May 4, 2024

Bhavana Tv

Its Your Channel

ಕೆ.ಆರ್.ಪೇಟೆ ತಾಲೂಕಿನ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿದ ಸಚಿವ ಡಾ.ನಾರಾಯಣಗೌಡ

ಕೆ.ಆರ್.ಪೇಟೆ :- ಟೀಕೆಗಳು ಸಾಯುತ್ತವೆ ಆದರೆ ನಾವು ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂಬ ಸತ್ಯವನ್ನು ನಾನು ತಿಳಿದಿರುವುದರಿಂದ ಟೀಕೆ-ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೇ ಜನಪರವಾಗಿ ಕೆಲಸ ಮಾಡುತ್ತಿದ್ದೇನೆ. ನಾನು ರಾಜಕಾರಣಕ್ಕೆ ಬಂದಿರುವುದು ಜನರ ಸೇವೆ ಮಾಡಲು ಹೊರತು ಶೋಕಿ ಮಾಡಲು ಅಲ್ಲ, ರಾಜಕಾರಣದ ಮೋಸ, ಕಪಟ ತಂತ್ರಗಾರಿಕೆಗಳು ನನಗೆ ಗೊತ್ತಿಲ್ಲ ಎಂದು ರಾಜ್ಯದ ಯುವಜನ ಸಬಲೀಕರಣ, ಕ್ರೀಡೆ, ರೇಷ್ಮೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಹೇಳಿದರು …

ಅವರು ಇಂದು ತಾಲ್ಲೂಕಿನ ಸಾರಂಗಿ ಮತ್ತು ಸಂತೇಬಾಚಹಳ್ಳಿ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಆರಂಭಿಸಿದ ಘನತ್ಯಾಜ್ಯ ಸಂಸ್ಕರಣಾ ಘಟಕಗಳು, ನೂತನವಾಗಿ ನಿರ್ಮಿಸಿರುವ ಪ್ರೌಢಶಾಲಾ ಕಟ್ಟಡಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಉದ್ಘಾಟಿಸಿ ಸಾರಂಗಿ ಗ್ರಾಮದಲ್ಲಿ ಮುಖ್ಯಪ್ರಾಣ ಆಂಜನೇಯನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು…

ಒಬ್ಬ ಸಾಮಾನ್ಯ ರೈತನ ಮಗನಾದ ನಾನು ಹೊಟ್ಟೆ ಬಟ್ಟೆಗಾಗಿ ದೇಶಾಂತರ ಹೋಗಿ ಮುಂಬೈ ಮಹಾನಗರದಲ್ಲಿ ನೆಲೆ ಕಂಡುಕೊAಡಿದ್ದೆ, ಆದರೆ ಉದ್ಯಮಿಯಾಗಿ ಸಮಾಜ ಸೇವಕನಾಗಿ ಗುರುತಿಸಿಕೊಂಡು ಸಾರ್ವಜನಿಕರು ಹಾಗೂ ಜನಸಾಮಾನ್ಯರ ಕೆಲಸ ಮಾಡುತ್ತಿದ್ದ ನಾನು 1200ಕಿ.ಮೀ ದೂರದಿಂದ ಜನ್ಮಭೂಮಿಯ ಸೇವೆ ಮಾಡಲು ಬಂದಿದ್ದೇನೆ. ನಾನು ಮಾಡಿರುವ ಅಲ್ಪ ಕೆಲಸವನ್ನೇ ದೊಡ್ಡದೆಂದು ಭಾವಿಸಿರುವ ಕೃಷ್ಣರಾಜಪೇಟೆ ತಾಲ್ಲೂಕಿನ ಪ್ರಬುದ್ಧ ಮತದಾರರು ಒಂದಲ್ಲಾ ಎರಡಲ್ಲ ಸತತವಾಗಿ ಮೂರು ಅವಧಿಗೆ ಹರಸಿ ಶಾಸಕನನ್ನಾಗಿ ಆಯ್ಕೆ ಮಾಡಿ ಕೆ.ಆರ್.ಪೇಟೆ ತಾಲ್ಲೂಕಿನ ರಾಜಕಾರಣದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ ಎಂದು ಸ್ಮರಿಸಿದ ಸಚಿವ ನಾರಾಯಣಗೌಡ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆ.ಆರ್.ಪೇಟೆ ತಾಲ್ಲೂಕಿನ ಅಭಿವೃದ್ಧಿಗೆ ಒಂದೂವರೆ ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ನಾನು ಅವರಿಗೆ ಎಂದೆAದಿಗೂ ಋಣಿಯಾಗಿದ್ದೇನೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಅಸ್ತಿತ್ವಕ್ಕೆ ಬರಲು ನಮ್ಮ ಕೊಡುಗೆಯಿದೆ. ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವನನ್ನಾಗಿ ನೇಮಕ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚಿನ ಜವಾಬ್ಧಾರಿ ನೀಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಆಶೀರ್ವಾದ ಪಡೆದು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ರಾಷ್ಟ್ರಧ್ವಜಾರೋಹಣ ಮಾಡಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಬಂದಿದ್ದೇನೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೋವಿಡ್ ಒಂದು ಮತ್ತು ಎರಡನೇ ಅಲೆಯಲ್ಲಿ ಜೀವದ ಹಂಗು ತೊರೆದು ಶಕ್ತಿಮೀರಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಜಿಲ್ಲೆಯಲ್ಲಿ ಹತ್ತು ಹಲವು ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿದ್ದೇನೆ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯು ಆರಂಭವಾಗಿದೆ. ಮೈಷುಗರ್ ಸಕ್ಕರೆ ಕಾರ್ಖಾನೆ ಕೂಡ ಆರಂಭವಾಗಲಿದೆ. ಮಂಡ್ಯ ಜಿಲ್ಲಾ ಉಸ್ತುವಾರಿಯನ್ನು ಬದಲಿಸಿ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ನೀಡಿದ್ದಕ್ಕೆ ನನಗೇನೂ ಬೇಸರವಾಗಿಲ್ಲ. ಪಕ್ಷವು ನನ್ನ ಮೇಲೆ ವಿಶ್ವಾಸವನ್ನಿಟ್ಟು ವಹಿಸಿರುವ ಹೊಸ ಜವಾಬ್ಧಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ನಾರಾಯಣಗೌಡ ಹೇಳಿದರು.

ಕೆ.ಆರ್.ಪೇಟೆ ತಾಲ್ಲೂಕಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬರಪೀಡಿತ ಸಂತೇಬಾಚಹಳ್ಳಿ ಹೋಬಳಿಯ ಕೆರೆ ಕಟ್ಟೆಗಳನ್ನು ಹೇಮಾವತಿ ನದಿಯ ನೀರಿನಿಂದ ತುಂಬಿಸುವ ಮಾಜಿಸ್ಪೀಕರ್ ಕೃಷ್ಣರ ಕನಸಿನ ಗೂಡೆಹೊಸಳ್ಳಿ ಏತ ನೀರಾವರಿ ಯೋಜನೆಯನ್ನು 218 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಂಜೂರು ಮಾಡಿಸಿ ಕಾಮಗಾರಿಯನ್ನು ಆರಂಭಿಸಿದ್ದೇನೆ. ಶೀಳನೆರೆ ಮತ್ತು ಬೂಕನಕೆರೆ ಹೋಬಳಿಯ ಕೆರೆಕಟ್ಟೆಗಳನ್ನು ತುಂಬಿಸುವ ಕಟ್ಟಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿಯು 265ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಂಜೂರಾಗಿದ್ದು ಸದ್ಯದಲ್ಲಿಯೇ ಕೆಲಸವು ಆರಂಭವಾಗಲಿದೆ. ಕೆ.ಆರ್.ಪೇಟೆ ತಾಲ್ಲೂಕಿನ ಎಲ್ಲಾ ಆರು ಹೋಬಳಿಗಳಲ್ಲಿಯೂ ಮೊರಾರ್ಜಿ, ಕಿತ್ತೂರರಾಣಿ, ಅಂಬೇಡ್ಕರ್ ಸೇರಿದಂತೆ ನವೋದಯ ಮಾದರಿಯ ಅಲ್ಪಸಂಖ್ಯಾತರ ವಸತಿಶಾಲೆಗಳನ್ನು ಮಂಜೂರು ಮಾಡಿಸಿ ಶಾಲೆಗಳನ್ನು ಆರಂಭಿಸಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ. ಶೀಳನೆರೆ ಹೋಬಳಿಯಲ್ಲಿ ಮತ್ತೊಂದು ವಸತಿಶಾಲೆಯು ಮಂಜೂರಾಗಿದ್ದು ಸದ್ಯದಲ್ಲಿಯೇ ಭೂಮಿಪೂಜೆ ಮಾಡುತ್ತೇನೆ ಎಂದು ಹೇಳಿದ ಸಚಿವ ನಾರಾಯಣಗೌಡ ತಾಲೂಕಿನಾದ್ಯಂತ ಅಭಿವೃದ್ಧಿ ಕೆಲಸ ಕಾರ್ಯಗಳು ನಾಗಾಲೋಟದಲ್ಲಿ ನಡೆಯುತ್ತಿವೆ. ಬಿಜೆಪಿ ಪಕ್ಷ ಸೇರಿ ಸಚಿವನಾಗಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ನನ್ನ ಏಳ್ಗೆಯನ್ನು ಸಹಿಸದ ರಾಜಕೀಯ ವಿರೋಧಿಗಳು ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಠಪಡಿಸಿದ ನಾರಾಯಣಗೌಡ ನನ್ನ ಅಳಿವು ಉಳಿವು ಬಿಜೆಪಿ ಪಕ್ಷದಲ್ಲಿ ಮಾತ್ರ..ಮುಂದಿನ ವಿಧಾನಸಭೆ ಚುನಾವಣೆಯನ್ನು ಬಿಜೆಪಿ ಪಕ್ಷದಿಂದಲೇ ಎದುರಿಸುತ್ತೇನೆ ಎಂದು ಸಚಿವರು ಸ್ಪಷ್ಠಪಡಿಸಿದರು.

ಸರ್ಕಾರಿ ನೌಕರರು ಬದ್ಧತೆಯಿಂದ ಜನಸಾಮಾನ್ಯರ ಕೆಲಸಗಳನ್ನು ಮಾಡಿಕೊಡಬೇಕು ಈ ಹಿಂದೆ ತಹಶೀಲ್ದಾರ್ ಆಗಿ 3 ವರ್ಷಗಳ ಕಾಲ ಉತ್ತಮವಾಗಿ ಸೇವೆ ಸಲ್ಲಿಸಿದ್ದ ಶಿವಮೂರ್ತಿ ಅವರು ವಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಇಲ್ಲಿಂದ ನಂಜನಗೂಡಿಗೆ ವರ್ಗಾವಣೆಗೊಂಡಿದ್ದಾರೆ. ಅವರನ್ನು ಕೆ.ಆರ್.ಪೇಟೆಗೆ ಕರೆಸಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಗುವುದು ಈಗ ಕೆ.ಆರ್.ಪೇಟೆಗೆ ತಾಲ್ಲೂಕಿನ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡು ಆಗಮಿಸಿರುವ ರೂಪ ಅವರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಜನವಿರೋಧಿ ಅಧಿಕಾರಿಗಳಿಗೆ ನನ್ನ ತಾಲೂಕಿನಲ್ಲಿ ಜಾಗವಿಲ್ಲ, ನನ್ನ ಬಳಿ ಕೆಲಸ ಮಾಡುವವರು ಜನಪರವಾಗಿ ಕೆಲಸ ಮಾಡುವುದನ್ನು ರೂಡಿಸಿಕೊಳ್ಳಬೇಕು, ಇಲ್ಲವೇ ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಮೂಡಾ ಮಾಜಿಅಧ್ಯಕ್ಷ ಕೆ.ಶ್ರೀನಿವಾಸ್, ಜಿ.ಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಸಾರಂಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹಾದೇವಿ, ಸಂತೇಬಾಚಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಮೋಹನ್, ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯತಿ ಅಧ್ಯಕ್ಷ ಕುಮಾರ್, ಮುಖಂಡರಾದ ಬಿಲ್ಲೇನಹಳ್ಳಿ ಕುಮಾರ್, ಸಾರಂಗಿ ಮಂಜುನಾಥಗೌಡ, ಟಿಎಪಿಸಿಎಂಎಸ್ ಮಾಜಿಅಧ್ಯಕ್ಷ ಶ್ರೀಧರ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಓಬಿಸಿ ಮೋರ್ಚಾ ಅಧ್ಯಕ್ಷ ಸಾರಂಗಿ ನಾಗರಾಜು, ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ಡಾ.ಪ್ರಕಾಶ್, ಆಪ್ತಸಹಾಯಕರಾದ ಕಿಕ್ಕೇರಿಕುಮಾರ್, ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ತಹಶೀಲ್ದಾರ್ ಎಂ.ವಿ.ರೂಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧನಂಜಯ್, ಸಾರಂಗಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸನ್ಮತಿಶ್ಯಾಮ್, ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್, ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜು, ಬಿಸಿಎಂ ಅಧಿಕಾರಿ ವೆಂಕಟೇಶ್, ಪೋಲಿಸ್ ಇನ್ಸ್ ಪೆಕ್ಟರ್ ಕೆ.ಎಸ್.ನಿರಂಜನ, ನವೀನ್, ಮುಖಂಡರಾದ ಕೈಗೋನಹಳ್ಳಿ ಕುಮಾರ್, ನಂಜಪ್ಪ, ಮುದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: