April 29, 2024

Bhavana Tv

Its Your Channel

ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಗಡಿಪಾರು ಮಾಡಬೇಕೆಂದು ಬಸ್ತಿ ಪ್ರದೀಪ್ ಆಗ್ರಹ

ಕೆ.ಆರ್.ಪೇಟೆ:– ರಾಯಚೂರು ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆಸಿ ಅಪಮಾನ ಮಾಡಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಸಂವಿಧಾನ ಶಿಲ್ಪಿಗೆ ಅಗೌರವ ಉಂಟು ಮಾಡಿರುವ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಗಡೀಪಾರು ಮಾಡಬೇಕು ಎಂದು ಬಹುಜನ ಸಮಾಜವಾದಿ ಪಕ್ಷದ ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಬಸ್ತಿ ಪ್ರದೀಪ್ ಆಗ್ರಹಿಸಿದರು .

ಬಹುಜನ ಸಮಾಜವಾಧಿ ಪಕ್ಷದ ಪದಾಧಿಕಾರಿಗಳ ನೇತೃತ್ವದಲ್ಲಿ ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಸ್ತಿಪ್ರದೀಪ್ ಭಾರತ ದೇಶವು ಸಂವಿಧಾನವನ್ನು ಜಾರಿಗೆ ತಂದ ಮಹತ್ವದ ಸಮಾರಂಭವಾದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಪುಷ್ಪನಮನ ಸಲ್ಲಿಸುವುದು ಈ ಹಿಂದಿನಿAದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ. ಜಿಲ್ಲಾ ಸತ್ರ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಗೌಡ ಅವರು ಸಾಮಾನ್ಯ ಜ್ಞಾನವಿಲ್ಲದಂತೆ ಮಾತನಾಡಿ ಸಂವಿಧಾನ ಶಿಲ್ಪಿಯ ಭಾವಚಿತ್ರ ತೆಗೆಸಿ ಅಪಮಾನ ಮಾಡಿ ಅಪಹಾಸ್ಯಕ್ಕೀಡಾಗಿದ್ದಾರೆ. ಮನುವಾದಿಗಳ ವ್ಯವಸ್ಥಿತವಾದ ಷಡ್ಯಂತ್ರದ ಸುಳಿಗೆ ಸಿಲುಕಿದಂತೆ ಕಂಡು ಬರುತ್ತಿರುವ ಮಲ್ಲಿಕಾರ್ಜುನಗೌಡ ಜಿಲ್ಲಾ ನ್ಯಾಯಾಧೀಶರಾಗಿ
ಬಾಲಿಷವಾಗಿ ವರ್ತಿಸಿದ್ದಾರೆ. ಸಂವಿಧಾನ ವಿರೋಧಿಯಾಗಿರುವ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಭಾರತ ದೇಶದಿಂದಲೇ ಗಡೀಪಾರು ಮಾಡಬೇಕು ಎಂದು ಬಸ್ತಿ ಪ್ರದೀಪ್ ಆಗ್ರಹಿಸಿದರು.

ಬಹುಜನ ಸಮಾಜವಾಧಿ ಪಕ್ಷದ ಜಿಲ್ಲಾ ಸಂಯೋಜಕರಾದ ಚೆಲುವರಾಜು ಮಾತನಾಡಿ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿರುವುದು ಇಡೀ ಭಾರತೀಯರಿಗೆ ಅಪಮಾನ ಮಾಡಿದಂತಾಗಿದೆ. ಸಂವಿಧಾನವನ್ನು ಓದಿ ಅರ್ಥ ಮಾಡಿಕೊಂಡು ನ್ಯಾಯಾಧೀಶರ ಹುದ್ದೆಯನ್ನು ಅಲಂಕರಿಸಿರುವ ವ್ಯಕ್ತಿಯೇ ಇಂತಹ ನಡವಳಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇಶವನ್ನು ಕಾಪಾಡುವವರು ಯಾರು ಎಂದು ಪ್ರಶ್ನಿಸಿದ ಅವರು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹರಿಹರಪುರ ಗ್ರಾಮದಲ್ಲಿ ನಡೆದ ಅಸ್ಪೃಶ್ಯತೆ ಆಚರಣಾ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗುತ್ತಿದೆ. ಸಂತೇಬಾಚಹಳ್ಳಿ ಹೋಬಳಿಯ ಚಿಕ್ಕಹಾರನಹಳ್ಳಿಯಲ್ಲಿ ದಲಿತ ಯುವಕನ ಕೊಲೆ ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷಿಸದ ಪೋಲಿಸರು ಆಮಿಷಕ್ಕೆ ಒಳಗಾಗಿ ಕೊಲೆ ಪ್ರಕರಣವನ್ನೇ ಮುಚ್ವಿಹಾಕುತ್ತಿದ್ದಾರೆ. ಈ ಬಗ್ಗೆ ಉಗ್ರವಾದ ಹೋರಾಟ ನಡೆಸುವುದಾಗಿ ಚೆಲುವರಾಜು ಎಚ್ಚರಿಸಿದರು..

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿಗಳಾದ ಚಲುವರಾಜು , ತಾಲ್ಲೂಕು ಉಸ್ತುವಾರಿ ಗೋವಿಂದರಾಜು ,
ತಾಲ್ಲೂಕು ಅಧ್ಯಕ್ಷರು ಬಸ್ತಿ ಪ್ರದೀಪ್ , ಪ್ರಧಾನ ಕಾರ್ಯದರ್ಶಿ ಗಂಗಾಧರ್. ಉಪಾಧ್ಯಕ್ಷರು ಶಂಕರ್, ಸಂತೇಬಾಚಹಳ್ಳಿ ಹೋಬಳಿ ಅಧ್ಯಕ್ಷರು ಸ್ವಾಮಿ , ಉಪಾಧ್ಯಕ್ಷರು ನವೀನ್ ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: