May 4, 2024

Bhavana Tv

Its Your Channel

ಕೆ.ಆರ್.ಪೇಟೆಯಲ್ಲಿ ಬಾಲಕಾರ್ಮಿಕ ಪದ್ಧತಿ ತಡೆ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನ

ಕೆ.ಆರ್.ಪೇಟೆಯಲ್ಲಿ ಬಾಲಕಾರ್ಮಿಕ ಪದ್ಧತಿ ತಡೆ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನಕ್ಕೆ ತಹಶೀಲ್ದಾರ್ ಎಂ.ವಿ.ರೂಪ ಚಾಲನೆ..ನಾಟಕ ಪ್ರದರ್ಶನ ವೀಕ್ಷಿಸಿ ಸಂಭ್ರಮಿಸಿದ ಸಾರ್ವಜನಿಕರು ..

ಆಟವಾಡಿಕೊಂಡು ಶಾಲೆಗೆ ಹೋಗಿ ವಿದ್ಯೆ ಕಲಿತು ಭವಿಷ್ಯದ ನಾಗರಿಕರಾಗಿ ರೂಪುಗೊಳ್ಳುವ ಸಮಯದಲ್ಲಿ ಮಕ್ಕಳನ್ನು ಕೆಲಸಕ್ಕೆ ಹಚ್ಚಿ ಅವರ ಉಜ್ವಲವಾದ ಭವಿಷ್ಯವನ್ನು ನಾಶಪಡಿಸಿ ಬಾಲಕಾರ್ಮಿಕರನ್ನಾಗಿ ಮಾಡಬಾರದು..ಮಕ್ಕಳ ಹಕ್ಕುಗಳನ್ನು ಧಮನಗೊಳಿಸುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಹಶೀಲ್ದಾರ್ ಎಂ.ವಿ.ರೂಪ ಎಚ್ಚರಿಸಿದರು..

ಅವರು ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಬಾಲಕಾರ್ಮಿಕ ತಡೆಗಾಗಿ ಆಯೋಜಿಸಿದ್ದ ಬೀದಿನಾಟಕ ಜಾಗೃತಿ ಪ್ರದರ್ಶನವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು..

ಮಕ್ಕಳು ಭವಿಷ್ಯದ ನಾಯಕರು, ಮಕ್ಕಳಿಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕೊಡಿಸಿ ಅವರನ್ನು ನಾಗರಿಕ ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ. ಮಕ್ಕಳ ಉಜ್ಬಲವಾದ ಭವಿಷ್ಯಕ್ಕೆ ಪೋಷಕರು ಕಂಟಕಪ್ರಾಯರಾಗದೇ ಅವರನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯನ್ನು ಕೊಡಿಸಿ ಸಾಧನೆ ಮಾಡುವಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ ತಹಶೀಲ್ದಾರ್ ರೂಪ 15 ವರ್ಷದೊಳಗಿನ ಮಕ್ಕಳನ್ನು ಹೋಟೆಲ್, ಕ್ಯಾಂಟೀನ್ ಗಳು, ಬಾರ್ ಗಳು ಸೇರಿದಂತೆ ಮೆಕ್ಯಾನಿಕ್ ಶಾಪ್ ಗಳಲ್ಲಿ ದುಡಿಮೆಗೆ ಬಳಸಿಕೊಂಡರೆ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಹಶೀಲ್ದಾರ್ ರೂಪ ಎಚ್ಚರಿಸಿದರು..

ಬೀದಿ ನಾಟಕ ಪ್ರದರ್ಶನವು ಜನಸಾಮಾನ್ಯರಿಗೆ ಅರಿವಿನ ಜಾಗೃತಿ ಮೂಡಿಸಿ ಬದಲಾವಣೆಯ ದಿಕ್ಕಿನತ್ತ ಕೊಂಡೊಯ್ಯಲು ಪರಿಣಾಮಕಾರಿ ಮಾಧ್ಯಮವಾಗಿದೆ. ಕಲಾವಿದರು ಮಕ್ಕಳ ಹಕ್ಕುಗಳ ಸಂರಕ್ಷಣೆ ಹಾಗೂ ಬಾಲ ಕಾರ್ಮಿಕರ ಬವಣೆಗಳನ್ನು ಮನ ಮುಟ್ಟುವಂತೆ ಅಭಿನಯಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಕಾರ್ಮಿಕ ಇಲಾಖೆಯು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಇಲಾಖೆಯ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಕುರಿತು ಪ್ರಚಾರ ನಡೆಸುತ್ತಾ ಕೆಲಸ ಮಾಡುತ್ತಿದ್ದಾರೆ ಎಂದು ತಹಶೀಲ್ದಾರ್ ರೂಪ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಮಿಕ ನಿರೀಕ್ಷಕ ಅಶೋಕ್, ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷೆ ಚಂದ್ರಕಲಾ, ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್ ಸೇರಿದಂತೆ ನೂರಾರು ಸಾರ್ವಜನಿಕರು ಬೀದಿ ನಾಟಕ ಪ್ರದರ್ಶನವನ್ನು ವೀಕ್ಷಿಸಿ ಸಂಭ್ರಮಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: