಾಗಾರ

ಕೃಷ್ಣರಾಜಪೇಟೆ :- ಹಿರಿಯ ನಾಗರಿಕರು ಹಾಗೂ ವಿಶೇಷಚೇತನರನ್ನು ಗೌರವಿಸುವ ಮೂಲಕ ಅವರು ಸಂಧ್ಯಾಕಾಲದಲ್ಲಿ ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿವುದು ನಾಗರಿಕ ಸಮಾಜದ ಪ್ರತಿಯೊಬ್ಬರ ಆಧ್ಯಕರ್ತವ್ಯವಾಗಿದೆ ಎಂದು ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದ ಕಿರಿಯಶ್ರೇಣಿ ನ್ಯಾಯಾಧೀಶರಾದ ಹೆಚ್.ಓಂಕಾರಮೂರ್ತಿ ಹೇಳಿದರು ..

ಅವರು ಇಂದು ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲ್ಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ಹಿರಿಯ ನಾಗರಿಕರು ಮತ್ತು ವಿಶೇಷಚೇತನರ ಹಕ್ಕುಗಳು ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು..

ಇಂದು ವಿದ್ಯಾವಂತರು ಹಾಗೂ ಸರ್ಕಾರಿ ನೌಕರರು ತಮ್ಮನ್ನು ಹೆತ್ತುಹೊತ್ತು ಸಾಕಿಸಲಹಿ ದೊಡ್ಡವರನ್ನಾಗಿ ಮಾಡಿದ ವಯಸ್ಸಾದ ತಂದೆತಾಯಿಗಳನ್ನು ಪ್ರೀತಿವಿಶ್ವಾಸದಿಂದ ನೋಡಿಕೊಳ್ಳದೇ ಅವರನ್ನು ಕಡೆಗಣಿಸಿ ವೃದ್ಧಾಶ್ರಮಗಳಿಗೆ ಸೇರಿಸಿ ತಮ್ಮ ಜವಾಬ್ಧಾರಿ ಮುಗಿಯಿತು ಎಂದು ಕೈಚೆಲ್ಲುತ್ತಿದ್ದಾರೆ. ತಂದೆತಾಯಿಗಳು ಕಷ್ಟಪಟ್ಟು ಗಳಿಸಿದ ಆಸ್ತಿಪಾಸ್ತಿ ಮಾತ್ರ ಬೇಕು, ವಯಸ್ಸಾದ ತಂದೆತಾಯಿಗಳ ಯೋಗಕ್ಷೇಮ ಬೇಡ ಎಂದು ಹಿರಿಯ ನಾಗರಿಕರ ಮೇಲೆ ದಬ್ಬಾಳಿಕೆ ಮಾಡಿ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ನಮ್ಮ ಕಣ್ಣಮುಂದೆಯೇ ಕಾಣುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಕರಣವು ನ್ಯಾಯಾಲಯಕ್ಕೆ ಬಂದರೆ ತಂದೆತಾಯಿಗಳನ್ನು ನಿಕೃಷ್ಠವಾಗಿ ಕಂಡು ಹಿಂಸೆ ನೀಡುವ ಮಕ್ಕಳ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಪೋಷಕರಿಗೆ ಒಪ್ಪಿಸಲಾಗುವುದು ಎಂದು ಎಚ್ಚರಿಸಿದ ನ್ಯಾಯಾಧೀಶರು ವಿಶೇಷಚೇತನರಿಗೆ ಅನುಕಂಪ ಬೇಕಾಗಿಲ್ಲ. ಅವರ ಸಾಮರ್ಥ್ಯವನ್ನು ಅನಾವರಣಗೊಳಿಸಲು ಅವಕಾಶ ಮಾಡಿಕೊಡಬೇಕು.. ವಿಶೇಷಚೇತನರು ಏನನ್ನಾದರೂ ಸಾಧಿಸಲೇಬೇಕು ಎಂಬ ಛಲವನ್ನು ಹೊಂದಿರುವ ದೇವರ ಮಕ್ಕಳಾಗಿದ್ದಾರೆ. ಸರ್ಕಾರದ ವತಿಯಿಂದ ದೊರೆಯುವ ಸಂವಿಧಾನಬದ್ಧವಾದ ಫಲವು ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ತಲುಪಬೇಕು ಎಂದು ಅಭಿಮಾನದಿಂದ ಹೇಳಿದರು..

ಅಪರ ಸಿವಿಲ್ ನ್ಯಾಯಾಧೀಶರಾದ ಶಕುಂತಲಾ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ್, ತಾಲ್ಲೂಕು ಪಂಚಾಯತಿ ಇಓ ಸತೀಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪತಹಶೀಲ್ದಾರ್ ಲಕ್ಷ್ಮೀಕಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು..ಸರ್ಕಾರಿ ಅಭಿಯೋಜಕ ರಾಜೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಸಿಡಿಪಿಓ ಅರುಣಕುಮಾರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ಖಜಾಂಚಿ ಜಗಧೀಶ್, ಜಂಟಿ ಕಾರ್ಯದರ್ಶಿ ಸಿ.ನಿರಂಜನ್, ಹಿರಿಯ ವಕೀಲರಾದ ಕೆ.ಎನ್.ನಾಗರಾಜು, ಮಂಡ್ಯ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಕೃಷ್ಣರಾಜಪೇಟೆ ಹರೀಶ್, ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷೆ ಚಂದ್ರಕಲಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ವಿವಿಧ ಸವಲತ್ತುಗಳನ್ನು ನ್ಯಾಯಾಧೀಶರು ಹಾಗೂ ಅತಿಥಿಗಳು ವಿತರಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: