December 19, 2024

Bhavana Tv

Its Your Channel

ಸಾಗುವಳಿ ಮಾಡುತ್ತಿರುವ ಬಡ ರೈತರನ್ನು ಗಿಡ ಬೆಳೆಸುವ ನೆಪದಲ್ಲಿ ಒಕ್ಕಲೆಬ್ಬಿಸಲು ಮುಂದಾದ ಅರಣ್ಯಾಧಿಕಾರಿಗಳನ್ನು ಹಿಮ್ಮೆಟ್ಟಿಸಿದ ರೈತರು

ಮಳವಳ್ಳಿ : ಅರಣ್ಯ ಪ್ರದೇಶಕ್ಕೆ ಸೇರಿದ ಜಮೀನಿನಲ್ಲಿ 40-50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಡ ರೈತರನ್ನು ಗಿಡ ಬೆಳೆಸುವ ನೆಪದಲ್ಲಿ ಒಕ್ಕಲೆಬ್ಬಿಸಲು ಮುಂದಾದ ಅರಣ್ಯಾಧಿಕಾರಿ ಗಳನ್ನು ರೈತರು ಹಿಮ್ಮೆಟ್ಟಿಸಿದ ಪ್ರಸಂಗ ಮಳವಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮದ ಬಳಿಯ ಕೊಂಡದಮ್ಮನ ಪುರ ಅರಣ್ಯ ಪ್ರದೇಶದಲ್ಲಿ ಇಂದು ಜರುಗಿದೆ.
ಈ ಅರಣ್ಯ ಪ್ರದೇಶದಲ್ಲಿ ಹತ್ತಾರು ಮಂದಿ ರೈತರು ಕಳೆದ 40-50 ವರ್ಷಗಳಿಂದ ತಲಾ 2-3 ಎಕರೆ ಜಮೀನನ್ನು ಸಾಗುವಳಿ ಮಾಡಿಕೊಂಡು ತಮ್ಮ ಕುಟುಂಬದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಇಂದು ಏಕಾಏಕಿ ಇಟಾಚಿ ಯಂತ್ರದೊAದಿಗೆ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ಗಳು ಹಾಗೂ ಸಿಬ್ಬಂದಿ ರೈತರು ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಗುಂಡಿ ತೆಗೆದು ಅಲ್ಲಿ ಗಿಡಗಳನ್ನು ನೆಡಲು ಮುಂದಾದರೆನ್ನಲಾಗಿದೆ.
ಇದನ್ನು ರೈತರು ಪ್ರಶ್ನಿಸುತ್ತಿದ್ದಂತೆ ಇದು ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿದ್ದು ಇಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ ನೀವು ಈ ಪ್ರದೇಶವನ್ನು ಖಾಲಿ ಮಾಡಿ ಎಂದು ಧಮಕಿ ಹಾಕತೊಡಗಿದರೆನ್ನಲಾಗಿದೆ.
ವಿಷಯ ತಿಳಿದು ಇನ್ನಿತರ ರೈತರೊಡನೆ ಸ್ಥಳಕ್ಕೆ ಆಗಮಿಸಿದ ಪ್ರಾಂತ ರೈತ ಸಂಘದ ಭರತ್ ರಾಜ್, ಲಿಂಗರಾಜಮೂರ್ತಿ ತಿಮ್ಮೇಗೌಡ ಮತ್ತಿತರರು ಅರಣ್ಯಾಧಿಕಾರಿಗಳ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳ ಕ್ರಮಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಂತೆ ಕೆಲಕಾಲ ರೈತ ಮುಖಂಡರು ಅಧಿಕಾರಿಗಳ ನಡುವೆ ವಾಗ್ವಾದ ನಡೆದು ಕೊನೆಗೆ ಅರಣ್ಯಾಧಿಕಾರಿಗಳು ತಮ್ಮ ಕೆಲಸ ಕೈಬಿಟ್ಟು ವಾಪಸ್ಸಾದರು ಎಂದು ವರದಿಯಾಗಿದೆ.
ನಂತರ ಸಾಗುವಳಿದಾರ ರೈತರೊಡನೆ ತಾಲ್ಲೂಕು ಕಚೇರಿಗೆ ಆಗಮಿಸಿದ ಪ್ರಾಂತ ರೈತ ಸಂಘದ ಮುಖಂಡರು ಅರಣ್ಯಾಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭರತ್ ರಾಜ್ ಅರಣ್ಯ ಪ್ರದೇಶದಲ್ಲಿ ಗಿಡ ಬೆಳೆಸುವ ನೆಪಮಾತ್ರದ ಯೋಜನೆ ಹೆಸರಲ್ಲಿ ಭಾರಿ ಭ್ರಷ್ಟಾಚಾರ ನಡೆಸುತ್ತಿರುವ ಇದರ ಜೊತೆಗೆ ಗಿಡ ನೆಡುವ ನೆಪದಲ್ಲಿ ಕಳೆದ 50 ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಬಡ ರೈತರನ್ನು ತಮ್ಮ ದಬ್ಬಾಳಿಕೆ ದೌರ್ಜನ್ಯದ ಮೂಲಕ ಒಕ್ಕಲೆಬ್ಬಿಸುವ ದುಸ್ಸಾಹಸಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಇದೇ ಅರಣ್ಯ ಪ್ರದೇಶದಲ್ಲಿ ಪ್ರಭಾವಿ ರಾಜಕಾರಣಿಗಳು, ಬಂಡವಾಳ ಶಾಹಿಗಳು ಒಬ್ಬೊಬ್ಬರು ನೂರಾರು ಎಕರೆ ಜಮೀನನ್ನು ಆಕ್ರಮಿಸಿಕೊಂಡಿದ್ದು ಅವರ ತಂಟೆಗೆ ಹೋಗದ ಇಲ್ಲಿನ ವಲಯ ಅರಣ್ಯಾಧಿಕಾರಿಗಳು ನ ಕೇವಲ ಒಂದು ಎರಡು ಎಕರೆ ಜಮೀನಿನ ಸಾಗುವಳಿ ಮಾಡಿಕೊಂಡು ತಮ್ಮ ಬಡ ಕುಟುಂಬದ ಹೊಟ್ಟೆ ಹೊರೆಯುತ್ತಿರುವ ರೈತರ ಮೇಲೆ ಪದೇ ಪದೇ ದಬ್ಬಾಳಿಕೆ ತೋರುತ್ತಿದ್ದು ಮತ್ತೊಮ್ಮೆ ಇಂತಹ ಪ್ರಯತ್ನಕ್ಕೆ ಮುಂದಾದರೆ ಉಗ್ರ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಲಿಂಗರಾಜಮೂರ್ತಿ, ಗುರುಸ್ವಾಮಿ, ಹೆಚ್ ತಿಮ್ಮೇಗೌಡ, ಸುರೇಶ್, ನಾಗಬಸವಣ್ಣ, ವೆಂಕಟೇಶ್, ಶಿವಶಂಕರ್, ಲೋಕೇಶ್ ಮತ್ತಿತರರು ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: