May 7, 2024

Bhavana Tv

Its Your Channel

ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರವು ರೈತ ವಿರೋಧಿ ಸರ್ಕಾರವಾಗಿದೆ-ಎ.ಎಲ್.ಕೆಂಪೂಗೌಡ

ಕೃಷ್ಣರಾಜಪೇಟೆ :- ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರವು ರೈತ ವಿರೋಧಿ ಸರ್ಕಾರವಾಗಿದೆ. ರೈತರ ನೋವು ನಲಿವುಗಳಿಗೆ ಧ್ವನಿಯಾಗಿ ಕೆಲಸ ಮಾಡದ ರಾಜ್ಯ ಸರ್ಕಾರವು ಗಾಢವಾದ ನಿದ್ರೆಯಲ್ಲಿದೆ ಎಂದು ರಾಜ್ಯ ರೈತಸಂಘದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಎ.ಎಲ್.ಕೆಂಪೂಗೌಡ ಆಕ್ರೋಶ ವ್ಯಕ್ತಪಡಿಸಿದರು ..

ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಕೆ.ಆರ್.ಪೇಟೆ ತಾಲ್ಲೂಕು ರೈತಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ರೈತಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು…

ರಾಜ್ಯ ಸರ್ಕಾರವು ರೈತ ಪರವಾದ ಕಾರ್ಯಗಳು ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬದ್ಧತೆಯನ್ನು ಪ್ರದರ್ಶಿಸದೇ ಕೇವಲ ಮಾತಿನಲ್ಲಿ ಮನೆಯನ್ನು ಕಟ್ಟುತ್ತಿದೆ. ಕಳೆದ 10 ವರ್ಷಗಳಿಂದಲೂ ಕಬ್ಬಿಗೆ ಎಫ್.ಆರ್.ಪಿ ಆಧಾರದ ಮೇಲೆ ಬೆಲೆಯನ್ನು ನಿಗಧಿಪಡಿಸಿ ಕಬ್ಬು ಬೆಳೆಗಾರರು ಹಾಗೂ ರೈತರ ಹಿತವನ್ನು ಕಾಪಾಡುವ ಬದ್ಧತೆಯನ್ನು ಪ್ರದರ್ಶಿಸದೇ ರೈತ ವಿರೋಧಿಯಾಗಿದ್ದು ಸಕ್ಕರೆ ಕಾರ್ಖಾನೆಗಳ ಮಾಲೀಕರ ಕೈಗೊಂಬೆಯಾಗಿದೆ ಎಂದು ಕಿಡಿ ಕಾರಿದರು..

ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಅವರಿಗೆ ಆಡಳಿತದ ಗಂಧ ಗಾಳಿ ಏನೊಂದೂ ಗೊತ್ತಿಲ್ಲ, ಅವರ ಮಾತನ್ನು ತಹಶೀಲ್ದಾರ್ ಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳೇ ಕೇಳುವುದಿಲ್ಲ, ಇವರು ನೆಪ ಮಾತ್ರಕ್ಕೆ ಜಿಲ್ಲಾಧಿಕಾರಿಯಾಗಿದ್ದು ಜಿಲ್ಲೆಯಲ್ಲಿ ಇದ್ದೂ ಇಲ್ಲದಂತಿರುವುದರಿAದ ಜಿಲ್ಲೆಯಲ್ಲಿ ಆಡಳಿತ ಯಂತ್ರವು ಕುಸಿದು ಬಿದ್ದಿದ್ದು ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕೆಂಪೂಗೌಡ ಜಿಲ್ಲಾಡಳಿತ ಸೇರಿದಂತೆ ತಾಲ್ಲೂಕು ಆಡಳಿತಗಳು ರೈತಹೋರಾಟ ಹಾಗೂ ಸಂಘಟನೆಯನ್ನು ಲಘುವಾಗಿ ಪರಿಗಣಿಸಿವೆ. ತಾಲ್ಲೂಕು ಕಛೇರಿಗಳು ಸೇರಿದಂತೆ ಸರ್ಕಾರಿ ಕಛೇರಿಗಳಲ್ಲಿ ಲಂಚಾವತಾರ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ರೈತರ ಸಮಸ್ಯೆಗಳನ್ನು ನಿವಾರಿಸುವಂತೆ ಸಲ್ಲಿಸಿರುವ ಮನವಿಯನ್ನು ಪರಿಗಣಿಸದೇ ಬೇಕಾಬಿಟ್ಟಿಯಾಗಿ ವರ್ತಿಸುತ್ತಿರುವ ತಹಶೀಲ್ದಾರ್ ಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ರೈತರ ಶೋಷಣೆ ಮಾಡುತ್ತಿದ್ದಾರೆ. ಈ ದಿಕ್ಕಿನಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಆಡಳಿತದ ವಿರುದ್ಧವೇ ಸಧ್ಯದಲ್ಲಿಯೇ ಅಹೋರಾತ್ರಿ ಚಳವಳಿ ನಡೆಸುವ ಮೂಲಕ ಭ್ರಷ್ಟಾಚಾರವನ್ನು ಪೋಷಿಸುತ್ತಿರುವ ತಹಶೀಲ್ದಾರ್ ಎಂ.ವಿ.ರೂಪ ಅವರ ವಿರುದ್ಧವೇ ಹೋರಾಟ ರೂಪಿಸಿ ಜಿಲ್ಲೆಯಾಧ್ಯಂತ ಎಲ್ಲಾ ಜನವಿರೋಧಿ ಅಧಿಕಾರಿಗಳ ವಿರುದ್ಧ ಚಳವಳಿಯನ್ನು ರೂಪಿಸುವುದಾಗಿ ಕೆಂಪೂಗೌಡ ಪ್ರಕಟಿಸಿದರು…

ಗೊರೂರು ಜಲಾಶಯದಲ್ಲಿ ನೀರಿನ ಸಂಗ್ರಹವು ಸಾಕಷ್ಠಿರುವುದರಿಂದ ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಹೇಮಾವತಿ ಜಲಾಶಯ ಯೋಜನೆಯ ಕಾಲುವೆಗಳಲ್ಲಿ ಹೇಮಾವತಿ ನದಿಯ ನೀರು ಹರಿಸಿ ರೈತರ ಜಮೀನುಗಳಿಗೆ ಹಾಗೂ ಕೆರೆಕಟ್ಟೆಗಳನ್ನು ತುಂಬಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು..

ರೈತ ಸಂಘಟನೆಯು ಕಳೆದ 40 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತ ರೈತರ ನೋವು ನಲಿವುಗಳಿಗೆ ಧ್ವನಿಯಾಗಿ ರೈತರ ಧೀಶಕ್ತಿಯಾಗಿ ಕೆಲಸ ಮಾಡುತ್ತಿದೆ. ರೈತ ಸಂಘಟನೆಯ ಬಗ್ಗೆ ಹಗುರವಾಗಿ ಮಾತನಾಡುವ ರಾಜಕಾರಣಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಮ್ಮ-ನಮ್ಮ ಪಾಲಿನ ಕೆಲಸಗಳನ್ನು ನಾವು ಮಾಡೋಣ, ಅನ್ಯಾಯ, ಅಕ್ರಮಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡೋಣ ಆಗ ನಮ್ಮ ಸಂಘಟನೆಯ ತಾಕತ್ತು ಏನೆಂಬುದು ಜನಸಾಮಾನ್ಯರಿಗೆ ವಿಶೇಷವಾಗಿ ಸರ್ಕಾರಕ್ಕೆ ಗೊತ್ತಾಗುತ್ತದೆ ಅಷ್ಟು ಸಾಕಲ್ಲವೇ, ರೈತ ಸಂಘವು ರೈತನಾಯಕರಾದ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನಾನಂತರ ಹೆಚ್ಚು ಕಾಲ ಉಳಿಯುವುದಿಲ್ಲ ಸಂಘಟನೆ ಮುಳುಗಿ ಹೋಗುತ್ತದೆ ಎಂದು ಟೀಕಿಸುತ್ತಿದ್ದವರಿಗೆ ರೈತಸಂಘಟನೆಯು ಹೆಮ್ಮರವಾಗಿ ಬೆಳೆದು ಬೇರೂರುವ ಮೂಲಕ ತಕ್ಕ ಉತ್ತರವನ್ನು ನೀಡಿದೆ ಎಂದು ಕೆಂಪೂಗೌಡ ಹೇಳಿದರು..

ಸಮಾಲೋಚನಾ ಸಭೆಯಲ್ಲಿ ಹಿರಿಯ ರೈತ ಮುಖಂಡರಾದ ಮುದುಗೆರೆ ರಾಜೇಗೌಡ, ಚೌಡೇನಹಳ್ಳಿ ಕೃಷ್ಣೇಗೌಡ, ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಕರೋಠಿ ತಮ್ಮಯ್ಯ, ನಗರೂರು ಕುಮಾರ್, ಪಿ.ಬಿ.ಮಂಚನಹಳ್ಳಿ ನಾಗಣ್ಣಗೌಡ, ಬೂಕನಕೆರೆ ನಾಗರಾಜು, ಬಿ.ಆರ್.ಪ್ರಸನ್ನ ಮತ್ತಿತರರು ಸಭೆಯಲ್ಲಿ ಮಾತನಾಡಿದರು..
ನೂರಾರು ರೈತ ಮುಖಂಡರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: