May 6, 2024

Bhavana Tv

Its Your Channel

ಕಾರಿನಲ್ಲಿ ಪತ್ತೆಯಾಯ್ತು ಕಂತೆ ಕಂತೆ ನೋಟಿನ ರಾಶಿ !

ಕೋಲಾರ : ಕೊರೊನಾ ಲಾಕ್ ಡೌನ್‌ನಿಂದಾಗಿ ಜನರು ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ತತ್ತರಿಸಿದ್ದಾರೆ. ಆದರೆ ಕೋಲಾರದಲ್ಲಿ ಕಾರಿನಲ್ಲಿ ಕಂತೆ ಕಂತೆ ನೋಟಿನ ರಾಶಿ ಸಿಕ್ಕಿದೆ.
ದಾಖಲೆಗಳಿಲ್ಲದೆ ಹಣ ಸಾಗಿಸುತ್ತಿದ್ದ ಕಾರನ್ನು ಶ್ರೀನಿವಾಸಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಜರನಹಳ್ಳಿ ಬಳಿ ಕಾರನ್ನು ಜಪ್ತಿ ಮಾಡಲಾಗಿದೆ. ಆಂಧ್ರ ಪ್ರದೇಶಕ್ಕೆ ಹೋಗುತ್ತಿದ್ದ ಕಾರಿನಲ್ಲಿ 2.94 ಕೋಟಿ ಹಣವನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಕೋಲಾರ ಮೂಲದ ಚಂದ್ರಶೇಖರ್ ಹಾಗೂ ಅಮರನಾಥ್ ಎಂಬುವವರು ಕಾರಿನಲ್ಲಿ ಹಣದೊಂದಿಗೆ ಆಂಧ್ರಕ್ಕೆ ತೆರಳುತ್ತಿದ್ದರು, ಈ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರನ್ನು ಬೆನ್ನತ್ತಿ ಹಿಡಿದಿದ್ದಾರೆ. ಕಾರಿನಲ್ಲಿ ಇಷ್ಟೊಂದು ಮೊತ್ತದ ಹಣವನ್ನು ನೋಡಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ಜಪ್ತಿ ಮಾಡಿರುವ ಹಣದಲ್ಲಿ 2 ಸಾವಿರ ನೋಟುಗಳೇ ಹೆಚ್ಚಿವೆ. ಈ ನೋಟುಗಳನ್ನು 500 ಮುಖ ಬೆಲೆ ನೋಟಿಗೆ ಬದಲಾಯಿಸಿಕೊಳ್ಳಲು ಆಂಧ್ರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಇನ್ನು ಕಾರಿನಲ್ಲಿ ಮೂವರು ತೆರಳುತ್ತಿದ್ದರು, ಪೊಲೀಸರು ಬೆನ್ನತ್ತಿದಾಗ ಓರ್ವ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೋಲಾರ ಎಸ್.ಪಿ ಕಾರ್ತಿಕ್ ರೆಡ್ಡಿ ಪೊಲೀಸ್ ಠಾಣೆಗೆ ತೆರಳಿ ತನಿಖೆ ನಡೆಸಿದ್ದಾರೆ. ಎಸ್ಕೇಪ್ ಆಗಿರುವ ಆರೋಪಿಯ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ

error: