May 4, 2024

Bhavana Tv

Its Your Channel

ಹೇಮಗಿರಿ ಜಾತ್ರೆಯ ಅಂಗವಾಗಿ ನಡೆಯಬೇಕಿದ್ದ ಕಲ್ಯಾಣವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಹಾಗೂ ತೆಪ್ಪೋತ್ಸವ ರದ್ದುಪಡಿಸಿ ತಾಲ್ಲೂಕು ಆಡಳಿತ ಆದೇಶ ..

ಕೃಷ್ಣರಾಜಪೇಟೆ:- ಕೋವಿಡ್ 3ನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಹಾಗೂ ತೆಪ್ಪೋತ್ಸವ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ತಹಶೀಲ್ದಾರ್ ಎಂ.ವಿ.ರೂಪ ಅವರು ಇಂದು ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಸ್ಪಷ್ಟಪಡಿಸಿದರು …

ಶ್ರೀ ಕಲ್ಯಾಣವೆಂಕಟರಮಣಸ್ವಾಮಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 8 ರಂದು ನಡೆಯಬೇಕಿದ್ದ ಬ್ರಹ್ಮರಥೋತ್ಸವ ಹಾಗೂ 13ರಂದು ಹೇಮಾವತಿ ನದಿಯಲ್ಲಿ ಕೃತಕ ತೆಪ್ಪದಲ್ಲಿ ನಡೆಯಬೇಕಾಗಿದ್ದ ತೆಪ್ಪೋತ್ಸವ ಕಾರ್ಯಕ್ರಮಗಳು ನಡೆಯುವುದಿಲ್ಲ. ಬ್ರಹ್ಮರಥೋತ್ಸವದಂದು ಭಕ್ತರಿಗೆ ಉತ್ಸವ ಮೂರ್ತಿಗಳು ಹಾಗೂ ಹೇಮಗಿರಿ ಬೆಟ್ಟದ ದೇವಾಲಯಯದಲ್ಲಿರುವ ಶ್ರೀ ರಂಗನಾಥಸ್ವಾಮಿಯ ಮೂಲ ವಿಗ್ರಹವನ್ನು ವೀಕ್ಷಿಸಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ಬಂಡಿಹೊಳೆ, ಮಾಕವಳ್ಳಿ, ಹರಿಹರಪುರ, ಬೀರವಳ್ಳಿ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹಾಗೂ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಸಾರ್ವಜನಿಕರು ಸಹಕರಿಸಬೇಕು ಎಂದು ತಹಶೀಲ್ದಾರ್ ಎಂ.ವಿ.ರೂಪ ಮನವಿ ಮಾಡಿದರು…

ಇಂದು ಕೃಷ್ಣರಾಜಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಬಂಡಿಹೊಳೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ತಹಶೀಲ್ದಾರ್ ಎಂ.ವಿ.ರೂಪ ಮಾತನಾಡಿ ಕೋವಿಡ್ ತೀವ್ರತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಹೇಮಗಿರಿ ಜಾತ್ರೆ ಸೇರಿದಂತೆ ಎಲ್ಲಾ ಜಾತ್ರೆ ರಥೋತ್ಸವಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಆದ್ದರಿಂದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಹೇಮಗಿರಿ ಜಾತ್ರೆಯ ವಾರ್ಷಿಕ ಬ್ರಹ್ಮರಥೋತ್ಸವವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಅಂತೆಯೇ ರಥೋತ್ಸವ ಮತ್ತು ತೆಪ್ಪೋತ್ಸವ ನಿಷೇಧಿಸಿದ್ದು ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ದಯಮಾಡಿ ಭಕ್ತರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ತಹಶೀಲ್ದಾರ್ ರೂಪ ಕೈಮುಗಿದು ಮನವಿ ಮಾಡಿದರು.

ಸಭೆಯಲ್ಲಿ ಗ್ರಾಮಾಂತರ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್ ಕೆ.ಎಸ್.ನಿರಂಜನ, ರಾಜಶ್ವನಿರೀಕ್ಷಕಿ ಚಂದ್ರಕಲಾಪ್ರಕಾಶ್, ಬಂಡಿಹೊಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುನೀಲ್, ಸದಸ್ಯರಾದ ಆನಂದ್, ಶಿವಕುಮಾರ್, ಮುಖಂಡರಾದ ಕಾಯಿಮಂಜುನಾಥ್, ರಂಗನಾಥ, ವಿಶ್ವನಾಥ ಗ್ರಾಮಲೆಕ್ಕಾಧಿಕಾರಿ ಪೂಜಾ, ಮುಜರಾಯಿ ವಿಷಯನಿರ್ವಾಹಕಿ ಶಿಲ್ಪಾ, ಪುರಸಭೆ ಸದಸ್ಯ ಕೆ.ಎಸ್.ಸಂತೋಷ್, ಬಳ್ಳೇಕೆರೆ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: