ಮಳವಳ್ಳಿ :
ಮಳವಳ್ಳಿ : ಮಳವಳ್ಳಿ ತಾಲೂಕಿನ ಸುತ್ತಮುತ್ತಲ ಕಾಡಂಚಿನ ಗ್ರಾಮಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆಗಳ ದಾಳಿಯಿಂದ ತತ್ತರಿಸಿ ಹೋಗುತ್ತಿರುವ ರೈತರ ಕಣ್ಣೀರ ಗೋಳು ಅರಣ್ಯ ರೋಧನೆವಾಗುತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗುತ್ತಿದೆ.
ಹಲಗೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆಗಳ ದಾಳಿ ದನಕರುಗಳನ್ನು ದಿನ ಮೇವು ಮೇಯ್ಯಲು ಹೊಲಗದ್ದೆಗಳಿಗೆ ಬಿಟ್ಟಂತೆ ಮಾಮೂಲಾಗಿ ಹೋಗಿದ್ದರೆ ಜೊತೆಗೆ ಶಿಂಷಾ ಅರಣ್ಯ ಪ್ರದೇಶದ ಮಗ್ಗುಲಲ್ಲಿ ಇರುವ ನೆಟ್ಕಲ್ , ಚಂದಹಳ್ಳಿ , ಹೆಬ್ಬಣಿ, ಶಿಂಷಾಪುರ ಗ್ರಾಮಗಳಲ್ಲಿ ಆನೆಗಳ ದಾಳಿಯಿಂದ ರೈತರು ತತ್ತರಿಸಿ ಹೋಗಿದ್ದು ರೈತರ ಗೋಳು ಕೇಳುವವರೇ ದಿಕ್ಕಿಲ್ಲದಂತಾಗಿ ಹೋಗಿದೆ.
ಈ ವರೆಗೆ ಕಾಡಂಚಿನ ಗ್ರಾಮಗಳಲ್ಲಿ ಲಗ್ಗೆ ಹಿಟ್ಟು ರೈತರು ಬೆಳೆದ ಫಸಲನ್ನು ಹಾಳು ಮಾಡಿ ಹೋಗುತ್ತಿದ್ದ ಆನೆಗಳು ಕಾಡಂಚಿನಿAದ ತುಸು ದೂರದಲ್ಲೇ ಇರುವ ಚೊಟ್ಟನಹಳ್ಳಿ ಗ್ರಾಮಕ್ಕೂ ನೆನ್ನೆ ರಾತ್ರಿ ನುಗ್ಗಿರುವ ಆನೆಗಳ ಹಿಂಡು ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಇನ್ನು ಕೆಲವೇ ದಿನಗಳಲ್ಲಿ ಕೊಯ್ಲು ಮಾಡಬೇಕಿದ್ದ ಭತ್ತ, ರಾಗಿ ಜೊತೆಗೆ ತೆಂಗಿನ ಸಸಿಗಳನ್ನು ತುಳಿದು ನಾಶ ಪಡಿಸಿದ್ದು ಸಾವಿರಾರು ರೂ ಖರ್ಚು ಮಾಡಿ ಬೆಳೆದಿದ್ದ ಫಸಲು ಕೊಯ್ಲು ಮಾಡುವ ಹಂತದಲ್ಲಿ ಮಣ್ಣು ಪಾಲಾಗಿರುವುದನ್ನು ಕಂಡ ರೈತರ ಕಣ್ಣೀರ ಗೋಳು ಕರುಳು ಹಿಂಡುವoತಿದೆ.ಚೊಟ್ಟನಹಳ್ಳಿ ಗ್ರಾಮದ ರೈತ ಸಿದ್ದರಾಜು ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಎದೆ ಮಟ್ಟಕ್ಕೆ ಬೆಳೆದಿದ್ದ ಭತ್ತ ಇನ್ನೂ ಕೆಲವೇ ದಿನಗಳಲ್ಲಿ ಕೊಯ್ಲು ಮಾಡಿದ್ದರೆ ವರ್ಷವಿಡೀ ಈ ಕುಟುಂಬದ ಹೊಟ್ಟೆ ತುಂಬುವುದರ ಜೊತೆಗೆ ವ್ಯವಸಾಯಕ್ಕೆ ಮಾಡಿದ್ದ ಸಾಲ ಸಹ ತೀರುತ್ತಿತ್ತು.
ದುರಂತವೆAದರೆ ನೆನ್ನೆ ರಾತ್ರಿ ಇವರ ಜಮೀನಿಗೆ ನುಗ್ಗಿರುವ ಕಾಡಾನೆಗಳು ಒಂದು ಎಕರೆ ಭತ್ತವನ್ನು ಸಂಪೂರ್ಣವಾಗಿ ತುಳಿದು ನಾಶ ಪಡಿಸಿ ಬಿಟ್ಟಿವೆ, ಜೊತೆಗೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಐದಾರು ತೆಂಗಿನ ಮರಗಳನ್ನು ಸಹ ನೆಲಕ್ಕುರುಳಿಸಿ ಹೋಗಿವೆ.
ಕಳೆದ ವರ್ಷ ಸಹ ಇದೇ ರೀತಿ ಕಟ್ಟಾವು ಹಂತದಲ್ಲಿದ್ದಾಗಲೇ ಆನೆಗಳು ಎಲ್ಲವನ್ನೂ ತುಳಿದು ನಾಶ ಮಾಡಿಬಿಟ್ಟಿದ್ದವು, ಪರಿಹಾರಕ್ಕೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆದ ಪುರುಷಾರ್ಥಕ್ಕೆ ಅರಣ್ಯ ಇಲಾಖೆಯವರು ೩೫೦೦ ರೂ ಪರಿಹಾರ ನೀಡಿದ್ದರು ಎಂದು ರೈತ ಸಿದ್ದರಾಜು ತಮ್ಮ ಅಳಲು ತೋಡಿಕೊಂಡರು.
ಇನ್ನೂ ಇದೇ ಗ್ರಾಮದ ರಮೇಶ್ ಅವರು ತಮ್ಮ ೭ ಎಕರೆ ಜಮೀನಿ ನಲ್ಲಿ ಬೆಳೆದಿದ್ದ ರಾಗಿ ಬೆಳೆ ಇನ್ನೇನೊ ಕಟ್ಟಾವು ಮಾಡುವ ಹಂತದಲ್ಲಿರುವಾಗಲೇ ದಾಳಿ ಇಟ್ಟಿರುವ ಆನೆಗಳ ಹಿಂಡು ರಾಗಿ ಬೆಳೆಯನ್ನು ಸಂಪೂರ್ಣವಾಗಿ ತುಳಿದು ನಾಶ ಪಡಿಸಿರುವುದೇ ಅಲ್ಲದೆ ಜಮೀನಿನ ಸುದ್ದ ಬೆಳೆಸಿದ್ದ ೩೫೦ ತೆಂಗಿನ ಸಸಿಗಳನ್ನು ತುಳಿದು ನಾಶ ಪಡಿಸಿವೆ.
ಹಾಗೆಯೇ ಜಮೀನಿನಲ್ಲಿ ಅಳವಡಿಸಿದ್ದ ಹನಿ ನೀರಾವರಿ ಪೈಪ್ ಗಳನ್ನು ಸಹ ಕಿತ್ತು ಹಾಕಿದ್ದು ಇದರಿಂದ ರಮೇಶ್ ಅವರಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ.
ಇದಲ್ಲದೆ ಇದೇ ಗ್ರಾಮದ ಪ್ರಕಾಶ್ ಎಂಬುವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತ, ಬಸವರಾಜ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಒಂದು ಎಕರೆ ಭತ್ತ ಸಹ ಆನೆಗಳ ದಾಳಿಗೆ ಸಿಕ್ಕು ಮಣ್ಣು ಪಾಲಾಗಿ ಹೋಗಿದೆ.
ಚೊಟ್ಟನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆನೆಗಳು ನಿರಂತರ ವಾಗಿ ದಾಳಿ ನಡೆಸಿ ಸಾಲಸೋಲ ಮಾಡಿ ರೈತರು ಬೆಳೆದಿದ್ದ ಬೆಳೆಯನ್ನು ತುಳಿದು ನಾಶ ಪಡಿಸುತ್ತಿದ್ದರೂ ಆನೆಗಳ ದಾಳಿ ತಡೆಗೆ ಯಾವುದೇ ಶಾಶ್ವತ ಕ್ರಮ ವಹಿಸದಿರುವ ಜಿಲ್ಲಾಡಳಿತ , ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕರ ನಿರ್ಲಕ್ಷ್ಯ ಕ್ರಮವನ್ನು ಚೊಟ್ಟನಹಳ್ಳಿ ಪ್ರಾಥಮಿಕ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಬಸವರಾಜು ಖಂಡಿಸಿದ್ದಾರೆ.
ಅನೆ ದಾಳಿ ನಡೆದಾಗಲೆಲ್ಲ ಸ್ಥಳಕ್ಕೆ ಬರುವ ಅಧಿಕಾರಿಗಳು ಅಲ್ಪಸ್ವಲ್ಪ ಪರಿಹಾರ ನೀಡಿ ಕೈ ತೊಳೆದು ಕೊಳ್ಳುತ್ತಿದ್ದು ಇಷ್ಟೆಲ್ಲಾ ಅನಾಹುತ ಸಂಭವಿಸುತ್ತಿದ್ದರೂ ಆನೆಗಳ ದಾಳಿ ತಡೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳುದೆ ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರವನ್ನು ಕೊಡಿಸದೆ ಕೇವಲ ಭಾಷಣದಲ್ಲಿ ಮಾತ್ರ ತಾನು ರೈತರ ಪರ ಎಂದು ಶಾಸಕರು ಬೊಗಳೆ ಬಿಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಬೆಳೆ ಕಳೆದು ಕೊಂಡ ರೈತರು ಸಾಲಕ್ಕೆ ಹೆದರಿ ಹತಾಶರಾಗಿ ಆತ್ಮಹತ್ಯೆ ದಾರಿ ಹಿಡಿಯುವ ಮೊದಲೇ ಶಾಸಕರು ಹಾಗೂ ಜಿಲ್ಲಾಡಳಿತ ರೈತರ ನೆರವಿಗೆ ದಾವಿಸ ಬೇಕೆಂದು ಬಸವರಾಜು ಆಗ್ರಹಿಸಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ