May 8, 2024

Bhavana Tv

Its Your Channel

ಮಕ್ಕಳಿಗೆ ದೂರದರ್ಶಕ ತಯಾರಿಕೆ,ಗಣಿತ ಕಾರ್ಯಾಗಾರ, ಓರಿಗಾಮಿ ತಯಾರಿಕೆ, ಸೌರಮಂಡಲ ವೀಕ್ಷಣೆ ಕಾರ್ಯಕ್ರಮ

ಕೃಷ್ಣರಾಜಪೇಟೆ ; ಮಕ್ಕಳು ಹಾಗೂ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ದಿಕ್ಕಿನಲ್ಲಿ ಆಸಕ್ತಿ ಮೂಡಿಸಲು ವಿಜ್ಞಾನದ ಪರಿಕರಗಳನ್ನು ಸ್ವತಃ ಮಾಡಿ ಕಲಿಯುವುದು ಪರಿಣಾಮಕಾರಿ ಬೋಧನೆಯಾಗಿದೆ ಆದ್ದರಿಂದ ಮಕ್ಕಳಿಗೆ ವೈಜ್ಞಾನಿಕ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಮೈಸೂರು ಸೈನ್ಸ್ ಫೌಂಡೇಷನ್ ಸಂಸ್ಥೆಯ ಕಾರ್ಯದರ್ಶಿ ಸಂತೋಷ್‌ಕುಮಾರ್ ತಿಳಿಸಿದರು .

ಅವರು ಪಟ್ಟಣದ ಸರ್ಕಾರಿ ಎಂಜಿನಿಯರಿAಗ್ ಕಾಲೇಜಿನಲ್ಲಿ ಪಟ್ಟಣದ ಗುರುಕುಲ ಕೋಚಿಂಗ್ ಸೆಂಟರ್ ಮತ್ತು ಮೈಸೂರಿನ ಸೈನ್ಸ್ ಫೌಂಡೇಶನ್ ಸಹಯೋಗದಲ್ಲಿ ದೂರದರ್ಶಕ ತಯಾರಿಕೆ,ಗಣಿತ ಕಾರ್ಯಾಗಾರ, ಓರಿಗಾಮಿ ತಯಾರಿಕೆ, ಸೌರಮಂಡಲ ವೀಕ್ಷಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಕೌಶಲ್ಯವನ್ನು ಹೆಚ್ಚಿಸಿ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸಲು ವೈಜ್ಞಾನಿಕ ಕಾರ್ಯಾಗಾರಗಳು ವರದಾನವಾಗಿವೆ. ವಿದ್ಯಾರ್ಥಿಗಳು ನೋಡಿ ಕಲಿಯುವುದಕ್ಕಿಂತಲೂ ತಾವೇ ಸ್ವತಃ ತಮ್ಮ ಕೈಯ್ಯಿಂದ ವೈಜ್ಞಾನಿಕ ಪರಿಕರಗಳನ್ನು ತಯಾರಿಸಿ ಬಳಕೆ ಮಾಡಿದಾಗ ಹೆಚ್ಚಿನ ವಿಷಯಗಳು ಅವರಿಗೆ ಚೆನ್ನಾಗಿ ಮನವರಿಕೆಯಾಗುತ್ತವೆ. ಈ ದಿಕ್ಕಿನಲ್ಲಿ ಇಂದು ಸೈನ್ಸ್ ಫೌಂಡೇಶನ್ ಒಂದು ದಿನದ ಕಾರ್ಯಾಗಾರ ನಡೆಸಿ ದೂರದರ್ಶಕ ತಯಾರಿಕೆ, ಸೌರಮಂಡಲ ವೀಕ್ಷಣೆ, ಬಾಹ್ಯಾಕಾಶ ಪ್ರಯೋಗ, ಸೌರಮಂಡಲದಲ್ಲಿನ ನಕ್ಷತ್ರ ಪುಂಜಗಳ ಪರಿಚಯ, ಸೌರ ಮಸೂರಗಳ ಕನ್ನಡಕಗಳ ಮೂಲಕ ಸೂರ್ಯನ ವೀಕ್ಷಣೆ, ಮರಗಳು ಹಾಗೂ ಕಟ್ಟಡಗಳ ಎತ್ತರವನ್ನು ಪತ್ತೆ ಹಚ್ಚುವುದು ಸೇರಿದಂತೆ ವಿವಿಧ ವೈಜ್ಞಾನಿಕ ವಿಷಯಗಳ ಬಗ್ಗೆ ಅರಿವು ಮೂಡಿಸಿ ಮಕ್ಕಳಲ್ಲಿನ ಸೃಜನಶೀಲತೆಯನ್ನು ಹೆಚ್ಚಿಸಲು ಮುಂದಾಗಿದ್ದೇವೆ. ಈ ದಿಕ್ಕಿನಲ್ಲಿ ಪೋಷಕರು ನೀಡುತ್ತಿರುವ ಸಹಕಾರವು ಅತ್ಯುತ್ತಮವಾಗಿದೆ. ಮಕ್ಕಳು ಬೆಳಗಿನಿಂದಲೂ ತಾವೇ ಸ್ವತಃ ದೂರದರ್ಶಕಗಳನ್ನು ತಯಾರಿಸಿ, ಮಸೂರಗಳನ್ನು ಫೋಕಸ್ ಮಾಡಿಕೊಂಡು ದೂರದಲ್ಲಿನ ವಸ್ತುಗಳನ್ನು ತಮ್ಮ ಹತ್ತಿರಕ್ಕೆ ಸೆಳೆದುಕೊಂಡು ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನ ನೀಡಿ ಸಜ್ಜುಗೊಳಿಸಿದರೆ ಸಾಕು ನಗರ ಪ್ರದೇಶದ ವಿದ್ಯಾರ್ಥಿಗಳು ಒಡ್ಡುವ ಸ್ಪರ್ಧೆಯನ್ನು ಎದುರಿಸಿ ಮುನ್ನಡೆದು ಗುರಿ ಸಾಧನೆಯನ್ನು ಮಾಡಲಿದ್ದಾರೆ ಎಂದು ಆತ್ಮವಿಶ್ವಾಸದಿಂದ ತಿಳಿಸಿದ ಸಂತೋಷ್‌ಕುಮಾರ್ ಮಕ್ಕಳ ಬಳಿಯಿರುವ ಆಂಢ್ರ‍್ಯಾಡ್ ಫೋನಿನಲ್ಲಿರುವ ಆಫ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ವೈಜ್ಞಾನಿಕವಾಗಿ ಅವಿಷ್ಕಾರ ಮಾಡಲು ಬಳಕೆ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಇಂದಿನ ಶಿಬಿರದಲ್ಲಿ ೭೫ಕ್ಕೂ ಹೆಚ್ಚಿನ ಮಕ್ಕಳು ಉತ್ಸಾಹದಿಂದ ವೈಜ್ಞಾನಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಎಂ.ಟಿ.ದೇವರಾಜು ಮಕ್ಕಳಿಗೆ ಗಣಿತದ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿ ವಿವಿಧ ವಸ್ತುಗಳ ಮೂಲಕ ಓರೆಗಾಮಿಯನ್ನು ಸೃಷ್ಠಿಸಿ ಸುಲಭವಾಗಿ ಗಣಿತವನ್ನು ಕಲಿಯುವಂತೆ ಪ್ರೇರೇಪಿಸುತ್ತಿದ್ದಾರೆ. ಮಕ್ಕಳ ಸೃಜನಶೀಲತೆಯು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದೆ ಎಂದು ಸಂತೋಷ್ ಅಭಿಮಾನದಿಂದ ಹೇಳಿದರು.

ಕೃಷ್ಣರಾಜಪೇಟೆ ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಪದ್ಮೇಶ್ ಮಾತನಾಡಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಇದೇ ಪ್ರಥಮ ಭಾರಿಗೆ ನಡೆಯುತ್ತಿರುವ ವೈಜ್ಞಾನಿಕ ಕಾರ್ಯಾಗಾರವು ವಿದ್ಯಾರ್ಥಿಗಳು ಸೇರಿದಂತೆ ಪೋಷಕರ ಗಮನ ಸೆಳೆದಿದೆ. ದೂರದ ವಸ್ತುಗಳು ಹಾಗೂ ಆಕಾಶ ಪುಂಜಗಳನ್ನು ವೀಕ್ಷಣೆ ಮಾಡಲು ಅಗತ್ಯವಾಗಿ ಬೇಕಾದ ದೂರದರ್ಶಕವನ್ನು ಮಕ್ಕಳ ಕೈಯ್ಯಿಂದಲೇ ತಯಾರಿಸಿರುವುದು ಮಕ್ಕಳಲ್ಲಿನ ವೃತ್ತಿಕೌಶಲ್ಯಕ್ಕೆ ಸಾಕ್ಷಿಯಾಗಿದೆ.
ಮಕ್ಕಳಿಗೆ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸಿ ಮಕ್ಕಳು ಮೊಬೈಲ್ ಫೋನಿನಲ್ಲಿ ವ್ಯರ್ಥವಾಗಿ ವಿಡಿಯೋ ಗೇಮ್‌ಗಳನ್ನು ಆಟವಾಡಿಕೊಂಡು ಕಾಲಹರಣ ಮಾಡುವುದನ್ನು ತಪ್ಪಿಸಿ ಮಕ್ಕಳನ್ನು ವಿಜ್ಞಾನ ಮತ್ತು ಗಣಿತದ ಕಡೆಗೆ ಆಕರ್ಷಿಸಿ ಭವಿಷ್ಯದ ವಿಜ್ಞಾನಿಗಳನ್ನಾಗಿ ತಯಾರು ಮಾಡುತ್ತಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ಸಂಗತಿಯಾಗಿದೆ ಎಂದು ಪದ್ಮೇಶ್ ಹೇಳಿದರು.
ಕಾರ್ಯಾಗಾರದಲ್ಲಿ ಮೈಸೂರಿನ ಸೈನ್ಸ್ ಪೌಂಡೇಷನ್ ಸಂಸ್ಥೆಯ ಮಂಜುಳಾ ಶಾಸ್ತ್ರಿ, ಸರ್ಕಾರಿ ಪ್ರೌಢಶಾಲೆಯ ಗಣಿತ ಪ್ರಾಧ್ಯಾಪಕ ಎಂ.ಟಿ.ದೇವರಾಜು, ಗುರುಕುಲ ಕೋಚಿಂಗ್ ಸೆಂಟರ್‌ನ ತರಬೇತುದಾರರಾದ ಮುರುಳೀಧರ್, ಶ್ರೀನಿವಾಸಯ್ಯ, ರವಿಕುಮಾರ್, ಪುರುಷೋತ್ತಮ್, ತಾಲೂಕು ಕಸಾಪ ಮಾಜಿಅಧ್ಯಕ್ಷ ಡಾ.ಕೆ.ಆರ್.ನೀಲಕಂಠ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ಮಕ್ಕಳು ಉತ್ಸಾಹದಿಂದ ವೈಜ್ಞಾನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೌರಮಂಡಲ, ನಕ್ಷತ್ರಪುಂಜಗಳು ಹಾಗೂ ಗ್ರಹಗಳ ವೀಕ್ಷಣೆ ಮಾಡಿ ಸಂಭ್ರಮಿಸಿದರು.

ವರದಿ. ಕೆ.ಎನ್.ಸಾಗರ್. ಕೃಷ್ಣರಾಜಪೇಟೆ . ಮಂಡ್ಯ

error: