May 8, 2024

Bhavana Tv

Its Your Channel

ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಡಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ತಮ್ಮಣ್ಣ ಬೀಗಾರವರಿಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನಿಂದ ಸನ್ಮಾನ

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಾಪುರ ಘಟಕದ ಆಶ್ರಯದಲ್ಲಿ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಡಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ತಮ್ಮಣ್ಣ ಬೀಗಾರವರ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ, ಓರ್ವ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಇಡೀ ರಾಷ್ಟ್ರಕ್ಕೆ ಮಾದರಿಯಾದ ಸಾಹಿತ್ಯ ಕೃತಿಯನ್ನು ರಚಿಸುವುದರ ಮೂಲಕ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವುದು ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಸಂದ ಗೌರವವಾಗಿದೆ ಎಂದರು. ಬಾವಲಿ ಗುಹೆ ಕಾದಂಬರಿಯು ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರ ನೋಡುತ್ತಾ ಅಲ್ಲಿ ಆಗುವ ತೊಂದರೆಗಳಿಗೆ ಸ್ಪಂದಿಸಿ, ದೊಡ್ಡವರೊಂದಿಗೆ ಕೈಜೋಡಿಸಿ ಹೋರಾಟಕ್ಕಿಳಿಯುತ್ತಾರೆ. ಇದು ನಿಜವಾಗಿಯೂ ಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸುವಲ್ಲಿ ಹಿಡಿದ ಕೈಗನ್ನಡಿಯಾಗಿದೆ. ಗಣಿಗಾರಿಕೆ ಸುತ್ತ ಹೆಣೆದಿರುವ ಕಾದಂಬರಿ ಮಕ್ಕಳು ತಾವೇ ಕಥೆಯ ಪಾತ್ರಗಳಾಗಿ ಅನುಭವಿಸಿ, ತಮ್ಮ ಪರಿಸರದಿಂದಾಗುವ ತೊಂದರೆಗಳಿಗೆ ಹೋರಾಟದ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕಿಳಿಯುವ ನಿರೂಪಣಾ ಶೈಲಿ ಅದ್ಭುತವಾಗಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಮುಗ್ಧ ಮಕ್ಕಳ ಮನಸ್ಸಿಗೆ ಧಕ್ಕೆಯಾಗದ ರೀತಿಯಲ್ಲಿ ಸಾಹಿತ್ಯ ಕೃತಿ ರಚಿಸುವ ಸಾಹಿತಿಗಳಲ್ಲಿ ತಮ್ಮಣ್ಣ ಬೀಗಾರವರು ಮೊದಲನೇ ಸಾಲಿನಲ್ಲಿ ನಿಲ್ಲುತ್ತಾರೆ. ನಾನು ಸಾಹಿತ್ಯ ಕೃತಿ ರಚಿಸುವಲ್ಲಿ ಬೀಗಾರವರ ಕೃತಿ ನನಗೆ ಪ್ರೇರಣೆ ನೀಡಿದೆ ಎಂದರು.

ಸಿದ್ದಾಪುರ ತಾಲೂಕಾ ಘಟಕದ ಅಧ್ಯಕ್ಷ ಗೋಪಾಲ ನಾಯ್ಕ ಬಾಶಿ ಮಾತನಾಡಿ, ಮಕ್ಕಳ ಮನಸ್ಸಿನಾಳಕ್ಕಿಳಿದು ಕೃತಿ ರಚಿಸುವಲ್ಲಿ ತಮ್ಮಣ್ಣ ಬೀಗಾರವರು ಸಿದ್ದ ಹಸ್ತರು. ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳ ಧ್ವನಿಗೆ, ಧ್ವನಿಯಾಗಿ ಅವರ ಸಾಹಿತ್ಯ ಕೃತಿ ರಚನೆಗೊಂಡಿದೆ. ಸಾಹಿತ್ಯ ಪರಿಷತ್ತು ಅವರನ್ನು ಸನ್ಮಾನಿಸುವುದರ ಮೂಲಕ ಪರಿಷತ್ತಿನ ಗೌರವವನ್ನು ಹೆಚ್ಚಿಸಿಕೊಂಡಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಮಾತನಾಡಿ, ಮಕ್ಕಳ ಕುರಿತಾಗಿ ಸಾಹಿತ್ಯ ರಚಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಬೀಗಾರವರಿಗೆ ಅದು ಸಿದ್ದಿಸಿದೆ. ಶಿಕ್ಷಣ ಇಲಾಖೆಯ ಆಸ್ತಿಯಂತಿದ್ದ ಬೀಗಾರವರು ತಮ್ಮ ಸೇವಾವಧಿಯಲ್ಲಿ ಸಲ್ಲಿಸಿದ ಸೇವೆ ಅವಿಸ್ಮರಣೆಯವಾದದ್ದು ಎಂದರು.

ಹಿರಿಯ ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಮಾತನಾಡಿ, ಬರವಣಿಗೆಯಲ್ಲಿ ಏಕಾಗ್ರತೆ ಸಾಧಿಸುವುದರ ಮೂಲಕ ಮಕ್ಕಳ ಸಾಹಿತ್ಯದಲ್ಲಿ ಗಟ್ಟಿಯಾದ ಸಾಹಿತ್ಯ ರಚಿಸಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಸಿದ್ದಾಪುರಕ್ಕೆ ಹೆಮ್ಮೆಯ ಸಂಗತಿ ಎಂದರು.

ಸನ್ಮಾನ ಸ್ವೀಕರಿಸಿದ ತಮ್ಮಣ್ಣ ಬೀಗಾರವರು ಮಾತನಾಡಿ, ಎಲ್ಲರಲ್ಲಿಯೂ ಆಗಾಧವಾದ ಪ್ರತಿಭೆಯಿದೆ.ನಾವು ಮಾಡುವ ಕೆಲಸದಲ್ಲಿ ಪ್ರೀತಿ ಇದ್ದರೆ ಎಲ್ಲವನ್ನು ಗೆಲ್ಲಲು ಸಾಧ್ಯ. ನಿರಂತರ ಓದು, ಬರವಣಿಗೆ ಮತ್ತು ನಾನು ಕಂಡುAಡ ಅನುಭವವೇ ಸಾಹಿತ್ಯ ರಚನೆಯಲ್ಲಿ ಸಹಕಾರಿಯಾಯಿತು ಎಂದರು. ನಾನು ರಚಿಸಿದ ಕಥೆ,ಕವನವನ್ನು ಮಕ್ಕಳಿಗೆ ಹೇಳಿ ಅವರು ಖುಷಿ ಪಟ್ಟ ನಂತರ ಪ್ರಕಟಿಸುವ ಜವಾಬ್ದಾರಿ ಹೊರುತ್ತಿದ್ದೆ. ಮಕ್ಕಳ ಮನಸ್ಸನ್ನು ಗೆಲ್ಲುವುದರ ಮೂಲಕ ಸಾಹಿತ್ಯದ ಓಲವು ನನ್ನನ್ನು ಆವರಿಸಿತು ಎಂದರು.

ಪ್ರೌಢಶಾಲಾ ಮುಖ್ಯಾಧ್ಯಾಪಕ ಜಿ.ಆಯ್.ನಾಯ್ಕ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಗೌಡರ, ಪತ್ರಕರ್ತ ನಾಗರಾಜ ನಾಯ್ಕ ಮಾಳ್ಕೊಡ, ನಿವೃತ್ತ ಪ್ರಾಚಾರ್ಯ ಸುರೇಂದ್ರ ದಪೇದಾರ, ಶಿವಾನಂದ ಹೊನ್ನೆಗುಂಡಿ, ಕೋಶಾಧ್ಯಕ್ಷ ಪಿ.ಬಿ.ಹೊಸೂರ ಮುಂತಾದವರು ಬೀಗಾರವರ ಕುರಿತು ಮಾತನಾಡಿದರು. ಸಭೆಯಲ್ಲಿ ಸಸ್ಯ ವಿಜ್ಞಾನಿ ಎಂ.ಕೆ. ನಾಯ್ಕ ಕಡಗೇರಿ, ಪತ್ರಕರ್ತ ಸುರೇಶ ಮಡಿವಾಳ, ರಾಘವೇಂದ್ರ ನಾಯ್ಕ, ಸವಿತಾ ಶಾನಭಾಗ, ಸುಜಾತ ಶಾನಭಾಗ, ಪ್ರಶಾಂತ್ ಶೇಟ್, ಟಿಕೆಎಂ. ಆಜಾದ್, ಸ್ವರ್ಣಲತಾ ಶಾನಭಾಗ ಮುಂತಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಅಣ್ಣಪ್ಪ ಶಿರಳಗಿ ಸ್ವಾಗತಿಸಿದರು. ಕೊನೆಯಲ್ಲಿ ಪ್ರಶಾಂತ ಹೆಗಡೆ ವಂದಿಸಿದರು. ಪರಿಷತ್ತಿನ ಉಷಾ ನಾಯ್ಕ ಬೀಗಾರವರ ಕುರಿತು ಕವನ ವಾಚಿಸಿದರು. ಪರಿಷತ್ತಿನ ಪದಾಧಿಕಾರಿಗಳು ವಿವಿಧ ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

error: