ಮಳವಳ್ಳಿ : ಬ್ರಾಹ್ಮಣಶಾಹಿ ಮನುವಾದಿಗಳ ದೌರ್ಜನ್ಯಗಳನ್ನು ವಿರೋಧಿಸಿ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಹೇಳಿಕೆಯನ್ನು ಬೆಂಬಲಿಸಿ ಮಳವಳ್ಳಿ ಪಟ್ಟಣದಲ್ಲಿ ಇಂದು ಡಾ ಬಿ ಆರ್ ಅಂಬೇಡ್ಕರ್ ವಿಚಾರ ವೇದಿಕೆ ಆಶ್ರಯದಲ್ಲಿ ಹಲವು ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನಾ ಧರಣಿ ನಡೆಸಿದರು.
ಇಲ್ಲಿನ ಪೇಟೆ ವೃತ್ತದ ಬಳಿಯ ಅಂಚೆ ಕಚೇರಿ ಮುಂಭಾಗ ಹಾಕಲಾಗಿದ್ದ ವೇದಿಕೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಜೊತೆಗೆ ಬುದ್ದ ನಮನ ಸಲ್ಲಿಸುವುದರೊಂದಿಗೆ ಪ್ರತಿಭಟನೆಗೆ ಚಾಲನೆ ನೀಡಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ಎಂ ಆರ್ ಮಹೇಶ್ ಅವರು ಕೇವಲ ಪ್ರಚಾರಕ್ಕಾಗಿ ದಲಿತರ ಮನೆಗಳು ಕೇರಿಗಳಿಗೆ ಭೇಟಿ ನೀಡುವ ಬದಲಾಗಿ ಆಹಾರ ಪದ್ದತಿ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ದಲಿತರೊಂದಿಗೆ ಬೆರೆತಾಗ ಮಾತ್ರ ಜಾತೀಯತೆ ತೊಲಗಲು ಸಾಧ್ಯ ಎಂಬ ಹಂಸಲೇಖ ಅವರ ನೈಜ ಹೇಳಿಕೆಯನ್ನು ದೇಶದ್ರೋಹ ಧರ್ಮ ದ್ರೋಹದ ಹೇಳಿಕೆ ಎಂದು ಬಿಂಬಿಸಿ ಅವರ ವಿರುದ್ಧ ಹೋರಾಟ ಮಾಡಿರುವ ಪುರೋಹಿತ ಶಾಹಿ ಮನುವಾದಿಗಳ ವರ್ತನೆ ಅವರ ದಬ್ಬಾಳಿಕೆ ದೌರ್ಜನ್ಯ ಪ್ರವೃತ್ತಿಗೆ ಸಾಕ್ಷಿಯಾಗಿದೆ ಎಂದು ಕಿಡಿ ಕಾರಿದರು.
ಒಂದು ಹೇಳಿಕೆಗೆ ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುವುದಾದರೆ ಇಷ್ಟು ವರ್ಷ ಜಾತಿ ಮೌಡ್ಯದ ಹೆಸರಿನಲ್ಲಿ ಬಹುಸಂಖ್ಯಾತ ದಲಿತ ಸಮಾಜದ ವಿರುದ್ಧ ಶೋಷಣೆ ನಡೆಸಿಕೊಂಡು ಬಂದಿರುವ, ದೇಶದ ಸಂವಿಧಾನದ ವಿರುದ್ಧ ಮಾತನಾಡುತ್ತಿರುವ ಮನುವಾದಿಗಳ ವಿರುದ್ಧ ಯಾವ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಶ್ನಿಸಿದರು.
ಮಾಜಿ ಜಿ ಪಂ ಸದಸ್ಯರಾದ ಹನುಮಂತು ಮಾತನಾಡಿ ಶೇ ೩ ರಷ್ಟಿರುವ ಮನುವಾದಿಗಳು ಬಹುಸಂಖ್ಯಾತ ಶೂದ್ರ ಶೋಷಿತ ವರ್ಗಗಳ ವಿರುದ್ಧ ದಬ್ಬಾಳಿಕೆ ದೌರ್ಜನ್ಯ ಮುಂದುವರಿಸಿದ್ದು ಇದರ ವಿರುದ್ಧ ಎಲ್ಲಾ ಬಹುಸಂಖ್ಯಾತ ಸಮುದಾಯ ಒಂದಾಗಿ ದ್ವನಿ ಎತ್ತಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯ ಸಿದ್ದರಾಜು, ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಕಮಲ್ ಷರೀಫ್, ಪ್ರಾಂತ ರೈತ ಸಂಘದ ಅಧ್ಯಕ್ಷ ಭರತ್ ರಾಜ್, ಜನವಾದಿ ಮಹಿಳಾ ಸಂಘಟನೆಯ ದೇವಿ ಸಿಪಿಐ ಎಂ ಪಕ್ಷದ ಜಿ ರಾಮಕೃಷ್ಣ. ನೀವೃತ್ತ ಪ್ರಾಂಶುಪಾಲರಾದ ಕೃಷ್ಣ, ಪ್ರೊ ರಂಗಸ್ವಾಮಿ ಮುಖಂಡರಾದ ಮಂಚಯ್ಯ, ಕೃಷ್ಣಮೂರ್ತಿ, ಪವನ್ , ಲಿಂಗದೇವರು, ಮತ್ತಿತರರು ಹಾಜರಿದ್ದರು
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ