
ಮೈಸೂರು:- ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಗಳಿಸಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಪ್ರವಾಸೋದ್ಯಮದ ಕಳೆ ಶುರುವಾಗಿದೆ. ಇಂದಿನಿಂದ ಲಾಕ್‌ಡೌನ್ ಸಡಿಲಿಕೆ ಆಗಿರುವ ಹಿನ್ನಲೆಯಲ್ಲಿ, ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕೇಂದ್ರಗಳ ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿವೆ. ಕಳೆದ ಎರಡು ತಿಂಗಳಿನಿಂದ ಕುಗ್ಗಿಹೋಗಿದ್ದ ಪ್ರವಾಸೋದ್ಯಮಕ್ಕೆ ಇಂದಿನಿಂದ ಚೇತರಿಕೆ ಕಾಣುವ ಅವಕಾಶ ಸಿಕ್ಕಿದ್ದು, ಮೈಸೂರು ಮತ್ತೆ ಪ್ರವಾಸಿಗರೇ ಬನ್ನಿ ಎಂದು ಕೈ ಬೀಸಿ ಕರೆದಿದೆ.
ಮೈಸೂರಿನ ಪ್ರವಾಸಿ ತಾಣಗಳೆಲ್ಲಾ ಇಂದಿನಿಂದ ಪುನರಾರಂಭವಾಗುತ್ತಿವೆ. ಮೊದಲಿಗೆ ನಾಡದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿರುವ ಜಿಲ್ಲಾಡಳಿತ ಭಕ್ತರ ದರ್ಶನಕ್ಕೆ ಚಾಮುಂಡೇಶ್ವರಿ ದೇವಾಲಯ ಬಾಗಿಲು ತೆರೆದಿತ್ತು. ಮೈಸೂರು ಉಸ್ತುವಾರಿ ಸಚಿವರೇ ಚಾಮುಂಡಿ ದೇವಿಗೆ ಮೊದಲ ಪೂಜೆ ಸಲ್ಲಿಸಿದರು. ನಂತರ ಬೆ.7.30ರಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ, ಶಾಸಕ ಜಿ.ಟಿ.ದೇವೇಗೌಡ ಕುಟುಂಬ, ಶಾಸಕ ರಾಮದಾಸ್. ಎಲ್.ನಾಗೇಂದ್ರ ಹಾಜರಿದ್ದರು. ಜಿಲ್ಲಾಡಳಿತದ ವತಿಯಿಂದಲೂ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್. ಜಿಲ್ಲಾಪಂಚಾಯಿತಿ ಸಿಇಓ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ನಂಜನಗೂಡಿನ ನಂಜುಡೇಶ್ವರ ದೇವಾಲಯಕ್ಕೂ ಸಚಿವರ ತಂಡ ಭೇಟಿ ನೀಡಿ ವಿಷಕಂಠನಿಗೂ ವಿಶೇಷ ಪೂಜೆ ಸಲ್ಲಿಸಿದರು. ಈ ತಿಂಗಳ ಕೊನೆ ವಾರದಿಂದ ಆಷಾಢ ಆರಂಭ ಹಿನ್ನೆಲೆಯಲ್ಲಿ, ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ವಿಶೇಷ ಪೂಜೆ ಆಯೋಜಿಸಬೇಕೋ ಬೇಡವೋ ಇನ್ನು ನಿರ್ಧಾರವಾಗಿಲ್ಲ. ಈ ಬಾರಿ ವಿಶೇಷ ಪೂಜೆಗೆ ಅವಕಾಶದ ಬಗ್ಗೆ ಜಿಲ್ಲಾಡಳಿತ ಚರ್ಚೆ ಮಾಡಿ ನಿರ್ಧಾರ ಮಾಡಲಿದೆ. ಲಕ್ಷಾಂತರ ಜನ ಭಕ್ತರು ಬರುವಾಗ ಆಷಾಢ ಮಾಸದ ಪೂಜೆ ಬಗ್ಗೆ ಚರ್ಚೆ ಆಗಬೇಕು. ಈ ಬಗ್ಗೆ ಜಿಲ್ಲಾಡಳಿತ ಅಂತಿಮ ನಿರ್ಧಾರ ಮಾಡಲಿದೆ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಇತ್ತ ಪ್ರವಾಸಿಗರ ವೀಕ್ಷಣೆಗೆ ಮೈಸೂರು ಅರಮನೆ ಸಹ ಬಾಗಿಲು ತೆರೆಯಿತು. ಇಂದು ಬೆಳಗ್ಗೆಯಿಂದ ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ, ಅರಮನೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷದ ವೃದ್ದರಿಗೆ ಅರಮನೆ ಪ್ರವೇಶ ನಿರಾಕರಿಸಲಾಗಿದೆ. ಗಂಟೆಗೆ 350 ಮಂದಿಗೆ ಅರಮನೆ ವೀಕ್ಷಿಸಲು ಅವಕಾಶ ನೀಡಲಾಗುತ್ತಿದೆ. ಪ್ರವಾಸಿಗರು ಅವರೇ ನೀರಿನ ಬಾಟೆಲ್ ತರಬೇಕು. 6 ಅಡಿ ಅಂತರದಲ್ಲಿ ಅರಮನೆ ನೋಡಬೇಕು ಅಂತ ಅರಮನೆ ಮಂಡಳಿ ಮನವಿ ಮಾಡಿಕೊಂಡಿದೆ.
ಇನ್ನು, ಮೈಸೂರು ಮೃಗಾಲಯವು ಸಹ ಇಂದಿನಿಂದ ವಿಕ್ಷಕರ ವಿಕ್ಷಣೆಗೆ ಲಭ್ಯವಾಗಿದೆ. ಮಾರ್ಗಸೂಚಿ ಪಾಲನೆ ಮಾಡಿ ಮೃಗಾಲಯ ಪುನರಾರಂವಾಗಿದ್ದು, ಮೃಗಾಲಯ ಒಳಭಾಗದಲ್ಲಿ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗಿದೆ. ಜೂನ ಪ್ರತಿ ಕೀ ಪಾಯಿಂಟ್‌ನಲ್ಲಿ ಸ್ಯಾನಿಟೈಸ್ ಕಡ್ಡಾಯ ಮಾಡಿದ್ದು, ಪ್ರವಾಸಿಗರ ಮಧ್ಯೆ 6 ಅಡಿ ಅಂತರ ಇರಬೇಕು, ಗಂಟೆಗೆ ಒಂದು ಸಾವಿರ ಜನರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಒಂದು ಸಾವಿರ ಜನರಿಗಿಂತ ಹೆಚ್ಚಿದ್ದರೆ ಒಂದು ಗಂಟೆ ಆದ ನಂತರ ಮೃಗಾಲಯಕ್ಕೆ ಪ್ರವೇಶ ಮಾಡಬೇಕು. ಮೃಗಾಲಯದ ಒಳ ಬರುವಾಗ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗುತ್ತದೆ. 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷದ ವೃದ್ದರಿಗೆ ಮೃಗಾಲಯಕ್ಕೆ ಪ್ರವೇಶ ಇಲ್ಲ. ನಿತ್ಯ 8 ಗಂಟೆ ವೀಕ್ಷಣೆಗೆ ಲಭ್ಯವಿರುವ ಮೃಗಾಲಯಕ್ಕೆ 8 ಸಾವಿರ ಮಂದಿ ಒಂದು ದಿನದಲ್ಲಿ ಮೃಗಾಲಯ ವೀಕ್ಷಿಸಬಹುದಾಗಿದೆ.
ಈ ಜೊತೆಗೆ ಮೈಸೂರಿನ ಪ್ರಸಿದ್ಧ ಸೆಂಟ್ ಫಿಲೋಮಿನಾ ಚರ್ಚ್ ಸಹ ವೀಕ್ಷಣೆ ಹಾಗೂ ಪ್ರಾರ್ಥನೆಗೆ ಅವಕಾಶ ನೀಡಿದೆ. ಇಂದಿನಿಂದ ಚರ್ಚ್ ಒಳಗೆ ಪ್ರವೇಶ ನೀಡಿದ್ದು ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಆದ ಬಳಿಕ ಚರ್ಚ್‌ಗೆ ಆಗಮಿಸಬಹುದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಸಿಸ್ಟಮ್ ಮಾಡಿದ್ದು, ಸಾಮೂಹಿಕ ಪ್ರಾರ್ಥನೆಗೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. 15 ವಾಲೆಂಟಿಯರ್ಸ್, 10 ಸೆಕ್ಯೂರಿಟಿ ಗಾರ್ಡ್ಗಳ ಬಳಕೆ ಮಾಡಿ ಜನರಲ್ಲಿ ಅಂತರ ಕಾಯ್ದಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಪ್ರಾರ್ಥನೆ ಮಾಡಲು ಕೇವಲ ಒಂದು ನಿಮಿಷದೊಳಗೆ ಮಾತ್ರ ಅವಕಾಶ ನೀಡಲಾಗಿದೆ. ಚರ್ಚ್‌ನ ಮೂರು ಕಡೆ ಬಲಿಪೂಜೆ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಇಡೀ ಮೈಸೂರು ಇಂದಿನಿಂದ ರೀ ಓಪನ್ ಆಗುತ್ತಿದ್ದು ಪ್ರವಾಸಿಗರೇ ಬನ್ನಿ ಎಂದು ಕೈ ಬೀಸಿ ಕರೆದಿದೆ.
source : News 18 kannada
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ