May 4, 2024

Bhavana Tv

Its Your Channel

ಬೈಲೂರು ಪರಶುರಾಮ ಥೀಮ್ ಪಾರ್ಕ್ ಕಾರ್ಯಕ್ರಮದ ಕಾರ್ಯಾಲಯದ ಉದ್ಘಾಟನೆ

ಪ್ರವಾಸೋದ್ಯಮ ಅಭಿವೃದ್ಧಿಯಿಂದ ಆರ್ಥಿಕತೆಗೆ ಚೈತನ್ಯ: ವಿನಯ್ ಹೆಗ್ಡೆ

ಕಾರ್ಕಳ: ತುಳುನಾಡಿನ ಸೃಷ್ಟಿಕರ್ತನನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಸಚಿವ ಸುನಿಲ್ ಕುಮಾರ್ ಅವರ ಅದ್ಬುತ ಪರಿಕಲ್ಪನೆಯಾದ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮವು ಕೇವಲ ತುಳುನಾಡಿನ ಸಂಸ್ಕೃತಿಯ ಅನಾವರಣವಲ್ಲ ಜತೆಗೆ ಕಾರ್ಕಳವು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ ಕೇಂದ್ರವಾಗುವುದರ ಜತೆಗೆ ಆರ್ಥಿಕತೆಗೆ ಚೈತನ್ಯ ನೀಡಲಿದೆ ಎಂದು ನಿಟ್ಟೆ ವಿ.ವಿ ಕುಲಪತಿ ವಿನಯ ಹೆಗ್ಡೆ ಹೇಳಿದರು
ಅವರು ಬೈಲೂರು ಪರಶುರಾಮ ಥೀಮ್ ಪಾರ್ಕ್ ನ ಲೋಕಾರ್ಪಣೆ ಪ್ರಯುಕ್ತ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಸುನಿಲ್ ಕುಮಾರ್ ಕಾರ್ಕಳಕ್ಕೆ ಬಂದ ಬಳಿಕ ಅಭಿವೃದ್ಧಿ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ, ಜತೆಗೆ ಕಾರ್ಕಳವು ಪ್ರವಾಸೋದ್ಯಮದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದರು.
ಇAಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಕಳವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿಸುವ ಜತೆಗೆ ತುಳುನಾಡಿನ ಸೃಷ್ಟಿಕರ್ತ ಪರಶುರಾಮ ತುಳುನಾಡಿಗೆ ಹೆಮ್ಮೆಯ ಪ್ರತೀಕ, ಆದ್ದರಿಂದ ಪರಶುರಾಮನ ಐತಿಹ್ಯವನ್ನು ರಾಜ್ಯದ ಉದ್ದಗಲಕ್ಕೂ ಪಸರಿಸುವ ನಿಟ್ಟಿನಲ್ಲಿ ಪರಶುರಾಮನ ಪ್ರತಿಮೆಯನ್ನು ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಟಾಪನೆ ಮಾಡಲಾಗುತ್ತಿದೆ. ಸುಮಾರು 33 ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆ ಪ್ರತಿಷ್ಟಾಪಿಸಲಾಗುತ್ತಿದ್ದು, 100 ಆಸನಗಳ ಸಾಮರ್ಥ್ಯವುಳ್ಳ ಫಿಲ್ಮ್ ಥಿಯೇಟರ್ ಒಳಗೊಂಡಿದೆ. ಧಾರ್ಮಿಕತೆ ಹಾಗೂ ಪ್ರವಾಸೋದ್ಯಮ ಜತೆಜತೆಗೆ ಬೆಳೆಯಬೇಕೆನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ನೂರಾರು ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಕಾರ್ಕಳ ಉತ್ಸವದ ರೀತಿಯಲ್ಲಿ ಬೈಲೂರು ಪೇಟೆಯ ಸುತ್ತಮುತ್ತಲಿನ ಪ್ರದೇಶವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು. ಜನವರಿ 23 ರಂದು ದೀಪಾಲಂಕಾದ ಉದ್ಘಾಟನೆ ನಡೆಯಲಿದೆ. ಜನವರಿ,27ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಶುರಾಮ ಉತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾರ್ಕಳ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರರಾದ ಜಯರಾಮ ಪ್ರಭು, ಪಳ್ಳಿ ಅಡಪಾಡಿಕೋಡಿ ಉಮಾಮಹೇಶ್ವರ ದೇವಳದ ಆಡಳಿತ ಮೊಕ್ತೇಸರ ಪುಂಡಲೀಕ ನಾಯಕ್, ಬೈಲೂರು ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಕರುಣಾಕರ ಹೆಗ್ಡೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಕೋಟ್ಯಾನ್, ಕಿಶನ್ ಹೆಗ್ಡೆ, ಡಾ. ದಿನೇಶ್ ಕುಮಾರ್ ಹೆಗ್ಡೆ, ಹಿರಿಯ ವಕೀಲ ಎಂ.ಕೆ ವಿಜಯಕುಮಾರ್, ಬೋಳ ಪ್ರಭಾಕರ ಕಾಮತ್, ಡಿವೈಎಸ್ಪಿ ವಿಜಯಪ್ರಸಾದ್, ಯರ್ಲಪಾಡಿ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ಪೂಜಾರಿ, ಬೈಲೂರು ಪಂಚಾಯತ್ ಅಧ್ಯಕ್ಷ ಜಗದೀಶ್ ಪೂಜಾರಿ, ನೀರೆ ಪಂಚಾಯತ್ ಅಧ್ಯಕ್ಷೆ ಶಾಲಿನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಉಪನಿರ್ದೇಶಕಿ ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು.

ಶ್ರೀವರ್ಮ ಆಜ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಕಳ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿ, ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

error: