April 25, 2024

Bhavana Tv

Its Your Channel

ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ

(ಪರಿಷತ್ತಿನ ಹಣಕಾಸಿನ ವ್ಯವಹಾರ ಪಾರದರ್ಶಕವಾಗಿರುತ್ತದೆ -ಬಿ.ಎನ್. ವಾಸರೆ)

ಜೋಯಿಡಾ: ಉಳಿವಿಯಲ್ಲಿ ನಡೆದಿದ್ದ ಉತ್ತರ ಕನ್ನಡ ಜಿಲ್ಲಾ 22 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಜಮಾ-ಖರ್ಚು (ಲೆಕ್ಕಪತ್ರ ) ಮಂಡಿಸುವ ಸಭೆ ಜೋಯಿಡಾದ ಕುಣಬಿ ಸಮಾಜ ಸಭಾಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ ಎನ್. ವಾಸರೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮ್ಮೇಳನಕ್ಕೆ ಕೇಂದ್ರ ಕಸಾಪದಿಂದ ಬಂದ ಹಣ ಮತ್ತು ಸ್ಥಳೀಯವಾಗಿ ಸಂಗ್ರಹಿಸಿದ ಹಣದ ಒಟ್ಟು ಜಮಾ ಹಾಗೂ ಸಮ್ಮೇಳನಕ್ಕೆ ಆದ ಒಟ್ಟೂ ಖರ್ಚುಗಳ ಬಿಲ್ ಹಾಗೂ ವೋಚರ ಸಹಿತವಾಗಿ ಸಭೆಯ ಮುಂದಿಟ್ಟ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ ರವರು ಸಮ್ಮೇಳನದ ಒಟ್ಟು ವ್ಯವಹಾರವನ್ನು ಅತ್ಯಂತ ಪಾರದರ್ಶಕವಾಗಿ ಇಡಲಾಗಿದೆ. ಸಮ್ಮೇಳನಕ್ಕೆ ದಾನಿಗಳು ಕೊಟ್ಟ ಹಣ ಹಾಗೂ ಆಗಿರುವ ಖರ್ಚನ್ನು ಮುಕ್ತವಾಗಿ ಮಂಡಿಸಲಾಗುತ್ತಿದೆ ಎಂದರು.

ಕೇAದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬಂದಿರುವ 5 ಲಕ್ಷ ರೂಪಾಯಿ ಹಾಗೂ ಸ್ಮರಣ ಸಂಚಿಕೆಗೆ ಬಂದ ಜಾಹೀರಾತು ಹಣ ಮತ್ತು ಸಮ್ಮೇಳನಕ್ಕೆ ನೀಡಿದ ದೇಣಿಗೆ ಹಣ ಸೇರಿ ಒಟ್ಟು 8,34,000 ರೂ. ಜಮಾ ಆಗಿದೆ. ಸಮ್ಮೇಳನದ ವೇದಿಕೆ, ಧ್ವನಿವರ್ಧಕ, ಆಮಂತ್ರಣ ಪತ್ರಿಕೆ, ಸಮ್ಮೇಳನದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಅತಿಥಿಗಳಿಗೆ ಹಾಗೂ ಗೋಷ್ಠಿಗಳಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ನೀಡಿದ ಗೌರವಧನ, ಪ್ರಯಾಣ ವೆಚ್ಚ, ಮೆರವಣಿಗೆಯ ಕಲಾತಂಡ ,ಸಾಂಸ್ಕೃತಿಕ ಕಾರ್ಯಕ್ರಮ, ಬ್ಯಾನರ್ ಹಾಗೂ ಕನ್ನಡದ ಬಾವುಟ, ಶಾಲುಗಳು ಸೇರಿದಂತೆ ಒಟ್ಟು 8,49,209 ರೂಪಾಯಿ ಖರ್ಚು ಬಂದಿರುತ್ತದೆ ಎಂದು ತಿಳಿಸಿದರು.

ಇದರ ಜೊತೆಗೆ ಉಳವಿ ದೇವಸ್ಥಾನ ಕಮಿಟಿಯವರು ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಹಾಗೂ ದಾಂಡೇಲಿಯ ಗೆಳೆಯರು ಸೇರಿ ಆಗಮಿಸಿರುವ ಗಣ್ಯರಿಗೆ ಹಾಗೂ ಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಬ್ಯಾಗ್ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಇವರಿಗೂ ಹಾಗೂ ದೇಣಿಗೆ ನೀಡಿದವರೆಗೂ ಅಭಿನಂದಿಸುವುದಾಗಿ ತಿಳಿಸಿದರು. ಎಲ್ಲಾ ಜಮಾ-ಖರ್ಚನ್ನು ಲೆಕ್ಕಪರಿಶೋಧಕರಿಂದ ಆಡಿಟ್ ಮಾಡಿಸಿದ ನಂತರದಲ್ಲಿ ಸಮಗ್ರ ಲೆಕ್ಕಪತ್ರವನ್ನು ಸದಸ್ಯರ ಮುಂದೆ ಮಂಡಿಸಲಾಗುವುದು. ಲೆಕ್ಕಪತ್ರದ ವಿಚಾರದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಬಹಳ ಕಟ್ಟುನಿಟ್ಟಾಗಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಉಳವಿಯಲ್ಲಿ ನಡೆದ ಜಿಲ್ಲಾ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಈ ಯಶಸ್ವಿ ಸಮ್ಮೇಳನದ ಹಿಂದೆ ದುಡಿದ ಹಾಗೂ ಸಹಕರಿಸಿದ ಜೋಯಿಡಾ ತಾಲೂಕು ಕಸಾಪದ ಎಲ್ಲ ಪದಾಧಿಕಾರಿಗಳನ್ನು, ಆಜೀವ ಸದಸ್ಯರನ್ನು, ಹಾಗೂ ತಾಲೂಕಿನ ಎಲ್ಲಾ ಸಂಘ-ಸoಸ್ಥೆಯವರನ್ನು, ಉಳವಿ ಗ್ರಾಮ ಪಂಚಾಯತ ಮತ್ತು ಉಳವಿ ದೇವಸ್ಥಾನ ಕಮಿಟಿಯವರನ್ನು, ಶಿಕ್ಷಕರ ಬಳಗ ಹಾಗೂ ಮಹಿಳಾ ಸಂಘಗಳನ್ನ ತಾಲೂಕಿನ ಎಲ್ಲಾ ಆಡಳಿತ ವರ್ಗದವರನ್ನು ಅಭಿನಂದಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಹಾಗೂ ತನ್ನ ಒಟ್ಟಾರೆ ಲೆಕ್ಕ ಪತ್ರವನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಶಿಸ್ತು ಬದ್ಧವಾಗಿ ಇಡಲು ಪ್ರಯತ್ನಿಸುತ್ತಿದೆ. ಉಳಿವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರವನ್ನು ಕೂಡ (ಮಾರ್ಚ 18 ರವರೆಗಿನ ಲೆಕ್ಕದಂತೆ) ಅಷ್ಟೇ ಅಚ್ಚುಕಟ್ಟುತನದಿಂದ ನಿರ್ವಹಿಸಲಾಗಿದೆ ಎಂದರು. ಸಮ್ಮೇಳನಕ್ಕೆ ದೇಣಿಗೆ ನೀಡಿದ ಪ್ರತಿಯೊಬ್ಬರ ಹೆಸರನ್ನು ಕೂಡ ದಾಖಲಿಸಲಾಗಿದೆ ಹಾಗೆಯೇ ಖರ್ಚು ಮಾಡಿದ ಪ್ರತಿಯೊಂದು ಸಂಗತಿಗಳಿಗೂ ಕೂಡ ಬಿಲ್ ಹಾಗೂ ಓಚರ ಇಡಲಾಗಿದೆ. ಕೇಂದ್ರ ಸಾಹಿತ್ಯ ಪರಿಷತ್ತು ತಿಳಿಸಿದ ಹಾಗೆ ಜಿ.ಎಸ್.ಟಿ. ಬಿಲ್ಲನ್ನು ಪಡೆಯಲಾಗಿದೆ. ಒಂದು ಸಂಘಟನೆ ತನ್ನ ಲೆಕ್ಕಪತ್ರವನ್ನು ಶಿಸ್ತಿನಿಂದ, ಅಚ್ಚು ಕಟ್ಟುತನದಿಂದ ಸಾರ್ವಜನಿಕರಿಗೆ ಒಪ್ಪಿಸುವುದು ಕೂಡ ಸಂಘಟನೆಯ ಯಶಸ್ಸಿನ ಭಾಗವಾಗಿರುತ್ತದೆ. ಹಾಗಾಗಿ ನಮ್ಮ ಲೆಕ್ಕಪತ್ರವನ್ನು ಬಹಿರಂಗವಾಗಿಯೇ ನೀಡಲಾಗಿದೆ. ಈ ಜಮಾ ಖರ್ಚು ಲೆಕ್ಕ ಪರಿಶೋಧಕರಿಂದ ಆಡಿಟ್ ಮಾಡಿಸಿದ ನಂತರ ಅದನ್ನು ಸದಸ್ಯರ ಸಭೆ ಕರೆದು ಮಂಡಿಸಲಾಗುತ್ತದೆ ಮತ್ತು ಅದರ ಪರಿಶೀಲರಿಗೂ ಕೂಡ ಸದಸ್ಯರಿಗೆ ಸಮಯಾವಕಾಶ ನೀಡಲಾಗುತ್ತದೆ. ಪರಿಷತ್ತಿನ ಪ್ರತಿಯೊಂದು ಆರ್ಥಿಕ ವ್ಯವಹಾರ ಪಾರದರ್ಶಕವಾಗಿರುತ್ತದೆ. ಇನ್ನು ಸಮ್ಮೇಳದ ಸ್ಮರಣ ಸಂಚಿಕೆ ಮುದ್ರಣ ಕಾರ್ಯ ನಡೆಯುತ್ತಿದ್ದು, ಸ್ಮರಣ ಸಂಚಿಕೆಗೆ ಇನ್ನಷ್ಟು ಜಾಹಿರಾತು ಸಂಗ್ರಹಿಸಿ ಕೊರತೆ ಹಣವನ್ನು ಸರಿದೂಗಿಸಲು ಪ್ರಯತ್ನಿಸಲಾಗುವುದು ಎಂದರು.

ಸಭೆಯಲ್ಲಿ ಉಳವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಜೋಯಿಡಾ ತಹಶೀಲ್ದಾರರ ಪ್ರತಿನಿಧಿಯಾಗಿ ಉಪತಹಶೀಲ್ದಾರ್ ನಿಂಗಣ್ಣ ಮಾವಿನಮಟ್ಟಿ, ಉಪ್ಪಸ್ಥಿತರಿದ್ದು ಲೆಕ್ಕಪತ್ರ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಆನೆ ಹೊಸೂರು, ಕಸಾಪ ಜೋಯಿಡಾ ತಾಲೂಕು ಘಟಕದ ಅಧ್ಯಕ್ಷ ಪಾಂಡುರAಗ ಪಟಗಾರ, ಕಾರ್ಯದರ್ಶಿ ಭಾಸ್ಕರ ಗಾಂವ್ಕರ, ಪ್ರೇಮಾನಂದ ವೇಳಿಪ, ನಿಕಟಪೂರ್ವ ಅಧ್ಯಕ್ಷ ಸುಭಾಶ ಗಾವಡಾ, ಗಾಂಗೋಡಾ ಗ್ರಾ.ಪಂ.ಅಧ್ಯಕ್ಷ ಸುಬ್ರಾಯ ಹೆಗಡೆ, ಜೋಯಿಡಾ ಗ್ರಾ.ಪಂ. ಸದಸ್ಯ ಮಹೇಂದ್ರ ಹರಚಿಲ್ಕರ, ಸಾಹಿತಿ ಆನಂದ ಗೌಡ, ಸಮಾಜ ಸೇವಕಿ ಶಕುಂತಲಾ ಹಿರೇಗೌಡರ, ಮುತ್ತಪ್ಪ ವಠಾರ ಮುಂತಾದವರು ಭಾಗವಹಿಸಿದ್ದರು

error: