March 20, 2025

Bhavana Tv

Its Your Channel

ಮಂಡ್ಯದಲ್ಲಿ ಕರೋನಾ ನಿಯಂತ್ರಣದಲ್ಲಿದೆ: ಜಿಲ್ಲಾಡಳಿತದೊಂದಿಗೆ ಎಲ್ಲರು ಸಹಕರಿಸಿ ಸಚೀವ ನಾರಾಯಣಗೌಡ ಮನವಿ

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಕೊರೋನಾ ಅಟ್ಟಹಾಸವು ನಿಯಂತ್ರಣಕ್ಕೆ ಬರುತ್ತಿದೆ. ತಾಲ್ಲೂಕಿಗೆ ಹೊರರಾಜ್ಯಗಳ ಜನರು ಕದ್ದುಮುಚ್ಚಿ ಅಡ್ಡದಾರಿಯಲ್ಲಿ ಬರುವ ಅಗತ್ಯವಿಲ್ಲ. ನೇರವಾಗಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಕ್ಕೆ ತಿಳಿಸಿ ಒಂದು ವಾರಗಳ ಕಾಲ ಕ್ವಾರಂಟೈನ್ ಆಗಿ ಕೊರೋನಾ ನಿಯಂತ್ರಿಸುವ ಕಾರ್ಯಕ್ಕೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ರಾಜ್ಯದ ಪೌರಾಡಳಿತ, ರೇಷ್ಮೆ, ತೋಟಗಾರಿಕೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಮನವಿ ಮಾಡಿದರು ಅವರು ಕೃಷ್ಣರಾಜಪೇಟೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ವಿಶೇಷಚೇತನರಿಗೆ ತ್ರಿಚಕ್ರ ಸ್ಕೂಟರ್ ಗಳನ್ನು ವಿತರಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ಹೊರ ರಾಜ್ಯಗಳಿಂದ ಆಗಮಿಸುವ ಜನರು ಕದ್ದುಮುಚ್ಚಿ ಅಡ್ಡದಾರಿಯಲ್ಲಿ ಬಂದು ಮನೆಯಲ್ಲಿ ಅವಿತು ಕುಳಿತರೆ ಅದು ಸಮಾಜಕ್ಕೆ ಮಾಡುವ ದ್ರೋಹವಾಗುತ್ತದೆ. ಆದ್ದರಿಂದ ಯಾವುದೇ ರಾಜ್ಯಗಳ ಜನರು ಕರ್ನಾಟಕ ರಾಜ್ಯಕ್ಕೆ ಬಂದಾಗ ನೇರವಾಗಿ ನಿಮ್ಮ ಊರಿಗೆ ಹೋಗದೇ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಆಗಿ ಕೊರೋನಾ ಪಾಸಿಟಿವ್ ಕಂಡುಬoದರೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಂಡು ಆರೋಗ್ಯವಂತರಾಗಿ ನಿಮ್ಮ ಮನೆಗೆ ತೆರಳುವ ಜೊತೆಗೆ ಸಮುದಾಯದ ಆರೋಗ್ಯವನ್ನು ಕಾಪಾಡಬೇಕು..ರಾಜ್ಯ ಸರ್ಕಾರವೇ ನಿಮ್ಮ ಆರೋಗ್ಯ ಸಂರಕ್ಷಣೆಯ ಜವಾಬ್ದಾರಿಯನ್ನು ಹೊರಲಿದೆ. ರಾಜ್ಯ ಸರ್ಕಾರವು ಕೊರೋನಾ ಚಿಕಿತ್ಸೆಗಾಗಿ ಎಲ್ಲಾ ತಾಲ್ಲೂಕುಗಳಿಗೆ ೬೦ಲಕ್ಷ ರೂಗಳಿಂದ ೭೫ಲಕ್ಷ ರೂಗಳ ವರೆಗೆ ಹಣವನ್ನು ಬಿಡುಗಡೆ ಮಾಡಿದೆ ಎಂದು ಸಚಿವ ನಾರಾಯಣಗೌಡ ವಿವರಿಸಿದರು.
ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ೧೭ವಿವಿಧ ಸಾಂಸ್ಥಿಕ ಕೇಂದ್ರಗಳಲ್ಲಿ ೧೧೫೦ಕ್ಕೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು ಪ್ರಸ್ತುತ ೯೦೦ಕ್ಕೂ ಹೆಚ್ಚು ಜನರು ೧೪ದಿನಗಳ ಕ್ವಾರಂಟೈನ್ ಮುಗಿಸಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಗ್ರಾಮದ ತಮ್ಮ ಮನೆಗಳಿಗೆ ತೆರಳಿರುವ ಹೊರ ರಾಜ್ಯಗಳ ಜನರು ತಮ್ಮ ತಮ್ಮ ಮನೆಗಳಲ್ಲಿ ಮತ್ತೆ ೧೪ದಿನಗಳು ಕ್ವಾರಂಟೈನ್ ನಲ್ಲಿರಬೇಕು. ತಾಲ್ಲೂಕಿನಲ್ಲಿ ೨೩೫ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು ಎಲ್ಲರೂ ಗುಣಮುಖರಾಗುತ್ತಿದ್ದಾರೆ.. ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಗಳು ನಿಮ್ಮ ಆರೋಗ್ಯ ಸಂವರ್ಧನೆಗೆ ಬದ್ಧವಾಗಿರುವುದರಿಂದ ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ಜನರು ರಾಜ್ಯ ಸರ್ಕಾರದೊಂದಿಗೆ ಸಹಕರಿಸಿ ಕೊರೋನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ನಾರಾಯಣಗೌಡ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ, ತಹಶೀಲ್ದಾರ್ ಎಂ.ಶಿವಮೂರ್ತಿ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮಾಜಿಸದಸ್ಯ ಅಘಲಯ ಮಂಜುನಾಥ್, ಸಚಿವರ ಆಪ್ತಸಹಾಯಕರಾದ ದಯಾನಂದ, ಕಿಕ್ಕೇರಿ ಕುಮಾರ್, ರವಿಕುಮಾರ್ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ವರದಿ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ

error: