May 10, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಕಾಸರಕೋಡ್ ಟೊಂಕ ವಾಣಿಜ್ಯ ಬಂದರು ಪ್ರದೇಶಕ್ಕೆ ಜಿಲ್ಲಾಧಿಕಾರಿಗಳ ಭೇಟಿ, ವಾಣಿಜ್ಯ ಬಂದರು ಬೇಡವೇ ಬೇಡ ಎಂದ ಮೀನುಗಾರರು

ಹೊನ್ನಾವರ: ನಮಗೆ ಯಾವ ಸೌಲಭ್ಯವು ಬೇಡವೇ ಬೇಡ. ನಮ್ಮ ಜೀವನವನ್ನೆ ಕಸಿದುಕೊಳ್ಳುವ ಈ ವಾಣಿಜ್ಯ ಬಂದರು ಕಾಮಗಾರಿ ತಕ್ಷಣವೇ ನಿಲ್ಲಿಸಿ ಎಂದು ಮಹಿಳೆಯರು ಸೇರಿದಂತೆ ನೂರಾರು ಮೀನುಗಾರರು ಜಿಲ್ಲಾಧಿಕಾರಿಗಳಿಗೆ ಗುರುವಾರ ಸಂಜೆ ಮನವಿ ಮಾಡಿಕೊಂಡರು.
ಕಳೆದ ಕೆಲವು ದಿನಗಳ ಹಿಂದೆ ಜಿಲ್ಲಾಡಳಿತ ೫೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಮೀನುಗಾರರರ ಮನೆ ಹಾಗೂ ಶೇಡ್‌ಗಳನ್ನು ತೆರವುಗೊಳಿಸಲು ಮುಂದಾಗಿದ್ದು, ಈ ಬಗ್ಗೆ ತೀರ್ವ ವಿರೋಧ ಉಂಟಾಗಿದ್ದು, ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾದ ಈ ಪ್ರಕರಣದಿಂದ ಜಿಲ್ಲಾ ಉಸ್ತುವಾರಿ ಸಚಿವರು ಮೀನುಗಾರರ ಮುಖಂಡರಿಗೆ ಯಲ್ಲಾಪುರದಲ್ಲಿ ಕರೆದು ಸಭೆ ನಡೆಸಿದ್ದರು.
ಅಂದು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿಗಳು ಸಚಿವರ ಆದೇಶದಂತೆ ಕಾಸರಕೋಡ ಟೊಂಕಕ್ಕೆ ಗುರುವಾರ ಸಂಜೆ ಭೇಟಿ ನೀಡಿದ್ದರು. ಯಾರಿಗೂ ಮಾಹಿತಿ ನೀಡದೆ ಆಕಸ್ಮಿಕವಾಗಿ ಭೇಟಿ ನೀಡಿದ ಜಿಲ್ಲಾಧಿಕಾರಿಗಳ ವಿಷಯ ತಿಳಿದು ನೂರಾರು ಮಹಿಳೆಯರು ಹಾಗೂ ಮೀನುಗಾರರು ಸ್ಥಳದಲ್ಲಿ ಜಮಾಯಿಸಿದ್ದರು.
ರಸ್ತೆಗಾಗಿ ಮೀನುಗಾರರ ಶೆಡ್ ತೆರವುಗೊಳಿಸಿದ ಪ್ರದೇಶದಿಂದ, ಬಂದರು ಕಾಮಗಾರಿ ನಡೆಯುವ ಸ್ಥಳದವರೆಗೆ ಕಾಲು ನಡಿಗೆಯಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಗಳು ಅಲ್ಲಿಯ ಸ್ಥಿತಿಗತಿಗಳನ್ನು ವಿಕ್ಷೀಸಿದರು.
ವಾಣಿಜ್ಯ ಬಂದರು ನಿರ್ಮಾಣಕ್ಕೆ ತುರ್ತು ರಸ್ತೆ ನಿರ್ಮಿಸಲು ಅವಕಾಶ ಮಾಡಿಕೊಡಿ. ನಿಮಗೆ ಯಾವುದೇ ತೊಂದರೆಗಳು ಆಗದಂತೆ ಕಾಮಗಾರಿ ನಿರ್ವಹಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ನೆರೆದ ಮೀನುಗಾರರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ, ಯಾವುದೇ ಬೇಡಿಕೆ ಬಗ್ಗೆಯು ಮಾತನಾಡದ ಮೀನುಗಾರರು ನಮಗೆ ಬೇರೆ ಯಾವುದೇ ಸೌಲಭ್ಯಗಳು ಬೇಡ. ಮೊದಲು ವಾಣಿಜ್ಯ ಬಂದರು ಕೆಲಸವನ್ನು ನಿಲ್ಲಿಸಿ ನಮಗೆ ಬದುಕಲು ಅವಕಾಶ ಮಾಡಿಕೊಡಿ. ನೂರಾರು ಕುಟುಂಬಗಳು ಸಮುದ್ರವನ್ನೆ ನಂಬಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದಾರೆ. ನಮಗೆ ಸಮುದ್ರದಿಂದ ದೂರ ಮಾಡಬೇಡಿ ಎಂದು ತಮ್ಮ ಅಳಲನ್ನು ತೊಡಿಕೊಂಡರು.
ಈ ಸಂದರ್ಬದಲ್ಲಿ ಮಾಸ್ಕ್ ಹಾಕಿ ಮಾತನಾಡಿ ಎಂದ ಜಿಲ್ಲಾಧಿಕಾರಿಗಳಿಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು
ಜಿಲ್ಲಾಧಿಕಾರಿಗಳು, ಸರಿಯಾಗಿ ಮಾಸ್ಕ್ ಹಾಕಿಕೊಳ್ಳಿ ಎಂದು ಗಣೇಶ ತಾಂಡೇಲ್ ಎನ್ನುವವರಿಗೆ ಹೇಳಿದಾಗ, ಅಲ್ಲಿದ್ದ ಮಹಿಳೆಯರು ಆಕ್ರೋಶಗೊಂಡು ಇಂದು ನೀವು ನಮಗೆ ಮಾಸ್ಕ್ ಹಾಕಿ ಎನ್ನುತ್ತಿದ್ದಿರಿ, ಅಂದು ನಮ್ಮ ಮನೆ ಹಾಗೂ ಶೆಡ್‌ಗಳನ್ನ ತೆರವುಗೊಳಿಸಲು ಬೇರೆ ಬೇರೆ ಭಾಗದಿಂದ ಬಂದ ೫೦೦ಕ್ಕೂ ಹೆಚ್ಚು ಪೊಲೀಸರು ತಡೆದು ನಮ್ಮ ಮೇಲೆ ದೌರ್ಜನ್ಯ ತೋರಿದರು. ಆಗ ಯಾವ ಅಧಿಕಾರಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಹಾಕಿಕೊಳ್ಳಿ ಎನ್ನಲಿಲ್ಲ. ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಸುರಿಯುವ ಮಳೆಯಲ್ಲೂ ನಮ್ಮ ಮೇಲೆ ಸವಾರಿ ಮಾಡಿದ್ದಿರಿ ಎಂದು ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮೀನುಗಾರರ ಮುಖಂಡರಾದ ರಾಜೇಶ ತಾಂಡೇಲ್, ಜಗ್ಗು ತಾಂಡೇಲ್, ರಾಜು ತಾಂಡೇಲ್, ಹಮ್ಜಾ ಪಟೇಲ್, ವಿವನ್ ಫರ್ನಾಂಡೀಸ್, ಭಾಸ್ಕರ್ ತಾಂಡೇಲ್, ರಮೇಶ್ ತಾಂಡೇಲ್, ರೇಖಾ ತಾಂಡೇಲ್, ಸುಧಾ ತಾಂಡೇಲ್, ಪ್ರಣಿತಾ ತಾಂಡೇಲ್, ದೀಪಾ ತಾಂಡೇಲ್ ಮುಂತಾದವರು ಉಪಸ್ಥಿತರಿದ್ದರು.

ವರದಿ ವೆಂಕಟೇಶ ಮೇಸ್ತ ಹೊನ್ನಾವರ.

error: