
ಕೆ.ಆರ್.ಪೇಟೆ:– ಕೇಸರಿ ಧ್ವಜಗಳು ಹಾಗೂ ವಿದ್ಯುದ್ಧೀಪಗಳಿಂದ ಕಂಗೊಳಿಸುತ್ತಿರುವ ತ್ರಿವೇಣಿ ಸಂಗಮ ಕ್ಷೇತ್ರ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ, ಕ್ಷೇತ್ರದ ಶಾಸಕರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಭೇಟಿ ನೀಡಿ ಅಂತಿಮ ಹಂತದ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಿದರು. ಚಂದ್ರವನ ಆಶ್ರಮದ ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿಗಳು ಮಹಾಕುಂಭಮೇಳಕ್ಕೆ ಭೂಮಿಪೂಜೆ ಮಾಡಿ ಸಂಪ್ರೋಕ್ಷಣೆ ನಡೆಸಿದರು
ಅಕ್ಟೋಬರ್ 14 ರಂದು ಶುಕ್ರವಾರ ಮಹಾಕುಂಭಮೇಳಕ್ಕೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ.ಡಿ.ವೀರೇಂದ್ರಹೆಗಡೆ ಚಾಲನೆ ನೀಡಲಿರುವರು
ಅಕ್ಟೋಬರ್ 15ರ ಶನಿವಾರ ಹಾರನಹಳ್ಳಿ ಕೋಡಿ ಮಠದ ಪೀಠಾಧಿಪತಿಗಳಾದ ಜಗದ್ಗುರು ಡಾ.ಶಿವಯೋಗಿ ಶಿವಾನಂದ ರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸರ್ವ ಧರ್ಮ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ



ಅಕ್ಟೋಬರ್ 16ರ ಭಾನುವಾರ ನಡೆಯಲಿರುವ ಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಜಿ, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಮಾಜಿಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಭಾಗವಹಿಸಿ ಪವಿತ್ರ ಪುಣ್ಯಸ್ನಾನ ಮಾಡಲಿದ್ದಾರೆ.
ಕೆ.ಆರ್.ಪೇಟೆ ಕ್ಷೇತ್ರದ ಶಾಸಕರು ರಾಜ್ಯದ ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡರ ನೇತೃತ್ವದಲ್ಲಿ 9 ವರ್ಷಗಳ ನಂತರ ವೈಭವದ ಮಹಾಕುಂಭಮೇಳ ನಡೆಯುತ್ತಿದೆ.
ರಾಜ್ಯದ ನಾನಾ ಭಾಗಗಳಿಂದ 8ಲಕ್ಷಕ್ಕೂ ಹೆಚ್ಚಿನ ಭಕ್ತರು ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಗಳು ಹಗಲಿರುಳೆನ್ನದೇ ಮಹಾಕುಂಭಮೇಳದ ಯಶಸ್ಸಿಗಾಗಿ ಸಿದ್ಧತೆಗಳನ್ನು ಕೈಗೊಂಡಿವೆ.
ತ್ರಿವೇಣಿ ಸಂಗಮದ ವಿಶಾಲವಾದ ಜಲಸಾಗರದ ಅಂಚಿನಲ್ಲಿ ನೂತನವಾಗಿ ನಿರ್ಮಿಸಿರುವ ಮಲೈಮಹದೇಶ್ವರರ ದೇವಾಲಯವು ಇಂದು ಲೋಕಾರ್ಪಣೆಯಾಗುತ್ತಿದೆ. ಮಹಾಕುಂಭಮೇಳ ಅಂಗವಾಗಿ ನಾಗಮಲೆ ಯಾಗಶಾಲೆಯಲ್ಲಿ ಚಂದ್ರವನ ಶ್ರೀಗಳ ನೇತೃತ್ವದಲ್ಲಿ ವಿಶೇಷವಾಗಿ ಹೋಮಹವನಗಳು, ಪೂಜೆ ಪುರಸ್ಕಾರಗಳು ನಡೆಯುತ್ತಿವೆ.
ಇಂದು(ಗುರುವಾರ) ಕೆ.ಆರ್.ಪೇಟೆ ಪಟ್ಟಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನುಡಿಸಿರಿ ಹಬ್ಬದ ಖ್ಯಾತಿಯ ಮೂಡಬಿದ್ರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಆಳ್ವ ಅವರ ನೇತೃತ್ವದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಲಾವಿದರು ಯಕ್ಷಗಾನ, ಜಾನಪದ ನೃತ್ಯಗಳು ಸೇರಿದಂತೆ 25 ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ, ಪಟಾಕಿಗಳು ಹಾಗೂ ಬಾಣಬಿರುಸುಗಳನ್ನು ಸಿಡಿಸಿ ಮಹಾಕುಂಭಮೇಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ..
ದಕ್ಷಿಣ ಭಾರತದ ಮಹಾಕುಂಭಮೇಳವು ವೈಭವಯುತವಾಗಿ ಇದೇ ಮೊದಲ ಬಾರಿಗೆ ಪವಾಡಪುರುಷರಾದ ಮಲೈ ಮಹದೇಶ್ವರರು ಬಾಲಕರಾಗಿದ್ದಾಗ ಪವಾಡ ನಡೆಸಿರುವ ಕೆ.ಆರ್.ಪೇಟೆ ತಾಲ್ಲೂಕಿನ ಪವಿತ್ರ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿದ್ದು ಪ್ರವಾಸಿಗರು ಹಾಗೂ ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತಿದೆ. ತ್ರಿವೇಣಿ ಸಂಗಮ ಕ್ಷೇತ್ರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಶ್ರೀಕ್ಷೇತ್ರಕ್ಕೆ ಭಕ್ತ ಜನಸಾಗರ ಹರಿದು ಬರುತ್ತಿದೆ
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ. ಮಂಡ್ಯ

More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ