
ಭಟ್ಕಳ: ಮನೆಯತ್ತ ಹೆಜ್ಜೆ ಹಾಕುತ್ತಲೇ, ಕಡು ಕತ್ತಲಿನಲ್ಲಿ ಹೊಳೆಯ ನಡುವಿನ ಪೊದೆಯಲ್ಲಿ ಸಿಲುಕಿಕೊಂಡು ಮನೆಯ ದಾರಿ ಕಾಣದೇ ಆತಂಕಕ್ಕೆ ಸಿಲುಕಿದ್ದ ೨ ಹೋರಿಗಳನ್ನು ಭಟ್ಕಳ ತಾಲೂಕಿನ ಅಗ್ನಿಶಾಮಕ ದಳ ರಕ್ಷಿಸಿ ದಡಕ್ಕೆ ಸೇರಿಸಿರುವ ಘಟನೆ ನಡೆದಿದೆ.
ಈ ಹೋರಿಗಳು ತಾಲೂಕಿನ ಮುಟ್ಟಳ್ಳಿ ನಿವಾಸಿ ರಾಘವೇಂದ್ರ ಭಾಸ್ಕರ ನಾಯ್ಕ ಎಂಬುವವರಿಗೆ ಸೇರಿದ್ದಾಗಿದ್ದು, ಬೆಳಿಗ್ಗೆ ಮೇಯಲು ಬಿಟ್ಟ ಹೋರಿಗಳು ಮನೆಗೆ ವಾಪಸ್ಸಾಗಿರಲಿಲ್ಲ. ಸಂಜೆಯಾದರೂ ಹೋರಿಗಳು ಮನೆಗೆ ಬಾರದಿರುವುದನ್ನು ಕಂಡ ರಾಘವೇಂದ್ರ ನಾಯ್ಕ ಹೋರಿಗಳ ಹುಡುಕಾಟದಲ್ಲಿ ತೊಡಗಿದ್ದು, ಹೋರಿಗಳು ಇಲ್ಲಿನ ರೇಲ್ವೆ ನಿಲ್ದಾಣ ಸಮೀಪ, ನಿರ್ಜನ ಪ್ರದೇಶ ತಲಾಂದ ಹೊಳೆಯ ನಡುವಿನ ಪೊದೆಯಲ್ಲಿ ಸಿಲುಕಿಕೊಂಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಕತ್ತಲಿನಲ್ಲಿಯೇ ಹೋರಿಗಳ ರಕ್ಷಣೆಗೆ ವಿಫಲ ಯತ್ನ ನಡೆಸಿದ ಅವರು, ಕೊನೆಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೊಳೆಗೆ ಇಳಿದು ಸತತ ೨ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಹೋರಿಗಳನ್ನು ದಡಕ್ಕೆ ಸೇರಿಸುವಲ್ಲಿ ಸಫಲರಾಗಿದ್ದಾರೆ. ಅಗ್ನಿಶಾಮಕ ದಳದ ಠಾಣಾಧಿಕಾರಿ ರಮೇಶ, ಮನೋಜ ಬಾಡ್ಕರ್, ಪುರುಷೋತ್ತಮ ನಾಯ್ಕ, ಅಕ್ಷಯ ಹಿರೇಮಠ, ಶಿವಪ್ರಸಾದ ನಾಯ್ಕ, ಚೇತನ ಪಾಟೀಲ, ಮೋಹನ ಗೊಂಡ, ವಸಂತ ದೇವಡಿಗ, ನಾರಾಯಣ ಪಟೇಗಾರ ಮತ್ತಿತರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ